Urdu   /   English   /   Nawayathi

ಸಾಲ ಸಂಕಷ್ಟ: ಸ್ವಿಸ್ ಬ್ಯಾಂಕ್ ಪಾಲಾಗಲಿದೆಯೇ ವಿಜಯ್ ಮಲ್ಯ ಲಂಡನ್‌ ನಿವಾಸ?

share with us

ಲಂಡನ್‌: 22 ನವೆಂಬರ್ (ಫಿಕ್ರೋಖಬರ್ ಸುದ್ದಿ) ಯುನೈಟೆಡ್ ಬ್ಯಾಂಕ್‌ ಆಫ್‌ ಸ್ವಿಜರ್‌ಲ್ಯಾಂಡ್‌ನಿಂದ (ಯುಬಿಎಸ್‌) ಪಡೆದಿರುವ ಅಡಮಾನ ಸಾಲ ಮರುಪಾವತಿ ಮಾಡದ ವಿಷಯಕ್ಕೆ ಸಂಬಂಧಿಸಿ ಉದ್ಯಮಿ ವಿಜಯ್ ಮಲ್ಯಗೆ ತೀವ್ರ ಹಿನ್ನಡೆಯಾಗಿದೆ. ಲಂಡನ್‌ನಲ್ಲಿರುವ ಐಷಾರಾಮಿ ನಿವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಲ್ಯ ಪರ ವಕೀಲರು ಮಂಡಿಸಿರುವ ಬಹುತೇಕ ವಾದಗಳನ್ನು ಬ್ರಿಟನ್‌ ಹೈಕೋರ್ಟ್‌ ತಿರಸ್ಕರಿಸಿದೆ. 2.04 ಕೋಟಿ ಪೌಂಡ್ ಸಾಲವನ್ನು ಮಲ್ಯ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಕೇಂದ್ರ ಲಂಡನ್‌ನ ರೀಜೆಂಟ್ ಪಾರ್ಕ್‌ನಲ್ಲಿರುವ ಕಾರ್ನ್ವಾಲ್ ಟೆರೇಸ್ ಅನ್ನು ವಶಪಡಿಸಿಕೊಳ್ಳಲು ಅನುಮತಿ ಕೋರಿ ಯುಬಿಎಸ್‌ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮಲ್ಯ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಮುಂದಿನ ವರ್ಷ ಮೇನಲ್ಲಿ ನಿಗದಿಪಡಿಸಿದೆ. ಪ್ರಕರಣದ ಸದ್ಯದ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿ ಪ್ರಕಟಣೆ ಬಿಡುಗಡೆ ಮಾಡಿರುವ ಬ್ಯಾಂಕ್, ‘ನ್ಯಾಯಾಲಯದ ನಿರ್ಧಾರದಿಂದ ಯುಬಿಎಸ್‌ಗೆ ಸಂತಸವಾಗಿದೆ. ವಿಚಾರಣೆ ಪ್ರಗತಿಯಲ್ಲಿರುವುದರಿಂದ ಹೆಚ್ಚು ಮಾಹಿತಿ ನೀಡುವುದು ಸೂಕ್ತವಲ್ಲ’ ಎಂದು ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿ ಮಲ್ಯ ಕಾನೂನು ಸಲಹಾ ಸಂಸ್ಥೆ ನಡೆದುಕೊಂಡ ರೀತಿಯ ಬಗ್ಗೆಯೂ ನ್ಯಾಯಾಧೀಶರು ಅಸಮಾಧಾನ ಸೂಚಿಸಿದ್ದಾರೆ. ಜತೆಗೆ, ವಿಚಾರಣೆ ಪ್ರಕ್ರಿಯೆ ವಿಳಂಬವಾಗುವಂತೆ ಮಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ಶುಲ್ಕದ ವಿಚಾರವಾಗಿ ಮಲ್ಯ ಮತ್ತು ಅವರ ಹಿಂದಿನ ಕಾನೂನು ಸಲಹಾ ಸಂಸ್ಥೆ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು.

‘ವಕೀಲರ ಬದಲಾವಣೆಯಿಂದ ಪ್ರತಿವಾದಿಗಳ ಕಾನೂನು ತಂಡ ಒತ್ತಡದಲ್ಲಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಪ್ರತಿವಾದಿಗಳು ವಿಚಾರಣೆ ಮುಂದೂಡಲು ನೀಡಿದ ಕಾರಣದ ಬಗ್ಗೆ ನನಗೆ ತೃಪ್ತಿಯಿಲ್ಲ’ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا