Urdu   /   English   /   Nawayathi

ಕೇಂದ್ರ ಜಾಗೃತ ದಳದ ಆಯುಕ್ತರ ಮುಂದೆ ಹಾಜರಾದ ರಜೆಯಲ್ಲಿರುವ ಸಿಬಿಐ ನಿರ್ದೇಶಕ ವರ್ಮಾ

share with us

ನವದೆಹಲಿ: 10 ನವೆಂಬರ್ (ಫಿಕ್ರೋಖಬರ್ ಸುದ್ದಿ) ಭ್ರಷ್ಟಾಚಾರದ ಆರೋಪ ಹಿನ್ನೆಲೆಯಲ್ಲಿ ಕಡ್ಡಾಯದ ರಜೆ ಮೇಲೆ ತೆರಳಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಇಂದು ಕೇಂದ್ರ ಜಾಗೃತ ದಳದ ಆಯುಕ್ತರ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಹಾಗೂ ಅಲೋಕ್ ವರ್ಮಾ ನಡುವೆ ಉಂಟಾದ ಭಿನ್ನಾಭಿಪ್ರಾಯದ ಹಿನ್ನಲೆಯಲ್ಲಿ ಈ ಇಬ್ಬರನ್ನು ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದೆ ಕಡ್ಡಾಯ ರಜೆ ಮೇಲೆ ಕಳುಹಿಸಿತ್ತು. ತಮ್ಮ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪ ಕುರಿತಂತೆ ಅಲೋಕ್ ವರ್ಮಾ ಇಂದು ಕೇಂದ್ರ ಜಾಗೃತ ದಳದ ಆಯುಕ್ತರಾದ ಕೆ.ವಿ.ಚೌಧರಿ ಮುಂದೆ ಹಾಜರಾಗಿ ಹೇಳಿಕೆಯನ್ನು ದಾಖಲಿಸಿದರು. ಈ ಹಿಂದೆ ಜಾಗೃತ ದಳದ ಆಯುಕ್ತರಾಗಿದ್ದ ಟಿ.ಎಂ.ಬಾಸೀಂ ಮತ್ತು ಶರತ್‍ಕುಮಾರ್ ಅವರು ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ವರ್ಮ ಆರೋಪ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಜಾಗೃತ ದಳದ ನೂತನ ಆಯುಕ್ತ ಕೆ.ವಿ.ಚೌಧರಿ ಮುಂದೆ ಇಂದು ಹಾಜರಾಗಿದ್ದರು. ಸಿಬಿಐ ನಿರ್ದೇಶಕ ಪ್ರಕರಣವನ್ನು ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ತನಿಖೆ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ಕೂಡ ಈ ವೇಳೆ ಹಾಜರಿದ್ದರೆಂದು ತಿಳಿದುಬಂದಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಲೋಕ್ ವರ್ಮ ಜಾಗೃತ ದಳದ ಆಯುಕ್ತರ ಮುಂದೆ ಹೇಳಿಕೆಯನ್ನು ನೀಡಿದ್ದಾರೆ. ಈ ವೇಳೆ ಮಾಧ್ಯಮದವರಿಗೆ ಯಾವುದೇ ಹೇಳಿಕೆಯನ್ನು ನೀಡದೆ ಅವರು ನಿರ್ಗಮಿಸಿದರು.

ಅಕ್ಟೋಬರ್ 26ರೊಳಗೆ ಸಿಬಿಐ ಪ್ರಕರಣದ ಕುರಿತಂತೆ ತನಿಖೆ ನಡೆಸಿ ವರದಿ ನೀಡಬೇಕೆಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ತ್ರಿಸದಸ್ಯ ಪೀಠ ಸೂಚನೆ ಕೊಟ್ಟಿತ್ತು. ನ್ಯಾಯಾಲಯದ ನಿರ್ದೇಶದಂತೆ ಈಗಾಗಲೇ ಸಿವಿಸಿ ಮತ್ತು ಪಟ್ನಾಯಕ್ ಜಂಟಿಯಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಲಿದ್ದಾರೆ. ಮೋಯಿನ್ ಖುರೇಷಿ ಎಂಬ ಮಾಂಸದ ವ್ಯಾಪಾರಿ ಮೇಲೆ ದಾಖಲಾಗಿದ್ದ ಪ್ರಕರಣವನ್ನು ಮುಚ್ಚಿ ಹಾಕಲು ರಾಕೇಶ್ ಅಸ್ತಾನ ಹಣ ಪಡೆದಿದ್ದರು ಎಂಬ ಆರೋಪವಿದೆ. ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ವರ್ಮ ದಾಖಲಿಸಿದ್ದಾರೆ.

ಕಳೆದ ಅ.15ರಂದು ಅಸ್ತಾನ ವಿರುದ್ದ ಸಿಬಿಐ ಎಫ್‍ಐಆರ್ ದಾಖಲಿಸಿತ್ತು. ಹೈದರಾಬಾದ್ ಮೂಲದ ಉದ್ಯಮಿ ಸನಾ ಸತೀಶ್ ಬಾಬು ಅವರಿಂದ ಮಧ್ಯವರ್ತಿಗಳಾದ ಮನೋಜ್ ಪ್ರಸಾದ್, ಸೋಮೇಶ್ ಪ್ರಸಾದ್ ಅವರ ಮೂಲಕ ಅಸ್ತಾನ ಲಂಚ ಪಡೆದಿದ್ದರು ಎಂಬ ಆರೋಪವಿದೆ. ಇತ್ತ ಅಲೋಕ್ ವರ್ಮಾ ವಿರುದ್ದ ಅಸ್ತಾನ ಕೇಂದ್ರ ಸಂಪುಟ ಕಾರ್ಯದರ್ಶಿಗೆ ದೂರು ನೀಡಿ ವರ್ಮ ಸನಾ ಸತೀಶ್ ಬಾಬು ಅವರಿಂದ ಎರಡು ಕೋಟಿ ಲಂಚ ಪಡೆದಿದ್ದರು ಎಂಬ ಪ್ರತ್ಯಾರೋಪ ಮಾಡಿದ್ದರು.  ಹೀಗೆ ದೇಶದ ಅತ್ಯಂತ ಉನ್ನತ ಪ್ರಮುಖ ಸಂಸ್ಥೆಯ ಪ್ರಮುಖರೇ ಭ್ರಷ್ಟಾಚಾರದ ಬಗ್ಗೆ ಆರೋಪ, ಪ್ರತ್ಯಾರೋಪ ನಡೆಸಿದ್ದರು. ಅಂತಿಮವಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಇಬ್ಬರು ಅಧಿಕಾರಿಗಳನ್ನು ಕಡ್ಡಾಯ ರಜೆಗೆ ಕಳುಹಿಸಿದ್ದಲ್ಲದೆ ಕೆಲವರನ್ನು ಬೇರೆ ಬೇರೆ ಸ್ಥಳಕ್ಕೆ ಎತ್ತಂಗಡಿ ಮಾಡಲಾಗಿತ್ತು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا