Urdu   /   English   /   Nawayathi

ತುರ್ತು ಕಾರ್ಯಾಚರಣೆ; ತಪ್ಪಿದ ಭಾರೀ ಅನಾಹುತ

share with us

ಮಂಗಳೂರು: 22 ನವೆಂಬರ್ (ಫಿಕ್ರೋಖಬರ್ ಸುದ್ದಿ) ನಗರದ ನಂತೂರು ವೃತ್ತದ ಬಳಿ ಬುಧವಾರ ನಸುಕಿನ ವೇಳೆ ಅನಿಲ ತುಂಬಿದ್ದ ಟ್ಯಾಂಕರ್‌ವೊಂದು ಪಲ್ಟಿಯಾದ ಪರಿಣಾಮ, ಬಿಕರ್ನಕಟ್ಟೆ ಸಹಿತ ಸುತ್ತಮುತ್ತಲಿನಲ್ಲಿ ಅನಿಲ ಸೋರಿಕೆಯಾಗುವ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ಸಂಭವಿಸಿದೆ. ಬಿಪಿಸಿಎಲ್‌ ಮಂಗಳೂರು ಸ್ಥಾವರದಿಂದ 18 ಟನ್‌ ಅಡುಗೆ ಅನಿಲ ತುಂಬಿಕೊಂಡು ಮೈಸೂರಿಗೆ ಹೊರಟಿದ್ದ ಟ್ಯಾಂಕರ್‌ ಬುಧವಾರ ನಸುಕಿನ ವೇಳೆ ಸುಮಾರು 3.50ರ ವೇಳೆಗೆ ನಗರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಂತೂರು ವೃತ್ತದಲ್ಲಿ ಪಡೀಲ್‌ ಕಡೆಗೆ ತಿರುಗಿಸುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಿದ್ದಿದ್ದು, ಅನಿಲ ಸೋರಿಕೆಯಾಗುವ ಆತಂಕ ಸೃಷ್ಟಿಸಿತ್ತು.

ಆದರೆ ಸಂಚಾರ ಪೊಲೀಸರು, ಅಗ್ನಿಶಾಮಕ ದಳದ ಸಿಬಂದಿ ತುರ್ತು ಕಾರ್ಯಾಚರಣೆ ಮತ್ತು ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡ ಕಾರಣ ಯಾವುದೇ ಅನಾಹುತ ಸಂಭವಿಸಲಿಲ್ಲ.ಟ್ಯಾಂಕರ್‌ ಅಪಘಾತಕ್ಕೀಡಾದ ಸಂದರ್ಭ ರೌಂಡ್ಸ್‌ನಲ್ಲಿದ್ದ ಪೊಲೀಸರು ಸ್ಥಳಕ್ಕೆ ಧಾವಿಸಿ ತತ್‌ಕ್ಷಣ ರಕ್ಷಣೆಗೆ ಕಾರ್ಯಪ್ರವೃತ್ತರಾದರು. ಅಗ್ನಿಶಾಮಕ ಹಾಗೂ ತುರ್ತುಸೇವೆ ದಳದ ಕದ್ರಿ, ಪಾಂಡೇಶ್ವರ ಠಾಣೆಗಳಿಗೆ ಮಾಹಿತಿ ನೀಡಿದ್ದು, ಕೂಡಲೇ ಘಟನ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಪ್ರಾರಂಭಿಸಿದರು. ಅಗ್ನಿ ಶಾಮಕ ದಳ ಹಾಗೂ ನಗರ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿ ನೋಡಿಕೊಂಡರು. ಒಂದುವೇಳೆ, ಘಟನ ಸ್ಥಳದಲ್ಲಿ ಅನಿಲ ಸೋರಿಕೆಯಾದರೆ ಅದನ್ನು ನಿಯಂತ್ರಿಸಲು ಹಾಗೂ ಸಂಭಾವ್ಯ ಬೆಂಕಿಯನ್ನು ನಂದಿಸಲು ನೀರಿನ ಟ್ಯಾಂಕರ್‌ಗಳನ್ನು ಸಿದ್ಧವಾಗಿರಿಸಲಾಗಿತ್ತು.

ಮುನ್ನೆಚ್ಚರಿಕೆ ಕ್ರಮಗಳು
ಟ್ಯಾಂಕರ್‌ನಿಂದ ಗ್ಯಾಸ್‌ ಸೋರುವಿಕೆ ಮೇಲ್ನೋಟಕ್ಕೆ ಕಂಡು ಬಾರದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ನಂತೂರಿನಿಂದ ಮರೋಳಿ ಕೈಕಂಬದ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಕುಲಶೇಖರದ ಕಡೆಯಿಂದ ನಗರಕ್ಕೆ ಬರುತ್ತಿದ್ದ ವಾಹನಗಳನ್ನು ಮರೋಳಿ ಕೈಕಂಬದ ಬಳಿ ತಡೆದು ಪಡೀಲ್‌ನಿಂದ ತಿರುಗಿ ಪಂಪ್‌ವೆಲ್‌ ಮೂಲಕ ನಗರಕ್ಕೆ ಕಳುಹಿಸಲಾಯಿತು. ಈ ಹಿನ್ನೆಲೆಯಲ್ಲಿ ಪಡೀಲ್‌, ಪಂಪ್‌ವೆಲ್‌ನಲ್ಲೂ ವಾಹನ ದಟ್ಟನೆ ಹೆಚ್ಚಾಗಿತ್ತು. ಕೆಲವು ಹೊತ್ತು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಂಪ್‌ ವೆಲ್‌ ಕಡೆಗೆ ಹೋಗುವ ವಾಹನವನ್ನು ಕೂಡ ತಡೆ ಹಿಡಿಯಲಾಗಿದ್ದರೂ ಅನಿಲ ಸೋರುವಿಕೆಯ ಲಕ್ಷಣಗಳು ಕಂಡುಬಾರದ ಹಿನ್ನೆಲೆಯಲ್ಲಿ ಇಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಲಾಯಿತು.

ದೂರವಾದ ಆತಂಕದ ಕಾರ್ಮೋಡ
ಬಿದ್ದ ಟ್ಯಾಂಕರ್‌ ವಾಲ್ವ್ ಗಳು ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಅಧಿಕಾರಿಗಳು ಹಾಗೂ ಸಿಬಂದಿ ಪರಿಶೀಲಿಸಿದಾಗ ಅನಿಲ ಸೋರಿಕೆಯಾಗುವ ಕುರುಹು ಪತ್ತೆಯಾಗಲಿಲ್ಲ. ಇದಲ್ಲದೆ ಟ್ಯಾಂಕರ್‌ನ ಇತರ ಭಾಗಗಳನ್ನು ಕೂಡ ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. ಬಳಿಕ ಟ್ಯಾಂಕರ್‌ ಅನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ಆರಂಭಿಸಲಾಯಿತು. ಕ್ರೇನ್‌ಗಳನ್ನು ತರಿಸಿ ಟ್ಯಾಂಕರ್‌ ಅನ್ನು ಎತ್ತಿ ನಿಲ್ಲಿಸಲಾಯಿತು. ಟ್ಯಾಂಕರ್‌ಗೆ ಹೆಚ್ಚಿನ ಹಾನಿಯಾಗದ ಹಿನ್ನೆಲೆಯಲ್ಲಿ ಅದನ್ನು ಚಲಾಯಿಸಿಕೊಂಡು ಮತ್ತೆ ಬಿಪಿಸಿಎಲ್‌ ಸ್ಥಾವರಕ್ಕೆ ಕೊಂಡೊಯ್ಯಲಾಯಿತು. ಕಾರ್ಯಾಚರಣೆ 8.45ರ ವೇಳೆಗೆ ಪೂರ್ಣಗೊಂಡು ರಸ್ತೆಯನ್ನು ವಾಹನ ಸಂಚಾರಕ್ಕೆ ತೆರವು ಗೊಳಿಸಲಾಯಿತು. ಘಟನೆಯಲ್ಲಿ ಟ್ಯಾಂಕರ್‌ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಉಪ ಆಯುಕ್ತರಾದ (ಕಾನೂನು ಮತ್ತು ಸುವ್ಯವಸ್ಥೆ) ಉಮಾ ಪ್ರಶಾಂತ್‌, ಕದ್ರಿ ಇನ್‌ಸ್ಪೆಕ್ಟರ್‌ ಮಾರುತಿ ನಾಯ್ಕ, ಸಿಬಂದಿ, ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಮುಖ್ಯ ಅಧಿಕಾರಿ ಟಿ.ಎನ್‌. ಶಿವಶಂಕರ್‌, ವಲಯ ಮುಖ್ಯ ಅಧಿಕಾರಿ ಜಿ. ತಿಪ್ಪೆಸ್ವಾಮಿ, ಕದ್ರಿ ಅಗ್ನಿಶಾಮಕ ಅಧಿಕಾರಿ ಸುನಿಲ್‌ ಕುಮಾರ್‌ ಹಾಗೂ ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. 

ಪರಿಸರದ ನಿವಾಸಿಗಳಿಗೆ ಎಚ್ಚರಿಕೆ ಮಾಹಿತಿ
ಅನಿಲ ಸೋರಿಕೆ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಪರಿಸರದ ಮನೆಗಳಲ್ಲಿ ಅಡುಗೆ ಸ್ಟವ್‌ ಗಳನ್ನು ಅಥವಾ ವಿದ್ಯುತ್‌ ಸಾಧನಗಳನ್ನು ಆನ್‌ ಮಾಡದಂತೆ ಧ್ವನಿವರ್ಧಕ ಮೂಲಕ ತಿಳಿಸಲಾಯಿತು. ಪರಿಸರದಲ್ಲಿ ವಿದ್ಯುತ್‌ ಸಂಪರ್ಕವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಬೆಳಗ್ಗಿನ ಜಾವದಲ್ಲಿ ಜನರು ನಿದ್ದೆಯಲ್ಲಿರುವಾಗಲೇ ಈ ರೀತಿಯ ಎಚ್ಚರಿಕೆ ಧ್ವನಿಗಳು ಪರಿಸರದ ನಿವಾಸಿಗಳಲ್ಲಿ ಕೆಲವು ಹೊತ್ತು ಆತಂಕಕ್ಕೂ ಕಾರಣವಾಗಿತ್ತು.

ಪೆರ್ನೆ ದುರಂತದ ಕಹಿ ನೆನಪು
ಉಪ್ಪಿನಂಗಡಿ ಬಳಿಯ ಪೆರ್ನೆಯಲ್ಲಿ 2013ರ ಎ. 9ರಂದು ಮುಂಜಾನೆ ನಡೆದಿದ್ದ ಅನಿಲ ಟ್ಯಾಂಕರ್‌ ಅಪಘಾತದಲ್ಲಿ ಅನಿಲ ಸೋರಿಕೆಯಿಂದ ಬೆಂಕಿ ಹರಡಿ 8 ಮಂದಿ ಮೃತಪಟ್ಟ ಭೀಕರ ದುರಂತ ಸಂಭವಿಸಿತ್ತು. 2016ರ ಎ. 19ರಂದು ಕಲ್ಲಡ್ಕ ಸಮೀಪದ ಸೂರಿಕುಮೇರು ಬಳಿ ನಡೆದಿದ್ದ ಅನಿಲ ಟ್ಯಾಂಕರ್‌ ಅಪಘಾತದಲ್ಲಿ ಅನಿಲ ಸೋರಿಕೆಯಾದ ಕಾರಣ ಪರಿಸರದ 50 ಮನೆಗಳಿಂದ ನಿವಾಸಿಗಳನ್ನು ತೆರವುಗೊಳಿಸಲಾಗಿತ್ತು. ಆರು ತಿಂಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಪಣಕಜೆ ಬಳಿ ಹೆದ್ದಾರಿಯಲ್ಲಿಯೇ ಅನಿಲ ಟ್ಯಾಂಕರ್‌ ಉರುಳಿ ಬಿದ್ದು ಅನಿಲ ಸೋರಿಕೆಯಾಗಿತ್ತು. ಈ ಘಟನೆ ಕೂಡ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا