Urdu   /   English   /   Nawayathi

ವಿಷ ಪ್ರಸಾದ ದುರಂತಕ್ಕೆ ಕಾರಣವಾಯಿತೇ ಜಮೀನು ವಿವಾದ, ದ್ವೇಷ, ದೇಗುಲದ ಆದಾಯ ಮೇಲೆ ಕಣ್ಣು?

share with us

ಚಾಮರಾಜನಗರ: 15 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಮಾರಮ್ಮ ದೇವಿಯ ವಿಷ ಪ್ರಸಾದ ಪ್ರಕರಣ ಹಲವು ತಿರುವು ಪಡೆಯುತ್ತಿದ್ದು, ಮೇಲ್ನೋಟಕ್ಕೆ ಪ್ರಸಾದದಲ್ಲಿ ಬೆರೆತಿದ್ದ ವಿಷ 11 ಮಂದಿಯ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದ್ದರೂ, ದುರಂತದ ಹಿಂದೆ ಜಮೀನು ವಿವಾದ, ದ್ವೇಷದ ಕೈವಾಡವಿದೆ ಎಂಬ ಶಂಕೆ ಮೂಡುತ್ತಿದೆ. ಅಲ್ಲಿನ ಗ್ರಾಮಸ್ಥರು ಮತ್ತು ದೇಗುಲದ ಟ್ರಸ್ಟಿಗಳು ಮಾಹಿತಿ ನೀಡಿರುವಂತೆ ದೇವಾಲಯದ ಗೋಪುರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡು ಪಂಗಡಗಳ ನಡುವೆ ವೈಮನಸ್ಯವಿತ್ತು. ಒಂದು ಬಣದ ಮೇಲಿನ ಕೋಪಕ್ಕೆ ಇನ್ನೊಂದು ಬಣದವರೇ ಭಕ್ತರಿಗೆ ನೀಡುವ ಪ್ರಸಾದಲ್ಲಿ ಕೀಟನಾಶಕ ಬೆರೆಸಿ ಪ್ರತೀಕಾರ ತೀರಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಅರಣ್ಯ ಪ್ರದೇಶದಲ್ಲಿರುವ ಈ ಮಾರಮ್ಮ ದೇವಿ ದೇಗುಲ ತುಂಬಾ ಹಳೆಯ ದೇಗುಲವಾಗಿದ್ದು, ತುಂಬಾ ಶಕ್ತಿಶಾಲಿ ದೇಗುಲ ಎಂದು ಸ್ಥಳೀಯ ನಂಬುತ್ತಾರೆ. ಇದೇ ಕಾರಣಕ್ಕೆ ಚಾಮರಾಜನಗರ, ಮೈಸೂರು ಮಾತ್ರವಲ್ಲದೇ ತಮಿಳುನಾಡು ಗಡಿಯ ನೂರಾರು ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಇದೇ ಕಾರಣಕ್ಕೆ ಇಲ್ಲಿನ ಸುತ್ತಮುತ್ತಲ ಇತರೆ ದೇಗುಲಗಳಿಗಿಂತಲೂ ಈ ಮಾರಮ್ಮ ದೇಗುಲದ ಆದಾಯ ಹೆಚ್ಚಿತ್ತು ಎನ್ನಲಾಗಿದೆ. ಈ ಆದಾಯದ ಮೇಲೆ ಕಣ್ಣಿಟ್ಟಿದ್ದ ಕೆಲವರು ಈ ದುಷ್ಕೃತ್ಯ ಮಾಡಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪೂಜಾ ಜವಾಬ್ದಾರಿಗಾಗಿ ಎರಡು ಸಮುದಾಯಗಳ ನಡುವೆ ಜಗಳ

ಇನ್ನು ಶಕ್ತಿಶಾಲಿ ಮಾರಮ್ಮನ ಗುಡಿಯಲ್ಲಿ ಪೂಜೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯಗಳ ನಡುವೆ ಆಗಾಗ ಜಗಳ ಏರ್ಪಡುತ್ತಿತ್ತು ಎನ್ನಲಾಗಿದೆ. ಪ್ರಮುಖವಾದಿ ದೇಗುಲದಲ್ಲಿ ಪೂಜೆ ಮಾಡುವ ಜವಾಬ್ದಾರಿಯನ್ನು ತಮಗೇ ನೀಡಬೇಕು ಎಂದು ಬೇಡ ಮತ್ತು ಜಾಂಬವ ಸಮುದಾಯದ ಮುಖಂಡರು ಕಳೆದ ಹಲವು ವರ್ಷಗಳಿಂದ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಪ್ರಸ್ತುತ ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಈ ಪೈಕಿ ಪೊಲೀಸರ ವಶದಲ್ಲಿರುವ ಶಂಕಿತ ಆರೋಪಿ ಚಿನ್ನಪ್ಪ ಪುತ್ರ ಲೋಕೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ತಮಿಳುನಾಡಿನ ಬ್ರಹ್ಮೇಶ್ವರಿ ದೇವಾಲಯದ ಕಾಳಪ್ಪನವರಿಗೂ ನಮ್ಮ ತಂದೆಗೂ ಆಗುತ್ತಿರಲಿಲ್ಲ. ಮೊದಲು ತಮಿಳುನಾಡಿನ ಅರ್ಚಕರು ದೇವಾಲಯದ ಪೂಜೆ ಮಾಡುತ್ತಿದ್ದರು. ಆದರೆ ಸರಿಯಾದ ರೀತಿಯಲ್ಲಿ ಪೂಜೆ ಮಾಡದ ಕಾರಣ ದೇವಾಲಯದ ಟ್ರಸ್ಟಿ ಆಗಿದ್ದ ನಮ್ಮ ತಂದೆ ಹಾಗೂ ಗ್ರಾಮಸ್ಥರು ಜವಾಬ್ದಾರಿಯನ್ನು ವಹಿಸಿಕೊಂಡರು. ಇದರಿಂದ ಅವರಿಗೆ ದೇವಾಲಯ ಕೈ ತಪ್ಪಿತ್ತು. ಈ ಹಿಂದೆ ಕೂಡ ಸುಮಾರು 1 ಸಾವಿರ ಜನ ಗ್ರಾಮಕ್ಕೆ ಆಗಮಿಸಿ ಜಗಳ ಮಾಡಿದ್ದರು. ಆದರೆ ನಮ್ಮ ಗ್ರಾಮಸ್ಥರು ಊರಿನ ದೇವಾಲಯ ಎಂದು ಅವರಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಹಿಂದಿರುಗಿದ್ದರು.

ನಮ್ಮ ತಂದೆ ಚಿನ್ನಪ್ಪ ದೇವಾಲಯದ ಜವಾಬ್ದಾರಿ ವಹಿಸಿದ್ದರು, ದೇವಾಲಯವನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಮಾಡಲಾಯಿತು. ಇದರಿಂದ ದೇವಾಲಯದ ಆದಾಯದ ಹೆಚ್ಚಾಗುವ ನಿರೀಕ್ಷೆ ಇತ್ತು. ಇದನ್ನು ಸಹಿಸಲಾದ ಮಂದಿ ಈಗ ನಮ್ಮನ್ನು ಕೊಲೆ ಮಾಡಲು ಈ ರೀತಿ ಪ್ಲಾನ್ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ದೇವರ ಪ್ರಸಾದವನ್ನು ಭಕ್ತರಿಗೆ ನೀಡಲು ಮಾಡಿರಲಿಲ್ಲ. ಕೇವಲ ನಮಗಾಗಿ ಸಣ್ಣ ಪ್ರಮಾಣದಲ್ಲಿ ಮಾಡಲಾಗಿತ್ತು. ಆದರೆ ಓಂ ಶಕ್ತಿ ಭಕ್ತರು ಬೇರೆ ದೇವಾಲಯಕ್ಕೆ ಹೋಗುವ ಹಿನ್ನೆಲೆಯಲ್ಲಿ ಪ್ರಸಾದ ಕೇಳಿದ್ದರು. ಆದ್ದರಿಂದಲೇ ನಮಗೆ ಮಾಡಿದ್ದ ಪ್ರಸಾದ ಅವರಿಗೆ ನೀಡಲಾಯಿತು. ಒಂದೊಮ್ಮೆ ಭಕ್ತರು ಪ್ರಸಾದ ಸೇವನೆ ಮಾಡದೇ ಇದ್ದಿದ್ದರೆ ದೇವಾಲಯದ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಮಾತ್ರ ಪ್ರಸಾದ ಸೇವಿಸಿ ಸಾವನ್ನಪ್ಪುತ್ತಿದ್ದರು. ಆದರೆ ಈ ಕುತಂತ್ರಕ್ಕೆ ಭಕ್ತರು ಬಲಿಯಾಗಿದ್ದಾರೆ. ಈ ಹಿಂದೆ ಗ್ರಾಮಕ್ಕೆ ಬಂದ ವೇಳೆಯೂ ನಮಗೇ ದೇವಾಲಯ ನೀಡಬೇಕು ಎಂದು ತಮಿಳುನಾಡು ದೇವಾಲಯದ ಮಂದಿ ಎಚ್ಚರಿಕೆ ನೀಡಿದ್ದರು. ಆಗ ಹಿರಿಯರ ಸಮ್ಮುಖದಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದ್ರೆ ಈ ರೀತಿ ನಮ್ಮ ಮೇಲೆ ದ್ವೇಷ ಸಾಧಿಸುತ್ತಾರೆ ಎಂಬ ಊಹೆಯೂ ನಮಗೆ ಇಲ್ಲ. ಪ್ರಸಾದ ತಯಾರು ಮಾಡಿದ ಅರ್ಚಕರ ಅಂಗವಿಕಲ ಪುತ್ರಿ, ನಮ್ಮ ಸಂಬಂಧಿಯೊಬ್ಬರು ಕೂಡ ಮೃತ ಪಟ್ಟಿದ್ದಾರೆ. ಪ್ರಸಾದ ತಯಾರು ಮಾಡಿದವರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದು, ಆದರೆ ಪೊಲೀಸ್ ಠಾಣೆಯಲ್ಲೇ ಅವರು ಕೂಡ ವಾಂತಿ ಮಾಡಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا