Urdu   /   English   /   Nawayathi

ವನಪಾಲಕನ ‘ಘೋರ ದುರ್ವರ್ತನೆ’ಗೆ ₹15,755 ದಂಡ!

share with us

ಬೆಂಗಳೂರು: 02 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) 200 ಗಿಡಗಳನ್ನು ನೆಡದೆ ಹಣ ದುರುಪಯೋಗ ಮಾಡಿರುವ ಪ್ರಕರಣವನ್ನು ‘ಘೋರ ದುರ್ವರ್ತನೆ ಹಾಗೂ ನಿರ್ಲಕ್ಷ್ಯ’ ಎಂದು ಪರಿಗಣಿಸಿರುವ ಅರಣ್ಯ ಇಲಾಖೆ, ಆರೋಪಿ ಸ್ಥಾನದಲ್ಲಿರುವ ನಿವೃತ್ತ ವನಪಾಲಕನಿಂದ 15,755 ವಸೂಲಿ ಮಾಡಲು ಆದೇಶಿಸಿದೆ. ಸಂಡೂರು ತಾಲ್ಲೂಕಿನ ವಿಠಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಮಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) 450 ಗಿಡಗಳನ್ನು ನೆಡಲು 1 ಲಕ್ಷ ಮೀಸಲು ಇಡಲಾಗಿತ್ತು. ಆಗ ಸಣ್ಣ ಸಮ್ಯ ನಾಯಕ್‌ ವನಪಾಲಕರಾಗಿದ್ದರು. ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡುವ ಶಾಸ್ತ್ರ ನಡೆದಿತ್ತು. ಇದರಲ್ಲಿ ಹಣ ದುರುಪಯೋಗವಾಗಿದೆ ಎಂದು ಸ್ಥಳೀಯರೊಬ್ಬರು ಲೋಕಾಯುಕ್ತರಿಗೆ ದೂರು ನೀಡಿದರು.

ಉಪಲೋಕಾಯುಕ್ತರು ಪ್ರಕರಣದ ತನಿಖೆ ನಡೆಸಿ ಹಣ ದುರುಪಯೋಗ ಆಗಿರುವುದು ನಿಜ ಎಂದು ವರದಿ ಸಲ್ಲಿಸಿದರು. ಸಣ್ಣ ಸಮ್ಯನಾಯಕ್‌ ಕೆಲಸದಿಂದ ನಿವೃತ್ತರಾಗಿರುವ ಕಾರಣಕ್ಕೆ ಅವರ ನಿವೃತ್ತಿ ಸೌಲಭ್ಯದಿಂದ ಶೇ 10ರಷ್ಟನ್ನು 5 ವರ್ಷಗಳ ಅವಧಿಗೆ ಕಡಿತ ಮಾಡಬೇಕು ಹಾಗೂ ಸರ್ಕಾರಕ್ಕೆ ಉಂಟಾಗಿರುವ ಆರ್ಥಿಕ ನಷ್ಟಕ್ಕೆ 15,755 ವಸೂಲಿ ಮಾಡಬೇಕು ಎಂದು ಶಿಫಾರಸು ಮಾಡಿದರು. ಅದರ ಆಧಾರದಲ್ಲಿ ಅರಣ್ಯ ಇಲಾಖೆಯಲ್ಲಿ ವಿಚಾರಣೆ ನಡೆಯಿತು. ‘ಯೋಜನೆಯಡಿ 200 ಗಿಡಗಳನ್ನು ನೆಡಲಾಗಿದೆ. ಇದಕ್ಕೆ ಅಲ್ಲಿ ಉಳಿದಿರುವ ಸಸಿಗಳು ಹಾಗೂ ಸಸಿಗಳನ್ನು ನೆಡಲು ತೋಡಿರುವ ಗುಂಡಿಗಳೇ ಸಾಕ್ಷಿ’ ಎಂದು ಸಣ್ಣ ಸಮ್ಯನಾಯಕ್‌ ಸಮರ್ಥಿಸಿಕೊಂಡರು. ಸ್ಥಳದಲ್ಲಿ ಬೆರಳೆಣಿಕೆ ಗಿಡಗಳ ಸಸಿಗಳಿದ್ದು, ಕಾಮಗಾರಿ ನಡೆಸಿರುವ ಕುರುಹುಗಳಿಲ್ಲ ಎಂದು ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ವರದಿ ನೀಡಿದರು. ಗಿಡಗಳನ್ನು ನೆಡಲಾಗಿದೆ ಎಂದು ಹಿಂದಿನ ಮುಖ್ಯೋಪಾಧ್ಯಾಯರು ಸಾಕ್ಷಿ ಹೇಳಿದರು. ಯಾವುದೇ ಗಿಡಗಳನ್ನು ನೆಟ್ಟಿಲ್ಲ ಎಂದು ಹಾಲಿ ಮುಖ್ಯೋಪಾಧ್ಯಾಯರು ತಿಳಿಸಿದರು.

‘ಆರೋಪಿ ಸ್ಥಾನದಲ್ಲಿರುವವರು ಕಾಮಗಾರಿ ಪ್ರಾರಂಭದ ಛಾಯಾಚಿತ್ರಗಳನ್ನಷ್ಟೇ ನೀಡಿದ್ದಾರೆ. ಕಾಮಗಾರಿ ಪ್ರಗತಿಯಲ್ಲಿದ್ದ ಹಾಗೂ ಪೂರ್ಣಗೊಂಡ ಛಾಯಾಚಿತ್ರಗಳನ್ನು ನೀಡಿಲ್ಲ. ಕಾಮಗಾರಿ ಸಮರ್ಪಕವಾಗಿ ನಡೆಯದೆ ಸರ್ಕಾರಕ್ಕೆ 31,511 ನಷ್ಟವಾಗಿದೆ. ಅದರಲ್ಲಿ ವನಪಾಲಕ ಹಾಗೂ ವಿಠಲಾಪುರ ಗ್ರಾಮ ಪಂಚಾಯಿತಿ ಹಿಂದಿನ ಪಿಡಿಒ ಅವರಿಂದ ತಲಾ 15,755 ವಸೂಲಿ ಮಾಡಬೇಕು’ ಎಂದು ವಿಚಾರಣಾಧಿಕಾರಿ ಅಭಿಪ್ರಾಯಪಟ್ಟರು. ವನಪಾಲಕ ಮಾಡಿರುವ ಹಣ ದುರುಪಯೋಗವನ್ನು ಘೋರ ದುರ್ವರ್ತನೆ ಎಂದು ಪರಿಗಣಿಸಿದ ಅರಣ್ಯ ಇಲಾಖೆ, ಹಣ ವಸೂಲಿ ಮಾಡಲು ನಿರ್ಧರಿಸಿತು. ಈ ಮೊತ್ತವನ್ನು ನಿವೃತ್ತ ವನಪಾಲಕನ ನಿವೃತ್ತಿ ಸೌಲಭ್ಯದಿಂದ ಏಕಗಂಟಿನಲ್ಲಿ ವಸೂಲಿ ಮಾಡಲು ಅರಣ್ಯ ಇಲಾಖೆ ಗುರುವಾರ ಆದೇಶಿಸಿದೆ. ‘ಇಲಾಖೆಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಹತ್ತಾರು ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತರು ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಅಷ್ಟೇ. ಬೇರೆ ಯಾವ ಕ್ರಮವೂ ಆಗಿಲ್ಲ. ಆದರೆ, ತಳಹಂತದ ಅಧಿಕಾರಿಯ ತಪ್ಪನ್ನು ಕಠಿಣ ಶಬ್ದಗಳಲ್ಲಿ ವಿಶ್ಲೇಷಿಸಲಾಗಿದೆ. ಇದು ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತೆ ಆಗಿದೆ’ ಎಂದು ಅಧಿಕಾರಿಯೊಬ್ಬರು ವ್ಯಾಖ್ಯಾನಿಸಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا