Urdu   /   English   /   Nawayathi

ಬೆಳಗಾವಿ ರಾಜಕೀಯಕ್ಕೆ ಮತ್ತೆ ಮೂಗು ತೂರಿಸಿದ ಡಿಕೆಶಿ, ಉರಿದುಬಿದ್ದ ಜಾರಕಿಹೊಳಿ ಬ್ರದರ್ಸ್

share with us

ಬೆಂಗಳೂರು: 21 ನವೆಂಬರ್ (ಫಿಕ್ರೋಖಬರ್ ಸುದ್ದಿ) ಬೆಳಗಾವಿ ರಾಜಕಾರಣ ಮತ್ತೆ ಸದ್ದು ಮಾಡತೊಡಗಿದೆ. ಜಿಲ್ಲೆಯ ವಿಚಾರಕ್ಕೆ ಮತ್ತೆ ಎಂಟ್ರಿಯಾದ ಸಚಿವ ಡಿ.ಕೆ.ಶಿವಕುಮಾರ್ ಅವರ ನಡೆಗೆ ಜಾರಕಿ ಹೊಳಿ ಬ್ರದರ್ಸ್ ತೀವ್ರ ಅಸಮಾಧಾನಗೊಂಡಿದ್ದಾರೆ. ನಿನ್ನೆ ಕಬ್ಬು ಬಾಕಿ ಹಣ ಪಾವತಿ ಸಂಬಂಧ ನಡೆದ ಸಭೆಗೆ ಡಿ.ಕೆ.ಶಿವಕುಮಾರ್ ಆಗಮಿಸಿದ್ದಕ್ಕೆ ಅಕ್ಷರಶಃ ಜಾರಕಿ ಹೊಳಿ ಬ್ರದರ್ಸ್ ಆಕ್ರೋಶಗೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಪದೇ ಪದೇ ಬೆಳಗಾವಿ ವಿಷಯದಲ್ಲಿ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇಂದು ಅವರನ್ನು ಭೇಟಿ ಮಾಡಿರುವ ರಮೇಶ್ ಜಾರಕಿ ಹೊಳಿ ಅವರು, ನಾವು ನಿಮಗೋಸ್ಕರ ಸುಮ್ಮನಿದ್ದೇವೆ. ಪದೇ ಪದೇ ನಮ್ಮನ್ನು ಕೆಣಕುವುದು ಸರಿಯಲ್ಲ. ನೀವು ಬುದ್ಧಿ ಹೇಳಿ, ಇಲ್ಲವೇ ನಮ್ಮ ದಾರಿ ನಾವು ನೋಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ನಮ್ಮ ಜಿಲ್ಲೆಯ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ಈ ಹಿಂದೆಯೇ ಹೇಳಿದ್ದೆವು, ಈಗಲೂ ಕೂಡ ಸಹಿಸುವುದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಂಬಂಧಪಡದವರನ್ನು ಸಭೆಗೆ ಏಕೆ ಸೇರಿಸಬೇಕು. ಇದನ್ನು ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಬೇಕು ಎಂದು ಆಗ್ರಹಿಸಿದ್ದಾರೆ. ಒಬ್ಬರ ವಿಚಾರಕ್ಕೆ ಇನ್ನೊಬ್ಬರು ತಲೆ ಹಾಕುವುದು ಸರಿಯಲ್ಲ ಎಂದು ಸಿದ್ದರಾಮಯ್ಯನವರ ಬಳಿ ರಮೇಶ್ ಮನವಿ ಮಾಡಿರುವುದು ತಿಳಿದುಬಂದಿದೆ.

ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣಾ ಸಂದರ್ಭದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಜಿಲ್ಲೆಯ ರಾಜಕಾರಣದ ವಿಷಯದಲ್ಲಿ ತಲೆ ಹಾಕಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಪರವಾಗಿ ನಿಂತು ನಮ್ಮ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ಜಾರಕಿ ಹೊಳಿ ಬ್ರದರ್ಸ್ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರಹಾರ ನಡೆಸಿದ್ದರು. ಒಂದು ಪಿಎಲ್‍ಡಿ ಚುನಾವಣೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಸಮ್ಮಿಶ್ರ ಸರ್ಕಾರವನ್ನು ಅಲುಗಾಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಿದ್ದರಾಮಯ್ಯ ಅವರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಣ್ಣಗಾಗಿತ್ತು. ಜಾರಕಿ ಹೊಳಿ ಬ್ರದರ್ಸ್ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ಮುನಿಸು ಈವರೆಗೂ ಬಗೆಹರಿದಂತೆ ಕಂಡು ಬಂದಿಲ್ಲ. ಕಬ್ಬಿನ ಬಾಕಿ ಪಾವತಿ ಸಂಬಂಧಿಸಿದಂತೆ ಮತ್ತೆ ವಿವಾದ ಉಂಟಾಗಿದೆ. ಈ ಸಂಬಂಧ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಮೇಶ್‍ಜಾರಕಿ ಹೊಳಿ ಅವರು ಚರ್ಚಿಸಿ ತಮ್ಮ ಅಸಮಾಧಾನ ಹೊರ ಹಾಕಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا