Urdu   /   English   /   Nawayathi

ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರದಿಂದ 'ಪ್ರಾಥಮಿಕ ಗ್ರೀನ್ ಸಿಗ್ನಲ್'!

share with us

ಬೆಂಗಳೂರು: 27 ನವೆಂಬರ್ (ಫಿಕ್ರೋಖಬರ್ ಸುದ್ದಿ) ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಪ್ರಾಥಮಿಕ ಹಂತದ ಅನುಮತಿ ದೊರಕಿದ್ದು, ಯೋಜನೆ ವಿರೋಧಿಸಿದ್ದ ತಮಿಳುನಾಡಿಗೆ ಹಿನ್ನಡೆಯಾಗಿದೆ. ಸೋಮವಾರ ಮೇಕೆದಾಟು ಯೋಜನೆ ಕುರಿತ ರಾಜ್ಯದ ಪ್ರಿ-ಫೀಸಿಬಿಲಿಟಿ ವರದಿಗೆ ಕೇಂದ್ರದ ಜಲ ಸಂಪನ್ಮೂಲ ಇಲಾಖೆ ಒಪ್ಪಿಗೆ ನೀಡಿದ್ದು, ಸಮಗ್ರ ಯೋಜನಾ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ನಿರ್ದೇಶನ ನೀಡಿದೆ. ಪ್ರಿ ಫೀಸಿಬಿಲಿಟಿ ರಿಪೋರ್ಟ್ ಎಂದರೆ ಯೋಜನೆಯ ಸಾಧ್ಯಾಸಾಧ್ಯತೆ ವರದಿ ಅಥವಾ ಕಾರ್ಯಸಾಧ್ಯ ವರದಿ ಎನ್ನಬಹುದು.

ಏನಿದು ಮೇಕೆದಾಟು ಯೋಜನೆ?

ಮೇಕೆದಾಟು ಪರಿಸರದಲ್ಲಿ ಜಲಾಶಯ ನಿರ್ಮಾಣ ಮಾಡಿ, ಅಂದಾಜು 30-35 ಟಿಎಂಸಿ ಹೆಚ್ಚುವರಿ ನೀರನ್ನು ಸಂಗ್ರಹಿಸಬೇಕು ಎಂಬುದು ರಾಜ್ಯದ ಉದ್ದೇಶ. ಅಲ್ಲದೆ ಬೃಹತ್ ಪ್ರಮಾಣದ ವಿದ್ಯುತ್ ಉತ್ಪಾದನೆಗೂ ರಾಜ್ಯ ಸರ್ಕಾರ ಯೋಜನೆ ಹಾಕಿಕೊಂಡಿದೆ. ಮೇಕೆದಾಟು ಯೋಜನೆ ಮೂಲಕ ಬೇಸಿಗೆ ಕಾಲದಲ್ಲಿ ಉಂಟಾಗುವ ನೀರಿನ ಕೊರತೆಯನ್ನು ನೀಗಿಸಬಹುದು ಮತ್ತು ಅಗತ್ಯಬಿದ್ದಾಗ ಕೃಷಿಗೂ ಬಳಸಿಕೊಳ್ಳಬಹುದು. ತಮಿಳುನಾಡಿಗೆ ಅದರ ಪಾಲಿನ 177 ಟಿಎಂಸಿ ನೀರನ್ನು ನೀಡಿ, ಬಾಕಿ ಸಮುದ್ರಕ್ಕೆ ಹೋಗಿ ವ್ಯರ್ಥವಾಗುವ ನೀರನ್ನು ಮೇಕೆದಾಟುವಿನಲ್ಲಿ ಸಂಗ್ರಹಿಸಹುದು ಎಂಬುದು ರಾಜ್ಯ ಸರ್ಕಾರದ ಲೆಕ್ಕಾಚಾರವಾಗಿದೆ. 

ಇದಕ್ಕೀಗ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದರಿಂದ ರಾಜ್ಯಕ್ಕೆ ಮೊದಲ ಹಂತದ ಮುನ್ನಡೆ ಸಿಕ್ಕಂತಾಗಿದೆ. ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಜಲ ಸಚಿವ ನಿತಿನ್ ಗಡ್ಕರಿ ಕೂಡ ವಿಶೇಷ ಆಸಕ್ತಿ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇನ್ನುಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಸಿಎಂ ಪಳನಿಸ್ವಾಮಿ ಅವರು ಪತ್ರ ಬರೆದು ಒತ್ತಡ ಹೇರಿದ್ದರು. ಇದೀಗ ರಾಜ್ಯ ಸರ್ಕಾರಕ್ಕೆ ಕೇಂದ್ರ ಸ್ಪಂದಿಸಿರುವುದು ತಮಿಳುನಾಡಿಗೆ ಹಿನ್ನಡೆಯಾದಂತಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا