Urdu   /   English   /   Nawayathi

ಹಣ ಕೊಡುವೆ ನಿಲ್ಲಿಸು ಎಂದರೂ ಬೋಟ್ ನಿಲ್ಲಿಸಲಿಲ್ಲ!

share with us

ಕಾರವಾರ: 23 ಜನುವರಿ (ಫಿಕ್ರೋಖಬರ್ ಸುದ್ದಿ) 'ನಾನು ಹದಿನೈದು ವರ್ಷದಿಂದ ಫಿಶಿಂಗ್‌ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಪರ್ಶಿಯನ್‌ ಬೋಟ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಸಂಬಂಧಿಕರಾದ ಪರುಶುರಾಮ ಮತ್ತು ಪತ್ನಿ ಭಾರತಿ, ಸಹೋದರನ ಪತ್ನಿ ನಿರ್ಮಿಲಾ ತಮ್ಮ ಮಕ್ಕಳೊಂದಿಗೆ ಆಗಮಿಸಿದ್ದರು. ಎಲ್ಲರೂ ಸೇರಿ ಹತ್ತು ಜನ. ಜೊತೆಗೆ ನಾನು, ನನ್ನ ಪತ್ನಿ ಸೌಭಾಗ್ಯ ಇದ್ದೆವು. ಆದರೆ ನಾನು, ಪತ್ನಿ ಹಾಗೂ ಸಂಬಂಧಿ ಪರುಶುರಾಮ್‌ ಅವರ ಮಗ ಗಣೇಶ್‌ ಬಿಟ್ಟರೆ ಉಳಿದವರ್ಯಾರೂ ಬದುಕಿ ಉಳಿಯಲಿಲ್ಲ' ಎಂದು ಮೃತ ಪರುಶುರಾಮ ಅವರ ಅತ್ತೆ ಮಗ ಕನಕ್ಕಪ್ಪ ಬಾಳಲಕೊಪ್ಪ ಕಣ್ಣೀರಾದರು. 'ನನ್ನ ಕಣ್ಣೆದುರೇ ಎಲ್ಲರೂ ತೇಲಿ ಹೋದರು. ಪರುಶುರಾಮ ಅವರ ಪತ್ನಿ ಭಾರತಿ ನೀರಲ್ಲಿ ಮುಳುಗಿ ಮೃತಪಟ್ಟರು. ಏನೂ ಮಾಡಲಾಗದ ಸ್ಥಿತಿಯಲ್ಲಿ ನಾವಿದ್ದೆವು. ಸಮುದ್ರದ ಅಲೆಯ ರಭಸಕ್ಕೆ ನಾವು ಬದುಕಿ ಉಳಿದದ್ದೇ ಹೆಚ್ಚು' ಎಂದು ಕರಾಳ ಘಟನೆ ವಿವರಿಸಿದರು. ಹೆಚ್ಚು ಜನರನ್ನು ಹಾಕಿದ್ದೇ ಕಾರಣ: 'ನಾವು ಕೂರ್ಮಗಡ ನರಸಿಂಹ ದೇವರ ಜಾತ್ರೆಗೆ ಬೈತಖೋಲದಿಂದ ತೆರಳಿದ್ದೆವು. ದೇವರ ದರ್ಶನದ ನಂತರ ಕಾರವಾರಕ್ಕೆ ಮರಳಲು ದೋಣಿಗಾಗಿ ಕಾಯುತ್ತಿದ್ದೆವು. ಸಣ್ಣ ಡಿಂಗಿಯಲ್ಲಿ 15 ಜನ ಹತ್ತಿರುವುದು ಕಂಡ ನನ್ನ ಅತ್ತಿಗೆ ಭಾರತಿ ಅವರು ಸಣ್ಣ ಮಕ್ಕಳಿದ್ದಾರೆ. ಚಿಕ್ಕ ದೋಣಿ ಬೇಡ ಎಂದರು. ಅಷ್ಟರಲ್ಲಿ ಯಾಂತ್ರಿಕೃತ ಬೋಟ್ ಬಂತು. ಅದರಲ್ಲಿ ಸೀಟ್ ಕುಳಿತುಕೊಳ್ಳುವಂತೆ ಇದ್ದ ಕಾರಣ ಕುಟುಂಬದವರೆಲ್ಲಾ ದೇವಭಾಗ ಅಡ್ವೆಂಚರ್‌ ಬೋಟಿಂಗ್‌ ಸೆಂಟರ್‌ ಎಂದು ಬರೆದಿರುವ ಬೋಟ್ ಹತ್ತಿದೆವು. ಅದರಲ್ಲಿ 12ಕ್ಕೂ ಹೆಚ್ಚು ಜನ ಇದ್ದರು. ಆ ಬೋಟ್ ಕೋಡಿಭಾಗ ಧಕ್ಕೆಗೆ ಹೋಗುವುದಿತ್ತು. ನಾವು ಬೈತಖೋಲ್‌ಗೆ ಬರಬೇಕಿತ್ತು.'

'ನಾನು ಬೋಟ್ ಇಳಿಯುವಂತೆ ಪರುಶುರಾಮ ಮತ್ತು ಭಾರತಿ ಅವರಿಗೆ ಹೇಳಿದೆ. ಆದರೆ ಬೋಟ್ ಚಾಲಕ ಕೆಲವು ಪ್ರಯಾಣಿಕರನ್ನು ಕೋಡಿಭಾಗದಲ್ಲಿ ಇಳಿಸಿ, ಬೈತಖೋಲ್‌ಕ್ಕೆ ಬಿಡುವುದಾಗಿ ಹೇಳಿದ. ಸ್ವಲ್ಪ ದೂರ ಬೋಟ್ ಚಲಿಸಿದ ನಂತರ ಬೈತಖೋಲ್‌ಗೆ ಹೋಗುವ ದೊಡ್ಡ ಬೋಟ್ ಬಂತು. ಆಗ ಹಣ ಕೊಡುವೆ. ಬೋಟ್ ನಿಲ್ಲಿಸಿ, ನಾವು ಬೈತಖೋಲ್‌ಕ್ಕೆ ಹೋಗುವ ಬೋಟ್ ಹತ್ತುವುದಾಗಿ ವಿನಂತಿಸಿದೆ. ಆದರೂ ಬೋಟ್ ಚಾಲಕ ಕೇಳಲಿಲ್ಲ. ನಾನೇ ಬಿಡುತ್ತೇನೆ ಎನ್ನುತ್ತಾ ದೋಣಿಯನ್ನು ವೇಗವಾಗಿ ಚಲಾಯಿಸಿದ. ಸಮುದ್ರದ ಅಲೆ ರಭಸವಿದ್ದ ಕಾರಣ ದೊಡ್ಡ ಅಲೆಗೆ ಸಿಕ್ಕ ಬೋಟ್ ಪಲ್ಟಿಯಾಯಿತು. ಬೋಟ್ ಮೇಲ್ಛಾವಣಿಗೆ ಕಟ್ಟಿದ ರೂಫ್‌ ಭಾರತಿ ಅವರ ತಲೆಗೆ ಬಡಿಯಿತು. ಮಕ್ಕಳು ಸಮುದ್ರದಲ್ಲಿ ಮುಳುಗಿದರು. ಕ್ಷಣಾರ್ಧದಲ್ಲಿ ಎಲ್ಲವೂ ದುರಂತಮಯವಾಯಿತು. ಮಕ್ಕಳನ್ನು ಬದುಕಿಸಲು ಯತ್ನಿಸಿದೆ. ಆದರೆ, ಆಗಲಿಲ್ಲ. ಇನ್ನೊಂದು ಬೋಟ್‌ನವರು ಗಣೇಶ್‌ ಹಾಗೂ ನನ್ನ ಪತ್ನಿ ಸೌಭಾಗ್ಯಳನ್ನು ರಕ್ಷಿಸಿದ್ದರು. ನಾನು ಸಹ ಸೋತು ಹೋಗಿದ್ದೆ. ಬೋಟ್ನಿಂದ ಬೀಸಿದ ಹಗ್ಗ ಹಿಡಿದು ಬದುಕಿಕೊಂಡೆ' ಎಂದು ಕರಾಳ ಘಟನೆಯನ್ನು ನೆನಪು ಮಾಡಿಕೊಂಡರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا