Urdu   /   English   /   Nawayathi

ಶಿಂಷಾ ನದಿಗೆ ವಿಷಯುಕ್ತ ತ್ಯಾಜ್ಯ

share with us

ಮಂಡ್ಯ: 24 ನವೆಂಬರ್ (ಫಿಕ್ರೋಖಬರ್ ಸುದ್ದಿ) ಮದ್ದೂರು ತಾಲ್ಲೂಕು ಕೊಪ್ಪ ಎನ್‌.ಎಸ್‌.ಎಲ್‌ ಸಕ್ಕರೆ ಕಾರ್ಖಾನೆಯ ಡಿಸ್ಟಲರಿ ತ್ಯಾಜ್ಯ ಸಂಗ್ರಹಣ ಘಟಕ ಸ್ಫೋಟದ ಪರಿಣಾಮ ಭೀಕರವಾಗಿದೆ. ವಿಷಯುಕ್ತ ತ್ಯಾಜ್ಯ ಶಿಂಷಾ ನದಿಗೆ ಸೇರಿ 20 ಹಳ್ಳಿಗಳ ಸುಮಾರು 30 ಸಾವಿರ ಜನರಿಗೆ ಅಪಾಯ ಎದುರಾಗಿದ್ದು, ನದಿ ನೀರು ಕುಡಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ನ.20ರ ತಡರಾತ್ರಿ ಸ್ಫೋಟ ಸಂಭವಿಸಿ ತ್ಯಾಜ್ಯವು ಕೃಷಿ ಭೂಮಿ ಹಾಗೂ ನದಿ ಸೇರಿದೆ. ಎರಡು ದಿನಗಳ ನಂತರ ಭತ್ತ, ರಾಗಿ, ಕಬ್ಬು ಬೆಳೆ ಸುಟ್ಟು ಹೋಗಿದೆ. ತ್ಯಾಜ್ಯವು ಶಿಂಷಾ ಒಡಲು ಸೇರಿ ಕುಡಿಯುವ ನೀರು ಕಲುಷಿತಗೊಂಡಿದೆ. ಅಂತರ್ಜಲ ಕೂಡ ಮಲಿನಗೊಳ್ಳುವ ಅಪಾಯ ಎದುರಾಗಿದೆ. ನದಿ ತಟದಲ್ಲಿರುವ ಕೊಕ್ಕೆರೆ ಬೆಳ್ಳೂರಿನ ಪಕ್ಷಿಗಳ ಪ್ರಾಣಕ್ಕೂ ಕುತ್ತು ಬಂದಿದೆ. 

ಮೀನು ಕೃಷಿ ಮಾಡುತ್ತಿರುವ ಹೊಂಡಗಳಿಗೆ ತ್ಯಾಜ್ಯ ಹರಿದಿದ್ದು ಸಾವಿರಾರು ಮೀನುಗಳು ಸತ್ತಿವೆ. ಶಿಂಷಾ ನದಿ ನೀರು ರಾಮನಗರ ಜಿಲ್ಲೆಯ ಇಗ್ಗಲೂರು ಜಲಾಶಯ ಸೇರುತ್ತಿದ್ದು ಅಲ್ಲಿಯ ಜನರಿಗೂ ಅಪಾಯ ಎದುರಾಗಿದೆ. ಶಿಂಷಾ ನದಿ ನೀರು ಮುತ್ತತ್ತಿ ಬಳಿ ಕಾವೇರಿ ನದಿ ಸೇರುತ್ತದೆ. ಇದೇ ನೀರು ಟಿ.ಕೆ.ಹಳ್ಳಿ ಬಳಿಯ ಸಂಸ್ಕರಣಾ ಘಟಕದ ಮೂಲಕ ಬೆಂಗಳೂರು ತಲುಪುತ್ತಿದ್ದು, ಮಲಿನ ನೀರು ಹರಿಯುವ ಆತಂಕ ಸೃಷ್ಟಿಯಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

‘ಘಟಕ ಸ್ಫೋಟಗೊಂಡ ಮೊದಲ ದಿನ ಕೃಷಿ ಭೂಮಿಯಲ್ಲಷ್ಟೇ ತ್ಯಾಜ್ಯ ಹರಿದಿತ್ತು. ಆದರೆ ಬುಧವಾರ, ಗುರುವಾರ ತ್ಯಾಜ್ಯ ತಗ್ಗಹಳ್ಳಿ ಹಾಗೂ ಇಗ್ಗಲೂರು ಜಲಾಶಯದವರೆಗೂ ಸಾಗಿದೆ. ನಾವು ಈಗಾಗಲೇ ನೀರಿನ ಮಾದರಿ ಕಳುಹಿಸಿದ್ದೇವೆ. ನೀರು ಬಳಸದಂತೆ ಜನರಿಗೆ ಎಚ್ಚರಿಕೆ ನೀಡಿದ್ದೇವೆ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಪರಿಸರ ಅಧಿಕಾರಿ ಸವಿತಾ ಹೇಳಿದರು. ತ್ಯಾಜ್ಯ ಹರಿದಿರುವ ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವ ರೈತರಿಗೆ ಉಸಿರಾಟದ ಸಮಸ್ಯೆ, ನೆಗಡಿ, ತುರಿಕೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚಿಕ್ಕೋನಹಳ್ಳಿ ಗ್ರಾಮದಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆಯಲಾಗಿದೆ.

ರಾಸಾಯನಿಕ ಸಂಗ್ರಹ: ಹೊರ ಬರದ ಸತ್ಯ

ರಾಸಾಯನಿಕ ತ್ಯಾಜ್ಯಕ್ಕೆ ಘನ ತ್ಯಾಜ್ಯ (ಪ್ರೆಸ್ ಮಡ್) ಬೆರೆಸಿ, ಸಂಸ್ಕರಿಸಿ ಗೊಬ್ಬರ ತಯಾರಿಸಲಾಗುತ್ತದೆ. ಆದರೆ ತ್ಯಾಜ್ಯ ಸಂಸ್ಕರಣೆ ಮಾಡದೆ 1 ಕೋಟಿ ಲೀಟರ್‌ಗಳಷ್ಟು ಸಂಗ್ರಹಿಸಿ ಇಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ಏಕೆ ಅಷ್ಟೊಂದು ತ್ಯಾಜ್ಯ ಸಂಗ್ರಹಿಸಿದ್ದರು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಜಿಲ್ಲಾ ಪರಿಸರ ಅಧಿಕಾರಿ ಸವಿತಾ ಹೇಳಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا