Urdu   /   English   /   Nawayathi

ಮೇಲ್ಮನೆಯಲ್ಲಿ ಅಗ್ನಿಪರೀಕ್ಷೆ ಗೆದ್ದ ಮೋದಿಯ ಮೇಲ್ವರ್ಗದ ಮೀಸಲಾತಿ ಬಿಲ್..!

share with us

ನವದೆಹಲಿ: 10 ಜನುವರಿ (ಫಿಕ್ರೋಖಬರ್ ಸುದ್ದಿ) ಲೋಕಸಭೆಯಲ್ಲಿ ಬಹುಮತದಿಂದ ನಿನ್ನೆಯಷ್ಟೇ ಅಂಗೀಕೃತವಾಗಿದ್ದ ಮೇಲ್ವರ್ಗದವರಿಗೆ ಶೇ% 10 ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ಮಸೂದೆಗೆ ರಾಜ್ಯಸಭೆಯಲ್ಲೂ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿಗಳ ಸಹಿ ಮಾತ್ರ ಬಾಕಿ ಇದ್ದು, ನಂತರ ಮಸೂದೆ ಜಾರಿಯಾಗಲಿದೆ‌. ಸಂಸತ್ತಿನ ಉಭಯ ಸದನಗಳಲ್ಲಿ ಈ‌ ಮಸೂದೆಯನ್ನು ಬಹುಮತದಿಂದ ಅಂಗೀಕಾರ ಮಾಡಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಕಾನೂನಿನ ತೊಡಕು ಎದುರಾಗುವ ಸಾಧ್ಯತೆ ಇಲ್ಲ. ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಬುಧವಾರ ಮಸೂದೆ ಕುರಿತು ರಾಜ್ಯಸಭೆಯಲ್ಲಿ ವಿವಿರವಾದ ಚರ್ಚೆ ನಡೆಯಿತು. ಅಂತಿಮವಾಗಿ 165 ಮತಗಳ ಮೂಲಕ ಮಸೂದೆಯನ್ನು ಅಂಗೀಕಾರ ಮಾಡಲಾಯಿತು. ಮಂಗಳವಾರ ಮೇಲ್ಜಾತಿ ಮೀಸಲು ವಿಧೇಯಕ ಲೋಕಸಭೆಯಲ್ಲಿ 323 ಮತಗಳೊಂದಿಗೆ ಅಂಗೀಕಾರವಾಗಿತ್ತು. ಇಂದು ರಾಜ್ಯಸಭೆಯಲ್ಲಿಯೂ ಅಂಗೀಕಾರವಾಗಿದ್ದು, ರಾಷ್ಟ್ರಪತಿಗಳಿಗೆ ಕಳುಹಿಸಿ ಕೊಡಲಾಗುತ್ತದೆ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಮೇಲ್ಜಾತಿ ಮೀಸಲು ವಿಧೇಯಕ ಅಂಗೀಕಾರಗೊಳ್ಳುವ ಮೂಲಕ ಸಾಮಾನ್ಯ ವರ್ಗದ ಬಡವರಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿ ಒದಗಿಸಲು ಸಂವಿಧಾನಕ್ಕೆ ತಿದ್ದುಪಡಿ ತರಲು ಒಪ್ಪಿಗೆ ಸಿಕ್ಕಿದಂತಾಗಿದೆ. ಈಗಾಗಲೇ ಮೀಸಲಾತಿ ಪಡೆಯುತ್ತಿರುವ ಸಮುದಾಯಗಳನ್ನು ಹೊರತುಪಡಿಸಿ ಬ್ರಾಹ್ಮಣ, ರಜಪೂತ, ಠಾಕೂರ್, ಜಾಟ್, ಮರಾಠ, ಭೂಮಿಹಾರ್, ಕಾಪು, ಕಮ್ಮ ಸೇರಿದಂತೆ ವಿವಿಧ ಸಮುದಾಯಗಳಿಗೆ ಸಂವಿಧಾನ ತಿದ್ದುಪಡಿಯಿಂದಾಗಿ ಸಹಾಯಕವಾಗಲಿದೆ. ಮಸೂದೆಗೆ ಒಪ್ಪಿಗೆ ಸಿಕ್ಕಿರುವುದರಿಂದ ಸಂವಿಧಾನದ 124ನೇ ಕಾನೂನಿಗೆ ತಿದ್ದುಪಡಿ ತರಲಾಗುತ್ತದೆ. ಈ ಮಸೂದೆ ಸಂಸತ್‌ನಲ್ಲಿ ಪಾಸ್ ಆಗಿದ್ದು, ರಾಷ್ಟ್ರಪತಿಗಳ ಅಂಕಿತ ಬಿದ್ದ ಬಳಿಕ ಕಾನೂನು ಆಗಿ ಜಾರಿಗೆ ಬರಲಿದೆ. ಇದಕ್ಕೂ ಮುನ್ನ  ರಾಜ್ಯಸಭಾ ಕಲಾಪದಲ್ಲಿ ಈ ವಿಧೇಯಕವನ್ನ ಮಂಡನೆ ಮಾಡಲಾಗಿತ್ತು. ಸುದೀರ್ಘ ಚರ್ಚೆಯ ಬಳಿಕ ಮತದಾನ ಪ್ರಕ್ರಿಯೆನಡೆಯಿತು. 124ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸಚಿವ ಥಾವರ್ ಚಾಂದ್ ಗೆಹ್ಲೋಟ್ ರಾಜ್ಯಸಭೆಯಲ್ಲಿ ಮಂಡಿಸಿದರು. ಬೆಳಗ್ಗೆಯಿಂದ ಇದೇ ವಿಷಯಕ್ಕೆ ನಿರಂತರ ಚರ್ಚೆ ನಡೆದು ದಿನದಾಂತ್ಯಕ್ಕೆ ಮತ ಪರಿಗಣನೆ ಆರಂಭವಾಯಿತು. ರಾಜ್ಯಸಭೆಯಲ್ಲಿ ಹಾಜರಿದ್ದ 172 ಸದಸ್ಯರಲ್ಲಿ ತಿದ್ದುಪಡಿ ಪರವಾಗಿ 165 ಸದಸ್ಯರು ಮತ ಚಲಾಯಿಸಿದರೆ, 07 ಮತ ವಿರೋಧವಾಗಿ ಬಂದಿವೆ.

# ಮಸೂದೆಯನ್ನು ಸಂಸದೀಯ ಆಯ್ದ
ಸಮಿತಿ ಪರಾಮರ್ಶೆಗೆ ಕಳುಹಿಸಿಬೇಕು ಎಂದು ವಿಪಕ್ಷಗಳು ಮಂಡಿಸಿದ್ದ ಕೋರಿಕೆಗೆ ಸೋಲುಂಟಾಯಿತು. ವಿಪಕ್ಷಗಳ ಈ ಕೋರಿಕೆಯ ವಿರುದ್ಧ 155 ಮತಗಳು ಮತ್ತು ಪರ 18 ಮತಗಳು ಚಲಾವಣೆಯಾಗುವ ಮೂಲಕ ಮೇಲ್ಜಾತಿಯವರಿಗೆ ಮೀಸಲಾತಿ ನೀಡುವ ಅಂಗೀಕಾರ ಪಡೆಯಿತು. ಇದುವರೆಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇಕಡಾ 50 ರಷ್ಟು ಜಾತಿ ಆಧರಿತ ಮೀಸಲಾತಿ ಇತ್ತು. ಆದರೆ ಇದೀಗ ಉದ್ಯೋಗ ಹಾಗೂ ಶಿಕ್ಷಣದ ಮೇಲಿನ ಮೀಸಲಾತಿಯನ್ನ ಶೇ. 60ಕ್ಕೆ ಹೆಚ್ಚಿಸಿ ಅದರಲ್ಲಿನ ಶೇ.10 ರಷ್ಟು ಮೀಸಲಾತಿಯನ್ನ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಮೀಸಲಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರೋರಿಗೆ ಅನ್ವಯವಾಗಲಿದೆ. ಎನ್ಡಿಎ ಸರ್ಕಾರದ ಸಂವಿಧಾನ ತಿದ್ದುಪಡಿ ಪ್ರಸ್ತಾಪಕ್ಕೆ ಕಾಂಗ್ರೆಸ್, ಎನ್ಸಿಪಿ, ಬಿಜೆಡಿ, ಟಿಎಂಸಿ ಸೇರಿ ಇತರ ಪ್ರತಿಪಕ್ಷಗಳು ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ 2/3ನೇ ಬಹುಮತದ ಮೂಲಕ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿತ್ತು. ಇಂದು ರಾಜ್ಯಸಭೆ ಅಧಿವೇಶನ ಆರಂಭವಾದಾಗಿನಿಂದಲೂ ತಿದ್ದುಪಡಿ ಮಸೂದೆ ಕುರಿತು ನಿರಂತರ ಚರ್ಚೆ ನಡೆದಿತ್ತು. ಇದೇ ನಿಟ್ಟಿನಲ್ಲಿ ರಾಜ್ಯಸಭೆ ಅಧಿವೇಶನವನ್ನು ಒಂದು ದಿನ ವಿಸ್ತರಿಸಲಾಗಿತ್ತು. ಲೋಕಸಭಾ ಚುನಾವಣೆಗೆ ಕೆಲ ತಿಂಗಳು ಬಾಕಿಯಿರುವಾಗ ಈ ಮಸೂದೆ ತಂದಿದ್ದು, ಮೇಲ್ವರ್ಗದ ಮೀಸಲನ್ನು ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಗಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದೂ ಚರ್ಚೆಗಳು ನಡೆದಿದ್ದವು.

# ಕಾವೇರಿದ ಚರ್ಚೆ
ಮೀಸಲಾತಿ ನಿರ್ಧಾರದ ಹಿಂದೆ ಬಿಜೆಪಿಯ ಚುನಾವಣಾ ಗಿಮಿಕ್ ಇದೆ ಎಂದು ಮತ್ತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದವು. ಮೀಸಲಾತಿ ಪ್ರಾಯೋಗಿಕವಾಗಿ ಸಾಮಾನ್ಯ ವರ್ಗದವರಿಗೆ ಅನುಕೂಲವಾಗಲ್ಲ ಎಂದು ಬಿಜೆಡಿಯ ಪ್ರಸನ್ನ ಆಚಾರ್ಯ ಟೀಕಿಸಿದರು. ಈಗಿನ ಕೇಂದ್ರ ಸರ್ಕಾರ ಅತಿಹೆಚ್ಚು ಯೋಜನೆಗಳ ಮೂಲಕ ಜನರನ್ನು ಗೊಂದಲಕ್ಕೀಡುಮಾಡಿದೆ ಎಂದು ಟಿಎಂಸಿಯ ಡೆರೆಕ್ ಒಬ್ರೈನ್ ಹೇಳಿದರು. ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಕೇಂದ್ರ ಸರ್ಕಾರ ಬಡಜನರಿಗೆ ಒಳಿತು ಮಾಡುವ ಉದ್ದೇಶದಿಂದ ಮೀಸಲಾತಿ ಜಾರಿಗೊಳಿಸಿಲ್ಲ. ಹಾಗಿದ್ದಿದ್ದರೆ ಎರಡ್ಮೂರು ವರ್ಷಗಳ ಹಿಂದೆಯೇ ಜಾರಿಗೆ ತಂದಿದ್ದರೆ ನಿಜವಾಗಿ ಜನರಿಗೆ ಉಪಯೋಗವಾಗುತ್ತಿತ್ತು ಎಂದು ಕುಟುಕಿದರು. ಟಿಡಿಪಿಯ ವೈಎಸ್ ಚೌದರಿ ಸಹ ಇದೇ ಮಾತುಗಳಿಂದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

Tweet

ಆರ್ಜೆಡಿಯ ಮನೋಜ್ ಕುಮಾರ್ ಝಾ ಅವರು ವಿಧೇಯಕಕ್ಕೆ ವಿರೋಧವಿದೆ ಎಂದರು. ಅಲ್ಲದೆ, ಇದು ದಲಿತ ವಿರೋಧಿ ಎಂದೂ ಆರೋಪಿಸಿದರು. ಡಿಎಂಕೆಯ ಕನಿಮೊಳಿ, ಸ್ಥಾಯಿಸಮಿತಿ ಎದುರು ತಾರದೆಯೇ ಸಂಸತ್ತನ್ನು ಒತ್ತಡಕ್ಕೆ ಒಳಪಡಿಸಲಾಗುತ್ತಿದೆ. ಇಂದಿಗೂ ಅಸ್ಪೃಶ್ಯತಾಚರಣೆ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರತಿಪಕ್ಷಗಳಿಂದ ಭಾರಿ ವಿರೋಧ ಕೇಳಿಬಂದ ತಕ್ಷಣ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಮಸೂದೆಯನ್ನು ಸಮರ್ಥಿಸಿಕೊಳ್ಳಲು ಮುಂದಾದರು. ಹಿಂದಿನ ಯುಪಿಎ ಸರ್ಕಾರವೇಕೆ ಇಂತಹ ಮಸೂದೆ ಜಾರಿ ಮಾಡಲಿಲ್ಲ. ಈಗೇಕೆ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದೀರಿ ಎಂದು ಕಿಡಿಕಾರಿದರು. ಈ ಮೂಲಕ ಸಬ್ ಕ ಸಾತ್ ಸಬ್ ಕ ವಿಕಾಸ್ ಆಗಲಿದೆ ಎಂದು ಪುನರುಚ್ಛರಿಸಿದರು. ಇದಕ್ಕೆ ಟಾಂಗ್ ನೀಡಿದ ಕಾಂಗ್ರೆಸ್ನ ಕಪಿಲ್ ಸಿಬಲ್, ಸರಿಯಾದ ವಿಧಿ-ವಿಧಾನ ಪಾಲಿಸದೆ ಬಿಜೆಪಿ ಸಂವಿಧಾನದ ಚೌಕಟ್ಟನ್ನೇ ಬದಲಿಸಲು ಹೊರಟಿದೆ. ಈ ತುರ್ತು ಏಕೆ? ಎಂದು ಪ್ರಶ್ನಿಸಿದರು. ಮಸೂದೆ ಮೂಲಕ ಕೆಲವೇ ಜನರಿಗೆ ಅನುಕೂಲ ಮಾಡಲು ಹೊರಟ್ಟಿದ್ದೀರಿ ಎಂದು ಖಾರವಾಗಿ ನುಡಿದರು. ದಲಿತರಿಗೆ ತಿಂಗಳಿಗೆ 15 ಸಾವಿರ ಸಂಬಳವಿದ್ದರೂ ಮೀಸಲಾತಿ ಸರಿಯಾಗಿ ಸಿಗುತ್ತಿಲ್ಲ. ಈಗ ಮೇಲ್ವರ್ಗದವರಿಗೆ 8 ಲಕ್ಷ ಸಂಬಳ ಬಂದರೂ ಮೀಸಲಾತಿಗೆ ಒಳಪಡಲಿದ್ದಾರೆ . ಉದ್ಯೋಗವಿಲ್ಲದಿದ್ದರೂ ನೀವು ಮೀಸಲಾತಿ ನೀಡುತ್ತಿದ್ದೀರಿ. ನಿಮ್ಮ ಉದ್ದೇಶ ಗೊತ್ತು. 2019ರ ಚುನಾವಣೆ ನಂತರ ಅಳಬೇಡಿ ಎಂದು ಛೇಡಿಸಿದರು. ರಾಮ್ ವಿಲಾಸ್ ಪಸ್ವಾನ್ ಅವರು, ಎಲ್ಲರೂ ಮಸೂದೆಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಬಿಎಸ್ಪಿಯ ಸತೀಶ್ ಮಿಶ್ರ, ಬಡ ಜನರಿಗಾಗಿ ಕಾನೂನು ಮಾಡಿ, ಶ್ರೀಮಂತ ಮೇಲ್ವರ್ಗದ ಜನರಿಗಲ್ಲ ಎಂದು ಟೀಕಿಸಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا