Urdu   /   English   /   Nawayathi

ಸ್ಟೇಟ್‌ಬ್ಯಾಂಕ್‌ನಿಂದ ಬಸ್‌ ನಿಲ್ದಾಣ ಸ್ಥಳಾಂತರಕ್ಕೆ ಆಗ್ರಹ

share with us

ಮಹಾನಗರ: 22 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ನಗರದ ಹೃದಯಭಾಗವಾದ ಸ್ಟೇಟ್‌ಬ್ಯಾಂಕ್‌ನಿಂದ ಸರ್ವಿಸ್‌ ಹಾಗೂ ಸಿಟಿ ಬಸ್‌ ನಿಲ್ದಾಣಗಳನ್ನು ಹೊರಗೆ ಸ್ಥಳಾಂತರ ಮಾಡಿದರೆ ಟ್ರಾಫಿಕ್‌, ಫುಟ್‌ಪಾತ್‌, ಪಾರ್ಕಿಂಗ್‌ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯ ಎಂದು  ಸದಾಶಿವ ಎಂಬವರು ಸಲಹೆ ನೀಡಿದರು. ನಗರದ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ನಡೆದ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಕರೆ ಮಾಡಿ ಮಾತನಾಡಿದ ಅವರು, ನಗರದ ಸ್ಟೇಟ್‌ಬ್ಯಾಂಕ್‌ಗೆ ಬರುವ ವಾಹನಗಳನ್ನು ಏಕಮುಖ ಸಂಚಾರ ಮಾಡುವ ಬಗ್ಗೆ ಇತ್ತೀಚೆಗೆ ನಡೆದ ಆರ್‌ ಟಿಎ ಸಭೆಯಲ್ಲಿ ಸಲಹೆಗಳು ಬಂದಿದ್ದವು. ಇದರಿಂದ ತಾತ್ಕಾಲಿಕವಾಗಿ ಸಮಸ್ಯೆ ಪರಿಹಾರವಾಗಬಲ್ಲದು. ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಬಸ್‌ ನಿಲ್ದಾಣವನ್ನೇ ಸ್ಟೇಟ್‌ ಬ್ಯಾಂಕ್‌ನಿಂದ ಹೊರಗೆ ಕೊಂಡೊಯ್ಯಬೇಕು 
ಈ ಬಗ್ಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ಪ್ರತಿಕ್ರಿಯಿಸಿ, ನಗರದ ಸ್ಟೇಟ್‌ಬ್ಯಾಂಕ್‌ ನಿಲ್ದಾಣವನ್ನು ಸ್ಥಳಾಂತರ ಮಾಡಬೇಕು ಎಂಬುದು ನಮ್ಮ ಇಚ್ಛೆಯೂ ಹೌದು. ಇದಕ್ಕೆ ಎಲ್ಲ ಇಲಾಖೆ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ನಗರದ ಪೊಲೀಸ್‌ ಠಾಣೆಯ ಸುತ್ತಮುತ್ತ ಹಲವು ಸಮಯದ ಹಿಂದೆ ಮುಟ್ಟುಗೋಲು ಹಾಕಿದ ವಾಹನಗಳಿದ್ದು, ಅವು ತುಕ್ಕು ಹಿಡಿಯುತ್ತವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಬರ್ಕೆ ನಿವಾಸಿಯೊಬ್ಬರು ದೂರು ನೀಡಿದರು. ಇದಕ್ಕೆ ಕಮಿಷನರ್‌ ಉತ್ತರಿಸಿ, ಪೊಲೀಸ್‌ ಠಾಣೆಗಳಲ್ಲಿ ಕೆಲವೊಂದು ಪ್ರಕರಣಗಳು ಕೋರ್ಟ್‌ನಲ್ಲಿದ್ದು ಅದಕ್ಕೆ ಸಂಬಂಧಿಸಿದ ಹಳೆಯ ವಾಹನಗಳು ಠಾಣೆಯಲ್ಲಿವೆ. ಇನ್ನು ಕೆಲವು ವಾಹನಗಳಿಗೆ ಕೋರ್ಟ್‌ ಬಿಡುಗಡೆಗೊಳಿಸಿ ಅನುಮತಿ ನೀಡಿದರೂ ಅದರ ವಾರಸುದಾರರು ಪಡೆದುಕೊಳ್ಳಲು ಬಂದಿಲ್ಲ. ಇನ್ನೊಂದೆಡೆ ಕೆಲವು ವಾಹನಗಳ ಮಾಲಕರ ಮಧ್ಯೆಯೂ ಗೊಂದಲವಿದೆ. ಹಕ್ಕು ಸ್ವಾಮ್ಯವಿಲ್ಲದ ವಾಹನಗಳನ್ನು ಶೀಘ್ರದಲ್ಲೇ ಟೆಂಡರ್‌ ಹಾಕಲಾಗುವುದು ಎಂದರು. ಜೋಕಟ್ಟೆ ನಿವಾಸಿಯೊಬ್ಬರು ಕರೆ ಮಾಡಿ, ಅಬ್ದುಲ್‌ ಸಲಾಂ ಎಂಬವರು  ಪತ್ತೆಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಪ್ರಕರಣ ಯಾವ ಹಂತದಲ್ಲಿದೆ ಎಂದು ಕೇಳಿದ್ದಕ್ಕೆ ಉತ್ತರಿಸಿದ ಕಮಿಷನರ್‌ 'ಕಚೇರಿಗೆ ಬಂದು ಮಾತನಾಡಿ, ಈ ಬಗ್ಗೆ ವಿವರ ನೀಡಲಾಗುವುದು' ಎಂದರು.

ಟ್ರಾಫಿಕ್‌ ಸಿಬಂದಿ ನೇಮಿಸಿ
ಕಾವೂರು ಜಂಕ್ಷನ್‌ನಲ್ಲಿ ನಾಲ್ಕು ಕಡೆಯಿಂದ ವಾಹನಗಳು ಬರುತ್ತಿರುವುದರಿಂದ ತೀರಾ ಅಪಘಾತ ವಲಯ ಆಗಿದೆ. ಬೆಳಗ್ಗೆ ಮತ್ತು ಸಂಜೆ ಹೊತ್ತು ಟ್ರಾಫಿಕ್‌ ದಟ್ಟಣೆಯಿರುವಾಗ ಈ ಪ್ರದೇಶದಲ್ಲಿ ಟ್ರಾಫಿಕ್‌ ಸಿಬಂದಿ ನೇಮಿಸಿದರೆ ಅವಘಡ ತಡೆಯಲು ಸಾಧ್ಯವಿದೆ ಎಂದು ಮಹಿಳೆಯೊಬ್ಬರು ಸಲಹೆ ನೀಡಿದರು.

ಕೋಡಿಕಲ್‌ ಬಸ್‌ ಸಮಸ್ಯೆ
ಕೋಡಿಕಲ್‌ಗೆ ಪರ್ಮಿಟ್‌ ಇರುವ 61ನಂಬರ್‌ ಬಸ್‌ ಬರುತ್ತಿಲ್ಲ. ಕೇಳಿದರೆ ದುರಸ್ತಿಗೆ ಹೋಗಿದೆ ಎನ್ನುತ್ತಾರೆ. ಪರ್ಯಾಯ ಬಸ್‌ ಕೂಡಾ ಹಾಕಲ್ಲ ಎಂದು ಸಾರ್ವಜನಿಕರೊಬ್ಬರು ನೀಡಿದ ದೂರಿಗೆ ಸ್ಪಂದಿಸಿದ ಕಮಿಷನರ್‌ ಕೂಡಲೇ ಆ ಬಸ್‌ಗಳ ಪರವಾನಿಗೆ ಮುಟ್ಟುಗೋಲು ಹಾಕಲು ಆರ್‌ ಟಿಒಗೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಂಗಳೂರು ನಗರ ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ಹನುಮಂತರಾಯ, ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಉಮಾಪ್ರಶಾಂತ್‌, ಟ್ರಾಫಿಕ್‌ ಇನ್‌ ಸ್ಪೆಕ್ಟರ್‌ ಶಿವಪ್ರಕಾಶ್‌, ಅಮಾನುಲ್ಲಾ, ಎಸ್‌ಐ ರವಿ ಪವಾರ್‌, ಪಿ. ಯೋಗೇಶ್ವರ, ಎಚ್‌ಸಿ ಪುರುಷೋತ್ತಮ, ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಉಪಸ್ಥಿತರಿದ್ದರು.

ಪ್ರತಿಭಟನೆ ನೆಪದಲ್ಲಿ ತೊಂದರೆ ನೀಡಬೇಡಿ
ವೆನ್ಲಾಕ್‌ನಲ್ಲಿ ಗುತ್ತಿಗೆಯಾಧಾರದಲ್ಲಿರುವ ಡಿ ಗ್ರೂಪ್‌ ನೌಕರರು ವೇತನಕ್ಕೆ ಸಂಬಂಧಿಸಿ ಪ್ರತಿಭಟನೆ ಮಾಡುತ್ತಿದ್ದಾಗ ಪೊಲೀಸರು ಅವರ ವಿರುದ್ಧ ಕೇಸು ದಾಖಲಿಸಿದ್ದಾರೆ ಎಂದು ಮಹಿಳೆಯೊಬ್ಬರು ದೂರಿದರು ಇದಕ್ಕೆ ಪ್ರತಿಕ್ರಿಯೆ ನೀಡಿದ ಕಮಿಷನರ್‌ ವೇತನಕ್ಕೆ ಸಂಬಂಧಿಸಿ ಯಾವುದೇ ಸಮಸ್ಯೆಯಿದ್ದರೂ ಸಂಬಂಧಪಟ್ಟ ಗುತ್ತಿಗೆ ಸಂಸ್ಥೆಯ ವಿರುದ್ಧ ದೂರು ನೀಡಿ. ಅದು ಬಿಟ್ಟು ಪ್ರತಿಭಟನೆ ನೆಪದಲ್ಲಿ ಸಾರ್ವಜನಿಕರಿಗೆ, ರೋಗಿಗಳಿಗೆ ತೊಂದರೆ ಮಾಡುವುದು ಸರಿಯಲ್ಲ. ಹಾಗೇನು ತೊಂದರೆಯಿದ್ದರೆ ನೇರ ಇಲಾಖೆಯ ಪ್ರಮುಖರನ್ನು ಭೇಟಿಯಾಗಿ ಸಮಸ್ಯೆ ತಿಳಿಸಿ ಎಂದು ಸಲಹೆ ನೀಡಿದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا