Urdu   /   English   /   Nawayathi

4 ಪ್ರಾಂತ್ಯ ನಿರ್ವಹಿಸಲಾರದ ಪಾಕ್; ಕಾಶ್ಮೀರವನ್ನು ನಿಯಂತ್ರಿಸುವುದೇ?: ಅಫ್ರಿದಿ

share with us

ಲಂಡನ್‌: 14 ನವೆಂಬರ್ (ಫಿಕ್ರೋಖಬರ್ ಸುದ್ದಿ) ಪಾಕಿಸ್ತಾನವು ತನ್ನ ನಾಲ್ಕು ಪ್ರಾಂತ್ಯಗಳಾದ ಪಂಜಾಬ್‌, ಸಿಂಧ್‌, ಬಲೂಚಿಸ್ತಾನ, ಖೈಬರ್‌ ಪಕ್ತುಂಕ್ವಾ ಪ್ರದೇಶಗಳನ್ನೇ ಸಮರ್ಥವಾಗಿ ನಿರ್ವಹಿಸುತ್ತಿಲ್ಲ. ಹೀಗಿರುವಾಗ ಕಾಶ್ಮೀರವನ್ನು ನಿಯಂತ್ರಿಸಲು ಸಾಧ್ಯವೇ?

–ಹೀಗೆಂದವರು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಾಕಿಸ್ತಾನ ಕಾಶ್ಮೀರ ಬೇಡಿಕೆಯನ್ನು ಕೈಬಿಡಬೇಕು ಎಂದಿದ್ದಾರೆ. ಇದರಿಂದ ಪಾಕ್‌ ಸರ್ಕಾರ ಹಾಗೂ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟಾಗಿದೆ. ‘ಪಾಕಿಸ್ತಾನಕ್ಕೆ ಕಾಶ್ಮೀರದ ಅವಶ್ಯಕತೆ ಇಲ್ಲ. ತನ್ನ ನಾಲ್ಕು ಪ್ರಾಂತ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವೇ ಅದಕ್ಕಿಲ್ಲ. ದೇಶವನ್ನು ಆತಂಕವಾದಿಗಳಿಂದ ರಕ್ಷಿಸಲು ಹಾಗೂ ಒಗ್ಗಟ್ಟು ಮೂಡಿಸಲು ಪಾಕ್‌ ಸರ್ಕಾರ ವಿಫಲವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಪಾಕಿಸ್ತಾನಕ್ಕೆ ಕಾಶ್ಮೀರದ ಅಗತ್ಯವಿಲ್ಲ ಎಂದು ಹೇಳಿರಿ. ಅದರಂತೆ ಅದನ್ನು(ಕಾಶ್ಮೀರವನ್ನು) ಭಾರತಕ್ಕೆ ಬಿಟ್ಟುಕೊಡುವುದೂ ಬೇಡ. ಅದನ್ನು ಒಂದು ರಾಷ್ಟ್ರವಾಗಲು ಬಿಡಿ. ಕಾಶ್ಮೀರದಲ್ಲಿ ಸಾಯುತ್ತಿರುವ ಜನರು ಬದುಕಬೇಕು. ಮಾನವತೆ ಉಳಿಯಬೇಕು. ಅಲ್ಲಿ(ಕಾಶ್ಮೀರದಲ್ಲಿ) ಜನರು ಹತ್ಯೆಯಾಗುತ್ತಿರುವುದು ನೋವಿನ ಸಂಗತಿ’ ಎಂದಿದ್ದಾರೆ.

ಭಯೋತ್ಪಾದನೆಯ ಬಗ್ಗೆಯೂ ಮಾತನಾಡಿರುವ ಮಾಜಿ ಕ್ರಿಕೆಟಿಗ, ‘ಕಾಶ್ಮೀರ ಹಾಗೂ ಭಾರತದ ಇತರ ಸ್ಥಳಗಳಲ್ಲಿನ ಭಯೋತ್ಪಾದನೆಯ ಹಿಂದೆ ಪಾಕಿಸ್ತಾನದ ಪ್ರಾಯೋಜಕತ್ವವಿದೆ. ಇದನ್ನು ಅಂತರರಾಷ್ಟ್ರೀಯ ಸಮುದಾಯ ನಿರಂತರವಾಗಿ ಖಂಡಿಸುತ್ತಿದೆ. ಪಾಕಿಸ್ತಾನದಲ್ಲಿ ಜನ್ಮತಳೆದ ಲಷ್ಕರ್–ಇ–ತಯಬಾ, ಜೈಷ್‌–ಇ–ಮೊಹಮದ್‌ನಂತಹ ಹಲವು ಸಂಘಟನೆಗಳು ಭಾರತದಲ್ಲಿ ಸಕ್ರಿಯವಾಗಿವೆ. ಅವುಗಳ ಮುಖ್ಯಸ್ಥರಾದ ಹಫೀಜ್‌ ಸಯೀದ್‌, ಮೌಲಾನಾ ಮಸೂದ್‌ನಂತಹವರು ಸಾರ್ವಜನಿಕವಾಗಿ ಅಡ್ಡಾಡುತ್ತಿದ್ದಾರೆ. ಪ್ರಚೋದನಾಕಾರಿ ಭಾಷಣಗಳನ್ನು ಮಾಡುತ್ತಿದ್ದಾರೆ‘ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಫ್ರಿದಿ ಕಾಶ್ಮೀರ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕಾಶ್ಮೀರದಲ್ಲಿ ಉಗ್ರರು ಹಾಗೂ ಸೇನೆಯ ನಡುವಣ ಗುಂಡಿನ ಚಕಮಕಿ ನಡೆದಿದ್ದ ಸಂದರ್ಭದಲ್ಲಿ ‘ಭಾರತ ಆಕ್ರಮಿತ ಕಾಶ್ಮೀರ’ದಲ್ಲಿನ ಹಿಂಸಾಚಾರದ ವಿಚಾರದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು ಎಂದು ಹೇಳಿದ್ದರು.

ಕಾಶ್ಮೀರವನ್ನು ‘ಭಾರತ ಆಕ್ರಮಿತ ಕಾಶ್ಮೀರ’ ಎಂದದ್ದಕ್ಕೆ ಪ್ರತಿಯಾಗಿ ಭಾರತ ಕ್ರಿಕೆಟಿಗರು ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا