Urdu   /   English   /   Nawayathi

ಮುನಿಸಿಕೊಂಡ ಕಾಂಗ್ರೆಸ್‍ನ ಹಲವು ಹಿರಿಯ ಮುಖಂಡರಿಂದ ಗುಪ್ತ ಸಭೆ

share with us

ಬೆಂಗಳೂರು: 13 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಸಚಿವ ಸಂಪುಟ ನೇಮಕಾತಿ ಸಂದರ್ಭದಲ್ಲಿ ಆದ್ಯತೆ ನೀಡದೆ ಅಲಕ್ಷಿಸಿರುವುದು ಹಾಗೂ ಸಂಪುಟ ವಿಸ್ತರಣೆಯನ್ನು ಅನಗತ್ಯ ವಿಳಂಬ ಮಾಡಿ ನಮ್ಮನ್ನು ಕಡೆಗಣಿಸಲಾಗಿದೆ. ನಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‍ನ ಹಲವು ಹಿರಿಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಪುಟ ನೇಮಕ ಸಂದರ್ಭದಲ್ಲಿ ಕಾಂಗ್ರೆಸ್‍ನ ಹಿರಿಯರಿಗೆ ಅವಕಾಶ ಈ ಬಾರಿ ಇಲ್ಲ. ಎರಡನೇ ಹಂತದ ನಾಯಕರಿಗೆ ಅವಕಾಶ ಕಲ್ಪಿಸೋಣ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಆದರೆ ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ, ನಮ್ಮನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಎಂಟಿಬಿ ನಾಗರಾಜ್, ಎಸ್.ಆರ್.ಪಾಟೀಲ್ ಸೇರಿದಂತೆ ಹಲವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸಂಪುಟ ವಿಸ್ತರಣೆ ಮಾಡುವುದಾಗಿ ಹಲವಾರು ಬಾರಿ ಕಾಂಗ್ರೆಸ್ ಹೈಕಮಾಂಡ್ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತ ಬಂದಿದೆ. ಸಂಪುಟದಲ್ಲಿ ಖಾಲಿ ಇರುವ ಕಾಂಗ್ರೆಸ್ ಪಾಲಿನ 6 ಸ್ಥಾನಗಳನ್ನು ಭರ್ತಿ ಮಾಡುವುದಾಗಿ 6 ತಿಂಗಳಿನಿಂದ ಹೇಳಲಾಗುತ್ತಿದೆ.

ಆದರೆ ಈವರೆಗೆ ಭರ್ತಿ ಮಾಡುವ ಕೆಲಸ ಮಾಡುತ್ತಿಲ್ಲ. ಉತ್ತರ ಕರ್ನಾಟಕದವರಿಗೆ ತೀವ್ರ ಅನ್ಯಾಯ ಮಾಡಲಾಗಿದೆ. ವಿಧಾನಪರಿಷತ್‍ನ ಹಿರಿಯ ಸದಸ್ಯ, ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ಮುಖಂಡ ಎಸ್.ಆರ್.ಪಾಟೀಲ್ ಅವರನ್ನು ಸಭಾಪತಿಯನ್ನಾಗಿಯಾದರೂ ಮಾಡಬಹುದಿತ್ತು. ಆ ಭಾಗದ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಸಿ.ಎಸ್. ಶಿವಳ್ಳಿ, ತುಕಾರಾಂ ಸೇರಿದಂತೆ ಯಾರನ್ನೂ ಸಂಪುಟಕ್ಕೆ ಪರಿಗಣಿಸದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಅದೇ ರೀತಿ 7 ಬಾರಿ ಶಾಸಕರಾಗಿರುವ ರಾಮಲಿಂಗಾರೆಡ್ಡಿ, ಹಿರಿಯರಾದ ರೋಷನ್ ಬೇಗ್, ಎಂ.ಕೃಷ್ಣಪ್ಪ ಅವರನ್ನು ಕೂಡ ಕಾಂಗ್ರೆಸ್ ಪಕ್ಷ ಪರಿಗಣಿಸುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಹೀಗಾಗಿ ಬಹುತೇಕ ಅತೃಪ್ತರು ಅಧಿವೇಶನದಲ್ಲಿ ಭಾಗವಹಿಸಲು ಆಸಕ್ತಿ ತೋರುತ್ತಿಲ್ಲ. ಪಕ್ಷ ಸಂಘಟನೆಗೆ ಚುನಾವಣೆಗಳಿಗೆ ನಮ್ಮನ್ನು ಪಕ್ಷ ಬಳಸಿಕೊಳ್ಳುತ್ತದೆ. ನಾವು ಸಮರ್ಥವಾಗಿ ಕೆಲಸ ಮಾಡುತ್ತೇವೆ. ಆದರೆ ನಮ್ಮನ್ನು ಅಧಿಕಾರದಿಂದ ದೂರ ಇಡಲಾಗಿದೆ. ನಾವು ಮಾಡಿರುವ ತಪ್ಪೇನು? ಪಕ್ಷ ನಿಷ್ಠೆಯೇ ನಮ್ಮ ತಪ್ಪೇ ಎಂದು ಅನೇಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮಾಡಿ ಅಥವಾ ಪುನರ್ ರಚನೆ ಮಾಡಿ. ಹಿರಿಯರಿಗೆ ಅವಕಾಶ ನೀಡಿ. ಮೂಲೆಗುಂಪು ಮಾಡುವ ಕೆಲಸ ಮಾಡಬೇಡಿ. ಲೋಕ ಸಭೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ನಮಗಾಗಿರುವ ನೋವನ್ನು ಎಲ್ಲರೂ ಒಟ್ಟಾಗಿ ಹೈಕಮಾಂಡ್ ಗಮನಕ್ಕೆ ತರೋಣ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಸಚಿವ ಸಂಪುಟ ವಿಸ್ತರಣೆ ವಿಳಂಬದ ಬಗ್ಗೆ ರಾಮಲಿಂಗಾರೆಡ್ಡಿಯವರು ಈಗಾಗಲೇ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಂ.ಬಿ.ಪಾಟೀಲ್ ಅವರು ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎನ್ನುವ ಮೂಲಕ ರಾಜ್ಯ ನಾಯಕತ್ವದ ಅಸ್ತಿತ್ವನ್ನು ಪ್ರಶ್ನಿಸಿದ್ದಾರೆ.  ಸಚಿವಾಕಾಂಕ್ಷಿಗಳಾದ ಹಲವರು ಭಿನ್ನ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಸಂಪುಟ ವಿಸ್ತರಣೆಯ ಅಸಮಾಧಾನದ ಲಾಭವನ್ನು ಪಡೆಯಲು ಬಿಜೆಪಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್‍ನ ಹಿರಿಯರು ಮುನಿಸಿಕೊಂಡರೆ ಪರಿಸ್ಥಿತಿ ಕೈ ಮೀರಲಿದೆ. ಹಾಗಾಗಿ ಹೈಕಮಾಂಡ್ ಮಧ್ಯಪ್ರವೇಶಕ್ಕೆ ಅತೃಪ್ತರು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಮೂರು ರಾಜ್ಯಗಳ ಗೆಲುವಿನ ಜೋಶ್‍ನಲ್ಲಿರುವ ಕಾಂಗ್ರೆಸ್ ಸಂಪುಟ ವಿಸ್ತರಣೆ ಮಾಡುವುದು ಅನುಮಾನ ಎಂಬ ಆತಂಕ ಆಕಾಂಕ್ಷಿಗಳಲ್ಲಿ ಶುರುವಾಗಿದೆ. ಹಾಗಾಗಿ ಅವರು ಹೈಕಮಾಂಡ್ ಮೊರೆ ಹೋಗಲು ತೀರ್ಮಾನಿಸಿದ್ದು ಈ ಸಂಬಂಧ ಕಸರತ್ತು ನಡೆಸಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا