Urdu   /   English   /   Nawayathi

5 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್’ನಿಂದ ‘ಪಂಚ್’

share with us

ನವದೆಹಲಿ: 11 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಮುಂಬರುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಹಾಗೂ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಆದರೆ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಧಿಕಾರಕ್ಕಾಗಿ ತೀವ್ರ ಕಸರತ್ತು ನಡೆಯುತ್ತಿದೆ. ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‍ಎಸ್) ಭರ್ಜರಿ ಜಯ ದಾಖಲಿಸಿದ್ದರೆ, ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಮಿಜೋರಾಂ ನ್ಯಾಷನಲ್ ಫ್ರಂಟ್(ಎಂಎನ್‍ಎಫ್) ಸ್ಪಷ್ಟ ಬಹುಮತ ಗಳಿಸಿದೆ. ಈ ಚುನಾವಣೆ ಫಲಿತಾಂಶದ ಮೂಲಕ ತನ್ನ ಬಲವನ್ನು ಹೆಚ್ಚಿಸಿಕೊಂಡಿರುವ ಕಾಂಗ್ರೆಸ್‍ಗೆ ಮುಂಬರುವ ಲೋಕಸಭಾ ಸಮರವನ್ನು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಎದುರಿಸಲು ಸ್ಪೂರ್ತಿ ನೀಡಿದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಮೂರು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವುದು ಭಾರೀ ಮುಖಭಂಗಕ್ಕೆ ಕಾರಣವಾಗಿದೆ. ಫಲಿತಾಂಶವನ್ನು ಆತ್ಮಾವಲೋಕನ ಮಾಡಿಕೊಂಡು ಪಕ್ಷನ್ನು ಮುಂದಿನ ಚುನಾವಣೆಗೆ ಸಜ್ಜುಗೊಳಿಸಬೇಕಾದ ಅನಿವಾರ್ಯತೆ ಈಗ ಬಿಜೆಪಿಗೆ ಎದುರಾಗಿದೆ.

2019ರ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಕಾರ್ಯ ಇಂದು ಆಯಾ ರಾಜ್ಯಗಳಲ್ಲಿ ವ್ಯಾಪಕ ಬಂದೋಬಸ್ತ್ ನಡುವೆ ನಡೆಯಿತು. ತೆಲಂಗಾಣ, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‍ಗಢ ಮತ್ತು ಮಿಜೋರಾಂ ರಾಜ್ಯಗಳ ಚುನಾವಣೆಗಾಗಿ ಒಟ್ಟು 1,74,724 ವಿದ್ಯುನ್ಮಾನ ಮತ.

# ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಜಯಭೇರಿ:
ಛತ್ತೀಸ್‍ಗಢದಲ್ಲಿ ಎರಡನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಯಕೆ ಹೊಂದಿದ್ದ ಮುಖ್ಯಮಂತ್ರಿ ರಮಣ್‍ಸಿಂಗ್ ನೇತೃತ್ವದ ಬಿಜೆಪಿಗೆ ಈ ಫಲಿತಾಂಶದಿಂದ ಭಾರೀ ಮುಖಭಂಗವಾಗಿದೆ. ಈ ರಾಜ್ಯದಲ್ಲಿ ಕಾಂಗ್ರೆಸ್ ವಿಜಯ ದುಂದುಭಿ ಮೊಳಗಿಸಿದ್ದು, 15 ವರ್ಷಗಳ ನಂತರ ಬಿಜೆಪಿ ಭದ್ರಕೋಟೆ ಕೈವಶವಾಗಿದೆ.

# ಮಧ್ಯಪ್ರದೇಶದಲ್ಲಿ ಕೈ-ಕಮಲ ಪೈಪೋಟಿ :
ಚುನಾವಣಾ ಪೂರ್ವ ಫಲಿತಾಂಶದಂತೆ ಬಿಜೆಪಿಯ ಭದ್ರಕೋಟೆ ಎನಿಸಿದ್ದ ಮಧ್ಯಪ್ರದೇಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ 113 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸರ್ಕಾರ ರಚನೆ ಕಸರತ್ತಿನಲ್ಲಿ ತೊಡಗಿದೆ. ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್ (108) ಸಹ ಅಧಿಕಾರ ಗದ್ದುಗೇರೆಗೆ ಏರಲು ತೀವ್ರ ಯತ್ನಗಳನ್ನು ಮುಂದುವರಿಸಿದೆ. ಮಾಯಾವತಿ ನೇತೃತ್ವದ ಬಿಎಸ್‍ಪಿ 5 ಸ್ಥಾನಗಳು ಹಾಗೂ ಇತರರ 4 ಸ್ಥಾನಗಳನ್ನು ಗೆದ್ದುಕೊಂಡಿವೆ. ಈ ಹಿನ್ನೆಲೆಯಲ್ಲಿ ಮ್ಯಾಜಿಕ್ ನಂಬರ್ 116 ಗಳಿಸಲು ಅನ್ಯ ಪಕ್ಷಗಳ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ. ಮತ ಎಣಿಕೆ ಆರಂಭದಿಂದಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಪೈಪೋಟಿಗೆ ಸಾಕ್ಷಿಯಾಗಿತ್ತು. ಎರಡನೇ ಬಾರಿ ಗದ್ದುಗೇರಲು ತವಕಿಸುತ್ತಿದ್ದ ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚವಾಣ್‍ಗೆ ಈ ಬಾರಿ ಹಾದಿ ಕಠಿಣವಾಗಿದೆ.   230 ಸದಸ್ಯ ಬಲದ ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಲಭಿಸದಿರುವ ಹಿನ್ನೆಲೆಯಲ್ಲಿ ಈ ಎರಡೂ ಪಕ್ಷಗಳಿಗೂ ಇತರ ಪಕ್ಷಗಳ ಬೆಂಬಲ ಪಡೆಯುವ ಅನಿವಾರ್ಯತೆ ಎದುರಾಗಿದೆ. ಮಧ್ಯಪ್ರದೇಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದರೂ ಬಿಎಸ್‍ಪಿ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಕಾಂಗ್ರೆಸ್ ತವಕಿಸುತ್ತಿದೆ.

# ರಾಜಸ್ತಾನದಲ್ಲಿ ಅಧಿಕಾರಕ್ಕೆ ಕೈ ಕಸರತ್ತು:
ಮುಖ್ಯಮಂತ್ರಿ ವಸುಂಧರಾ ರಾಜೇ ನೇತೃತ್ವದ ಆಡಳಿತರೂಢ ಬಿಜೆಪಿಗೆ ರಾಜಸ್ತಾನದಲ್ಲಿ ಹಿನ್ನಡೆಯಾಗಿದೆ. ಬಿಜೆಪಿ ಭದ್ರಕೋಟೆಯನ್ನು ನುಚ್ಚುನೂರು ಮಾಡಿರುವ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಅನ್ಯ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಮುಂದಾಗಿದೆ. ರಾಜಸ್ತಾನದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಪ್ರತಿಷ್ಠಾಪಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಕ್ಷಾಂಕ್ಷೆಗೆ ಈ ಫಲಿತಾಂಶ ದೊಡ್ಡ ನಿರಾಸೆ ಉಂಟು ಮಾಡಿದೆ.199 ಸದಸ್ಯ ಬಲದ ರಾಜಸ್ತಾನದಲ್ಲಿ ಕಾಂಗ್ರೆಸ್-90 ಸ್ಥಾನಗಳನ್ನು ಗಳಿಸಿದ್ದರೆ, ಬಿಜೆಪಿ-85, ಬಿಎಸ್‍ಪಿ-3 ಮತ್ತು ಇತರ ಪಕ್ಷಗಳು 20 ಸ್ಥಾನಗಳನ್ನು ಪಡೆದಿವೆ. ಇಲ್ಲಿಯೂ ಕೂಡ ಇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಕಸರತ್ತು ಮುಂದುವರಿಸಿವೆ.

# ತೆಲಂಗಾಣದಲ್ಲಿ ಮತ್ತೆ ಕೆಸಿಆರ್ ಪ್ರಾಬಲ್ಯ:
ತೆಲಂಗಾಣ ರಾಜ್ಯದಲ್ಲಿ ನಿರೀಕ್ಷೆಯಂತೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‍ಎಸ್) ಭರ್ಜರಿ ಗೆಲುವ ಸಾಧಿಸಿದೆ. ಈ ರಾಜ್ಯದಲ್ಲಿ ಪ್ರಾಬಲ್ಯ ಸಾಧಿಸಬೇಕೆಂಬ ಬಿಜೆಪಿ ಮತ್ತು ಕಾಂಗ್ರೆಸ್ ಮಿತ್ರಕೂಟಗಳಿಗೆ ಈ ಫಲಿತಾಂಶದಿಂದ ಭಾರೀ ಹಿನ್ನಡೆ ಉಂಟು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಆಧ್ಯಕ್ಷ ರಾಹುಲ್ ಗಾಂಧಿ ಅವರು ವರ್ಚಸ್ಸನ್ನು ತಮ್ಮ ರಾಜ್ಯದಲ್ಲಿ ಮೂಲೆಗುಂಪು ಮಾಡುವಲ್ಲಿ ಯಶಸ್ವಿಯಾದ ಟಿಆರ್‍ಎಸ್ ಮುಖ್ಯಸ್ಥರೂ ಆಗಿರುವ ಚಂದ್ರಶೇಖರ್ ರಾವ್ ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆಗೇರಲು ಸಜ್ಜಾಗಿದ್ದಾರೆ ಟಿಆರ್‍ಎಸ್ 87 ಸ್ಥಾನಗಳೊಂದಿಗೆ ಸ್ಪಷ್ಟ ಬಹಮತ ಗಳಿಸಿದೆ.

# ಮಿಜೋರಾಂ ಎಂಎನ್‍ಎಫ್ ವಶ:
ಈಶಾನ್ಯ ರಾಜ್ಯ ಮಿಜೀರಾಂನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಮುಖಭಂಗವಾಗಿದ್ದು, ಎಂಎನ್‍ಎಫ್ ಸರಳ ಬಹುಮತದೊಂದಿಗೆ ಅಧಿಕಾರ ಗದ್ದುಗೇರಲು ಸಜ್ಜಾಗಿದೆ.   ಈಶಾನ್ಯ ರಾಜ್ಯ ಮಿಜೋರಾಂನ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಲಾಲ್ ಥಾನ್‍ಹವ್ಲಾ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಚಾಂಪೈ ಸೌತ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರನ್ನು ಮಿಜೋರಾಂ ನ್ಯಾಷನಲ್ ಫ್ರಂಟ್(ಎಂಎನ್‍ಎಫ್) ನಾಯಕ ಟಿ.ಜೆ.ಲಾಲ್‍ನನ್‍ಥ್ಲೌಂಗಾ ಅವರು 856 ಮತಗಳಿಂದ ಪರಾಭವಗೊಳಿಸಿದ್ದಾರೆ. ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್‍ನನ್ನು ಪರಾಭವಗೊಳಿಸಿರುವ ಎಂಎನ್‍ಎಫ್ ಸರ್ಕಾರ ರಚನೆಗೆ ಸಿದ್ದವಾಗಿದೆ.   40 ಸದಸ್ಯ ಬಲದ ಮಿಜೋರಾಂನಲ್ಲಿ ಎಂಎನ್‍ಎಫ್ 29 ಸ್ಥಾನಗಳು, ಕಾಂಗ್ರೆಸ್ 6, ಇತರ ಪಕ್ಷಗಳು 4 ಹಾಗೂ ಬಿಜೆಪಿ 1 ಸ್ಥಾನ ಗಳಿಸಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا