Urdu   /   English   /   Nawayathi

ಕುಸಿಯುತ್ತಿದೆ ಮಡಿಕೇರಿ ಐತಿಹಾಸಿಕ ಕೋಟೆ

share with us

‌ಮಡಿಕೇರಿ: 19 ನವೆಂಬರ್ (ಫಿಕ್ರೋಖಬರ್ ಸುದ್ದಿ) ಇಲ್ಲಿನ ಐತಿಹಾಸಿಕ ಕೋಟೆ ಹಾಗೂ ಅರಮನೆಯ ಒಂದೊಂದೇ ಭಾಗ ಕುಸಿಯುತ್ತಿದ್ದು ಅರಸರ ಕುರುಹು ಅವನತಿ ಹಾದಿ ಹಿಡಿದಿದೆ. ಮಳೆ, ಅಧಿಕಾರಿಗಳ ವಾಹನ ಸಂಚಾರದ ಒತ್ತಡ, ಕಿಡಿಗೇಡಿಗಳ ಕೃತ್ಯಕ್ಕೆ 17ನೇ ಶತಮಾನದ ಐತಿಹಾಸಿಕ ಘಟನಾವಳಿಗೆ ಸಾಕ್ಷಿಯಾಗಿದ್ದ ಕೋಟೆ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಅರಮನೆ ಹಾಗೂ ಅದರ ಸುತ್ತಲ ಜಾಗವು ಸ್ಮಾರಕ ತಾಣವೆಂದು ಘೋಷಣೆಯಾಗಿ 98 ವರ್ಷ ಕಳೆದರೂ ಇದು ವರೆಗೂ ಜಿಲ್ಲಾಡಳಿತವು ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣೆ ಇಲಾಖೆಗೆ ಹಸ್ತಾಂತರಿಸದೆ ಶಿಥಿಲಾವಸ್ಥೆಗೆ ತಲುಪಿದೆ.

ಅರಮನೆ ಗೋಡೆಯ ಬಣ್ಣ ಕಪ್ಪಿಟ್ಟು ಚಾವಣಿ ಅಲ್ಲಲ್ಲಿ ಹಾರಿ ಹೋಗಿದೆ. ಮಳೆ ನೀರು ಸೋರಿ ಶಿಥಿಲವಾಗಿವೆ. ಸೈನಿಕರ ವಿಶ್ರಾಂತಿ ಕೊಠಡಿಗಳು ಕುಸಿದಿವೆ. ಗಿಡಗಂಟಿಗಳು ಬೆಳೆದು ಕೋಟೆಯ ಇಟ್ಟಿಗೆಗಳು ಕಳಚಿ ಬೀಳುತ್ತಿವೆ. ಗುಹೆ, ಕಲ್ಲಿನ ಕೆತ್ತನೆಗಳು, ಉಬ್ಬು ಶಿಲ್ಪಗಳು, ಫಿರಂಗಿಗಳು ಹಾಳಾಗಿವೆ. ಅಪರೂಪದ ಛಾಯಾಚಿತ್ರಗಳು ವಿರೂಪಗೊಂಡಿವೆ. ‘ಕೋಟೆ ಕೊಡಗಿನ ಹೆಮ್ಮೆಯ ಸ್ವತ್ತು. ಅದರ ರಕ್ಷಣೆಗೆ ಪುರಾತತ್ವ ಇಲಾಖೆ ಮುಂದಾಗದಿದ್ದರೆ ಕೆಲವೇ ವರ್ಷಗಳಲ್ಲಿ ಇತಿಹಾಸದ ಪುಟ ಸೇರಲಿದೆ’ ಎಂದು ಹಿರಿಯ ಸಾಹಿತಿ ನಾಗೇಶ್‌ ಕಾಲೂರು ಆತಂಕ ವ್ಯಕ್ತಪಡಿಸುತ್ತಾರೆ.

ಸ್ವಾತಂತ್ರ್ಯದ ನಂತರವೂ ಅದೇ ಅರಮನೆಯಲ್ಲಿ ಹಲವು ಸರ್ಕಾರಿ ಕಚೇರಿಗಳು ಜಾಗ ಪಡೆದುಕೊಂಡವು. 30 ವರ್ಷಗಳ ಹಿಂದೆ ಹೊಸದೊಂದು ಕಟ್ಟಡ ನಿರ್ಮಾಣವಾಯಿತು. ಅದರಲ್ಲಿ ಪ್ರಸ್ತುತ ನ್ಯಾಯಾಲಯ ಸಂಕೀರ್ಣವಿದೆ. 2014ರಲ್ಲಿ ಜಿಲ್ಲಾಡಳಿತ ಭವನ ಮಾತ್ರ ಬೇರೆಡೆಗೆ ಸ್ಥಳಾಂತರಗೊಂಡಿದ್ದನ್ನು ಬಿಟ್ಟರೆ ಅರಮನೆಯಲ್ಲಿ ಈಗಲೂ ಜಿಲ್ಲಾ ಪಂಚಾಯಿತಿ ಕಚೇರಿ, ಶಾಸಕರ ಜನಸಂಪರ್ಕ ಕಚೇರಿಗಳಿವೆ. ಈ ಆವರಣದಲ್ಲಿ ಕೃಷಿ ಇಲಾಖೆ, ಗ್ರಂಥಾಲಯ, ಬಾಲಕಿಯರ ಬಾಲಮಂದಿರವೂ ಇದೆ.

ಪತ್ರ ವ್ಯವಹಾರಕ್ಕೆ ಸೀಮಿತ: ‘1920ರ ಬ್ರಿಟಿಷ್‌ ಆಳ್ವಿಕೆ ಸಂದರ್ಭದಲ್ಲಿ ಕೋಟೆ, ಅರಮನೆ, ಎರಡು ಆನೆ ಶಿಲ್ಪಗಳನ್ನು ಸ್ಮಾರಕವೆಂದು ಘೋಷಿಸಲಾಗಿತ್ತು. ಆದರೆ, 1924ರಲ್ಲಿ ಅಂದಿನ ಜಿಲ್ಲಾಧಿಕಾರಿ ಕಚೇರಿಗಳ ಕೊರತೆಯ ಕಾರಣ ನೀಡಿ ಅರಮನೆ ಬಿಟ್ಟು ಕೊಡುವಂತೆ ಕೋರಿದ್ದರು. ಅರಮನೆಯನ್ನು ಸ್ಮಾರಕ ಪಟ್ಟಿಯಿಂದ ಕೈಬಿಡಲಾಗಿತ್ತು. ಹೀಗಾಗಿ, ಆನೆ ಶಿಲ್ಪ, ಸುತ್ತಲಿರುವ ಮಣ್ಣಿನ ಕೋಟೆ ಮಾತ್ರ ನಮ್ಮ ಸುಪರ್ದಿಯಲ್ಲಿದೆ. ಸರ್ಕಾರಿ ಕಚೇರಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದರೆ ಮಾತ್ರ ಸಂರಕ್ಷಣೆ ಸಾಧ್ಯ’ ಎಂದು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದರು.

‘ಇಡೀ ಪ್ರದೇಶವೇ ಹಸ್ತಾಂತರವಾದರೆ ಮಾತ್ರ ಅಭಿವೃದ್ಧಿಗೆ ಅನುದಾನ ಲಭಿಸಲಿದೆ. 2008ರಿಂದಲೂ ಈ ಪ್ರಯತ್ನದಲ್ಲಿದ್ದೇವೆ. ಆದರೂ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕ್ರಮ ವಹಿಸಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ಇತಿಹಾಸ...
ಹಾಲೇರಿ ವಂಶದ ಅರಸರ ಕಾಲದಲ್ಲಿ ಮುದ್ದುರಾಜ ಎಂಬಾತ 17ನೇ ಶತಮಾನದಲ್ಲಿ ಈ ಮಣ್ಣಿನ ಕೋಟೆ ಹಾಗೂ ಅರಮನೆ ಕಟ್ಟಿಸಿದ್ದ. ಇದನ್ನೇ ಟಿಪ್ಪು ಸುಲ್ತಾನ್‌ ಕಲ್ಲಿನಲ್ಲಿ ಪುನರ್‌ ನಿರ್ಮಿಸಿ ‘ಜಾಫರಾಬಾದ್‌’ ಎಂದು ಕರೆದ. 1790ರಲ್ಲಿ ದೊಡ್ಡ ವೀರರಾಜೇಂದ್ರ ಕೋಟೆ ವಶಪಡಿಸಿಕೊಂಡಿದ್ದ. ಬಳಿಕ 1834ರಲ್ಲಿ ಬ್ರಿಟಿಷರ ಆಳ್ವಿಕೆಗೂ ಈ ಕೋಟೆ ಒಳಪಟ್ಟಿತ್ತು. 1855ರಲ್ಲಿ ಇದೇ ಆವರಣದಲ್ಲಿ ನಿರ್ಮಿಸಿದ್ದ ಚರ್ಚ್‌ನಲ್ಲಿ ವಸ್ತು ಸಂಗ್ರಾಹಾಲಯವಿದೆ. 1812ರಲ್ಲಿ ಇಮ್ಮಡಿ ಲಿಂಗರಾಜ ಒಡೆಯರ ಕಾಲದಲ್ಲಿ ನಿರ್ಮಿಸಿದ್ದ ಅರಮನೆಯಲ್ಲಿ ಈಗ ಸರ್ಕಾರಿ ಕಚೇರಿಗಳಿವೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا