Urdu   /   English   /   Nawayathi

ಕರ್ತಾರಪುರ ಕಾರಿಡಾರ್‌ಗೆ ಇಮ್ರಾನ್‌ ಅಡಿಗಲ್ಲು

share with us

ಕರ್ತಾರಪುರ: 29 ನವೆಂಬರ್ (ಫಿಕ್ರೋಖಬರ್ ಸುದ್ದಿ) ಪಾಕಿಸ್ತಾನದ ಕರ್ತಾರಪುರದಲ್ಲಿರುವ ಗುರುದ್ವಾರ ದರ್ಬಾರ್‌ ಸಾಹಿಬ್‌ ಮಂದಿರದಿಂದ, ಭಾರತದ ಪಂಜಾಬ್‌ನಲ್ಲಿರುವ ದೇರಾ ಬಾಬಾ ನಾನಕ್‌ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರಪುರ ಕಾರಿಡಾರ್‌ ನಿರ್ಮಾಣ ಕಾಮಗಾರಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ಖಾನ್‌ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು. ಕರ್ತಾರಪುರ ಸಿಖ್‌ ಧರ್ಮಗುರು ಗುರುನಾನಕ್‌ದೇವ್‌ರ ಐಕ್ಯಸ್ಥಳ. ಭಾರತೀಯ ಸಿಖ್‌ ಯಾತ್ರಿಕರಿಗೆ ವೀಸಾ ಮುಕ್ತ ಸಂಚಾರ ಸೌಲಭ್ಯ ಕಲ್ಪಿಸುವ ಈ ಕಾರಿಡಾರ್‌ 4 ಕಿ.ಮೀ. ಉದ್ದವಿರಲಿದೆ. ಇನ್ನು, 6 ತಿಂಗಳಲ್ಲಿ ಕಾಮಗಾರಿ ಮುಕ್ತಾಯವಾಗುವ ನಿರೀಕ್ಷೆ ಇದೆ. ಮುಂದಿನ ವರ್ಷ ಗುರು ನಾನಕ್‌ ಅವರ 550ನೇ ಜನ್ಮದಿನೋತ್ಸವದ ನಿಮಿತ್ತ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಗುರುನಾನಕ್‌ ಅವರ ಜನ್ಮದಿನಾಚರಣೆ ನಿಮಿತ್ತ ಪ್ರತಿ ವರ್ಷ ಸಾವಿರಾರು ಸಿಖ್‌ ಯಾತ್ರಿಗಳು ಕರ್ತಾರಪುರಕ್ಕೆ ಭೇಟಿ ನೀಡುತ್ತಾರೆ.

ಬಾದಲ್‌, ಪುರಿ, ಸಿಧು ಭಾಗಿ: ಕೇಂದ್ರ ಸಚಿವೆ ಹರ್‌ಸಿಮ್ರತ್‌ ಕೌರ್‌ ಬಾದಲ್‌, ಸಚಿವ ಹರ್‌ದೀಪ್‌ಸಿಂಗ್‌ ಪುರಿ, ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸೋಮವಾರ ಭಾರತವು ಕಾರಿಡಾರ್‌ ನಿರ್ಮಾಣಕ್ಕೆ  ಪಂಜಾಬ್‌ನ ಗುರುದಾಸಪುರ ಜಿಲ್ಲೆಯ ಮನ್‌ ಗ್ರಾಮದಲ್ಲಿ ಶಂಕುಸ್ಥಾಪನೆ ನೆರವೇರಿಸಿತ್ತು. ಈ ಕಾರಿಡಾರ್‌ ನಿರ್ಮಾಣದಿಂದ ಉಭಯ ದೇಶಗಳ ಸಂಬಂಧ ಸುಧಾರಣೆಯಲ್ಲಿ ಪರಿಣಾಮ ಬೀರಲಿದೆ.

‘ಭಾರತದ ಜತೆ ಬಲಿಷ್ಠವಾದ ಒಪ್ಪಂದ ಬಯಸುತ್ತೇವೆ’
‘ಕಾಶ್ಮೀರ ವಿವಾದ ಸೇರಿದಂತೆ ಉಭಯ ದೇಶಗಳ ನಡುವಣ ಎಲ್ಲ ವಿಷಯಗಳ ಚರ್ಚೆ ಮತ್ತು ಪರಿಹಾರಕ್ಕಾಗಿ ಭಾರತದೊಂದಿಗೆ ಬಲಿಷ್ಠವಾದ ಒಪ್ಪಂದ ಮಾಡಿಕೊಳ್ಳಲು ಪಾಕಿಸ್ತಾನ ಬಯಸುತ್ತದೆ’ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ. ‘ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಸದಾ ಸಿದ್ಧರಿದ್ದೇವೆ. ನಾವೆಲ್ಲರೂ ಒಗ್ಗೂಡಿ ಹೆಜ್ಜೆ ಇಡಬೇಕಾಗಿದೆ. ನಾಗರಿಕ ಒಪ್ಪಂದ ನಮ್ಮ ನಡುವೆ ಆಗಬೇಕು. ಕೇವಲ ಕಾಶ್ಮೀರ ವಿಷಯವೊಂದೇ ನಮ್ಮ ನಡುವಿನ ಸಮಸ್ಯೆಯಾಗಿದೆ. ಚಂದ್ರನ ಮೇಲೆಯೇ ಮಾನವ ಕಾಲಿಟ್ಟು ಬಂದಿದ್ದಾನೆ. ಜಗತ್ತಿನಲ್ಲಿ ಇತ್ಯರ್ಥಪಡಿಸಲಾಗದ ಸಮಸ್ಯೆ ಯಾವುದಾದರೂ ಇದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ. ‘ರಾಜಕಾರಣಿಗಳು ನಾವು ಒಗ್ಗೂಡಿ ಇರಬೇಕೆಂದು ಬಯಸುತ್ತಿದ್ದಾರೆ. ಆದರೆ, ಸೇನೆಗೆ ಉಭಯ ದೇಶಗಳ ನಡುವೆ ಸ್ನೇಹ ಇಷ್ಟವಿಲ್ಲ. ಎರಡೂ ದೇಶಗಳ ನಾಗರಿಕರು ಶಾಂತಿಯನ್ನು ಬಯಸುತ್ತಿದ್ದಾರೆ. ನಾಯಕರೂ ಇದೇ ಮನೋಭಾವ ಹೊಂದಬೇಕಾದ ಅಗತ್ಯವಿದೆ’ ಎಂದು ಇಮ್ರಾನ್‌ ಖಾನ್‌ ಹೇಳಿದರು.

‘ಸಿಧು ಪಾಕಿಸ್ತಾನದಲ್ಲೂ ಗೆಲ್ಲಬಲ್ಲರು’
‘ಪಂಜಾಬ್‌ ಸಚಿವ ನವಜೋತ್‌ಸಿಂಗ್‌ ಸಿಧು ಪಾಕಿಸ್ತಾನದಲ್ಲಿ ಚುನಾವಣೆಗೆ ಸ್ಪರ್ಧಿಸಿದರೂ ಸುಲಭವಾಗಿ ಗೆಲ್ಲುತ್ತಾರೆ’ ಎಂದು ಇಮ್ರಾನ್‌ ಖಾನ್‌ ಹೇಳಿದರು. ‘ಉಭಯ ದೇಶಗಳ ನಡುವೆ ಸಂಬಂಧ ಸುಧಾರಣೆಗೆ, ಶಾಂತಿ ಸ್ಥಾಪನೆಗೆ ಸಿಧು ಶ್ರಮಿಸುತ್ತಿದ್ದಾರೆ. ಆದರೆ, ಅವರ ವಿರುದ್ಧವೇ ಕೆಲವರು ಏಕೆ ಬೊಬ್ಬೆ ಹಾಕುತ್ತಿದ್ದಾರೋ ತಿಳಿಯುತ್ತಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನವಜೋತ್‌ ಸಿಧು ವಿರುದ್ಧ ಬಿಜೆಪಿ,ಅಕಾಲಿ‌ದಳ ಆಕ್ರೋಶ
ಚಂಡೀಗಡ (ಪಿಟಿಐ): ಪಾಕಿಸ್ತಾನಕ್ಕೆ ಭೇಟಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಯೋಚಿಸಿ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಹೇಳಿದ ನಡುವೆಯೂ, ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಚಿವ ಸಿಧು ವಿರುದ್ಧ 
ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ (ಎಸ್‌ಎಡಿ) ಆಕ್ರೋಶ ವ್ಯಕ್ತಪಡಿಸಿವೆ.

‘ಮುಖ್ಯಮಂತ್ರಿಯವರ ಮಾತನ್ನು ಮೀರಿ ಸಿಧು ಮತ್ತೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಸಂಪುಟದಲ್ಲಿ ಮುಂದುವರಿಯುವ ನೈತಿಕತೆ ಅವರಿಗೆ ಇಲ್ಲ’ ಎಂದು ಎಸ್‌ಎಡಿ ವಕ್ತಾರ ದಲ್ಜಿತ್‌ಸಿಂಗ್‌ ಚೀಮಾ ಹೇಳಿದ್ದಾರೆ. ‘ಸಚಿವರಾದವರು ಸಂಪುಟದ ಭಾಗ. ಅವರು ಸರ್ಕಾರದ ಎಲ್ಲ ನೀತಿಗಳನ್ನು ಪಾಲಿಸಬೇಕಾಗುತ್ತದೆ. ಆದರೆ, ತನ್ನ ಮುಖ್ಯಮಂತ್ರಿಯ ಮಾತನ್ನೇ ಸಿಧು ಕೇಳುವುದಿಲ್ಲ’ ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ತರುಣ್‌ ಛುಗ್ ಟೀಕಿಸಿದ್ದಾರೆ.

ಸೇನಾ ಮುಖ್ಯಸ್ಥರ ಜತೆ ಖಲಿಸ್ತಾನ್‌ ನಾಯಕರು
ಶಿಲಾನ್ಯಾಸ ಸಮಾರಂಭದಲ್ಲಿ ಖಲಿಸ್ತಾನ್‌ ಪರ ಪ್ರತ್ಯೇಕತಾವಾದಿ ಪ್ರಮುಖ ನಾಯಕರು ಹಾಜರಾಗಿದ್ದು ಅಚ್ಚರಿ ಮೂಡಿಸಿತು. ಜತೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್‌ ಖಮರ್‌ ಜಾವೇದ್‌ ಬಜ್ವಾ ಅವರಿಗೆ ಹಸ್ತಾಲಾಘವ ನೀಡಿದ್ದ ಎಲ್ಲರ ಹುಬ್ಬೇರಿಸಿತು. ಪ್ರಮುಖವಾಗಿ ಹಾಜರಿದ್ದ ಖಲಿಸ್ತಾನ ಪರ ನಾಯಕ ಗೋಪಾಲ್‌ ಸಿಂಗ್‌ ಬಗ್ಗೆ ವಿವರ ನೀಡಿರುವ ಪಾಕ್‌ ಅಧಿಕಾರಿಗಳು,  ‘ಗೋಪಾಲ್‌ ಸಿಂಗ್‌ ಅವರು ಪಾಕಿಸ್ತಾನ ಸಿಖ್‌ ಗುರುದ್ವಾರ ಪ್ರಬಂಧಕ ಸಮಿತಿಯ ಹಿರಿಯ ನಾಯಕರಾಗಿದ್ದಾರೆ. ಹೀಗಾಗಿ, ಸಿಖ್‌ ಸಮುದಾಯದ ಎಲ್ಲ ಸಮಾರಂಭಗಳಿಗೆ ಅವರನ್ನು ಆಹ್ವಾನಿಸಲಾಗುತ್ತಿದೆ’ ಎಂದು ಪ್ರತಿಪಾದಿಸಿದ್ದಾರೆ.

ಕಾರಿಡಾರ್‌ ಕಾಲಾನುಕ್ರಮ
* 1522: ಸಿಖ್‌ರ ಪರಮೋಚ್ಛ ಗುರು ನಾನಕ್‌ ಅವರು ಮೊದಲ ಗುರುದ್ವಾರವನ್ನು ಕರ್ತಾರ್‌ಪುರದಲ್ಲಿ ಸ್ಥಾಪಿಸಿದರು. ಅವರು ಐಕ್ಯವಾದದ್ದೂ ಇದೇ ಸ್ಥಳದಲ್ಲಿ.

*ಫೆಬ್ರುವರಿ 1999: ಶಾಂತಿ ಮಾತುಕತೆಗಾಗಿ ಲಾಹೋರ್‌ಗೆ ಬಸ್‌ನಲ್ಲಿ ತೆರಳಿದ್ದ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಈ ಕಾರಿಡಾರ್‌ ನಿರ್ಮಾಣದ ಕುರಿತು ಮೊದಲು ಮಾತನಾಡಿದ್ದರು.

*2000: ಭಾರತದ ಬದಿಯಿಂದ ಕರ್ತಾರ್‌ಪುರದವರೆಗೆ ಸೇತುವೆ ನಿರ್ಮಾಣ ಮಾಡಿ, ಭಾರತೀಯ ಸಿಖ್‌ ಯಾತ್ರಿಕರಿಗೆ ವೀಸಾ ಮುಕ್ತ ಸಂಚಾರ ಸೌಲಭ್ಯ ಕಲ್ಪಿಸಲು ಸಿದ್ಧ ಎಂದು ಪಾಕಿಸ್ತಾನ ಹೇಳಿತ್ತು.

*ಆಗಸ್ಟ್‌, 2018: ಗುರು ನಾನಕ್‌ರ 550ನೇ ಜನ್ಮವರ್ಷಾಚರಣೆ ಅಂಗವಾಗಿ ಕರ್ತಾರ್‌ಪುರ ಕಾರಿಡಾರ್‌ ನಿರ್ಮಾಣ ಮಾಡಲು ಪಾಕಿಸ್ತಾನ ಸರ್ಕಾರ ಸಿದ್ಧವಿದೆ ಎಂದು ಸೇನಾ ಮುಖ್ಯಸ್ಥ ಖಮರ್‌ ಜಾವೇದ್‌ ಬಜ್ವಾ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ ನವಜೋತ್‌ಸಿಂಗ್‌ ಸಿಧು.

*ನವೆಂಬರ್‌ 22: ದೇರಾ ಬಾಬಾ ನಾನಕ್‌ ಮಂದಿರದಿಂದ ಪಾಕಿಸ್ತಾನ ಗಡಿಯವರೆಗೆ ಕಾರಿಡಾರ್‌ ನಿರ್ಮಾಣ ಮಾಡಲು ಒಪ್ಪಿಗೆ ನೀಡಿದ ಭಾರತದ ಸಚಿವ ಸಂಪುಟ.

*ನವೆಂಬರ್‌ 26: ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಂದ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಮನ್‌ ಗ್ರಾಮದಲ್ಲಿ ಕಾರಿಡಾರ್‌ಗೆ ಶಿಲಾನ್ಯಾಸ.

*
ಹಲವು ಬಾರಿ ಯುದ್ಧ ಮಾಡಿದರೂ ಫ್ರಾನ್ಸ್‌ ಮತ್ತು ಜರ್ಮನಿ ಶಾಂತಿಯುತವಾಗಿ ಬಾಳಲು ಸಾಧ್ಯವಾಗುವುದಾದರೆ, ಭಾರತ–ಪಾಕಿಸ್ತಾನಕ್ಕೆ ಇದು ಅಸಾಧ್ಯವೇ?
-ಇಮ್ರಾನ್‌ ಖಾನ್‌, ಪಾಕಿಸ್ತಾನದ ಪ್ರಧಾನಿ

*
ಬರ್ಲಿನ್‌ ಮಹಾಗೋಡೆಯನ್ನೇ ಕೆಡವಬಹುದಾದರೆ, ನಮ್ಮ ನಡುವಣ ಕಂದಕ ನಿವಾರಣೆ ಕಷ್ಟವೇ? ಎಲ್ಲರೂ ಗುರುನಾನಕ್‌ರ ಶಾಂತಿ ಸಂದೇಶ ಪಾಲಿಸಬೇಕಿದೆ.
-ಹರ್‌ಸಿಮ್ರತ್‌ ಕೌರ್‌ ಬಾದಲ್‌, ಕೇಂದ್ರ ಸಚಿವೆ

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا