Urdu   /   English   /   Nawayathi

ಈ ಹಳ್ಳಿಯಲ್ಲಿ ಪಟಾಕಿ ಸಿಡಿದರೆ, ಸದ್ದೇ ಬರುವುದಿಲ್ಲ!

share with us

ಗನಕ್ಕುಚಿ (ಅಸ್ಸಾಂ): 06 ನವೆಂಬರ್ (ಫಿಕ್ರೋಖಬರ್ ಸುದ್ದಿ) ಎಲ್ಲೆಡೆಯಂತೆ ದೇಶದ ಈಶಾನ್ಯ ಭಾಗ ಅಸ್ಸಾಂನ ಗನಕ್ಕುಚಿ ಎಂಬ ಹಳ್ಳಿಯಲ್ಲೂ ಪ್ರತಿವರ್ಷ ದೀಪಾವಳಿ ಆಚರಣೆಗೊಳ್ಳುತ್ತದೆ. ಅವರೂ ನಮ್ಮಂತೆ ಪಟಾಕಿ ಸಿಡಿಸುತ್ತಾರೆ. ಆದರೆ, ಹಾಗೆ ಸುಟ್ಟು ಸ್ಫೋಟಗೊಳ್ಳುವ ಪಟಾಕಿಯ ಸದ್ದು ಸುತ್ತಲಿನ ನಾಲ್ಕೂರಿಗೆ ಕೇಳಿಸುವುದಿಲ್ಲ. ಹತ್ತಿರ ನಿಂತರೂ ಕಿವಿಗೆ ಅದರ ಸದ್ದಿನ ಭಯಂಕರ ಅನುಭವ ಆಗುವುದಿಲ್ಲ. ಪಟಾಕಿ ಸುಟ್ಟ ಘಾಟೂ ಮೂಗಿಗೆ ತಾಗುವುದಿಲ್ಲ. ಸ್ಫೋಟದ ಬಳಿಕ ರಾಸಾಯನಿಕಗಳೂ ಪರಿಸರಕ್ಕೆ ಹಾನಿ ಮಾಡುವುದಿಲ್ಲ. ಇಷ್ಟೆಲ್ಲ ಪವಾಡಕ್ಕೆ ಕಾರಣವೇ, ಅವರು ಹಚ್ಚುವ "ಪರಿಶುದ್ಧ ಹಸಿರು ಪಟಾಕಿ'!

ಹೌದು! ದೀಪಾವಳಿ ಅಂದರೆ, ಅಲ್ಲಿ ಪಟಾಕಿಗಳದ್ದೇ ಅಬ್ಬರ. ಆದರೆ, ಈ ಬಾರಿ ಸುಪ್ರಿಂ ಕೋರ್ಟ್‌ 2 ತಾಸು ಮಾತ್ರವೇ ಪಟಾಕಿಗಳನ್ನು ಸಿಡಿಸಲು ಅನಮತಿ ನೀಡಿರುವ ಕಾರಣ, ಪಟಾಕಿಗಳ ಸದ್ದು ಅಷ್ಟೇನೂ ಇರದು ಎನ್ನುವ ಸಮಾಧಾನ ಪರಿಸರಪ್ರಿಯರದ್ದು. ನಿಸರ್ಗದ ಮೇಲೆ ಕಾಳಜಿ ತೋರಿಸಿ, ಪ್ರಕಟಿಸಲಾದ ಈ ತೀರ್ಪು ನಾನಾ ಚರ್ಚೆಗೂ ಕಾರಣವಾಗಿದೆ. ಇಂಥ ಸಂದರ್ಭದಲ್ಲಿ ಗನಕ್ಕುಚಿ ಎಂಬ ಕುಗ್ರಾಮ ದೇಶಕ್ಕೇ ಮಾದರಿ ಆಗಿದೆ.

ಸುಮಾರು 1885ರಿಂದ ಗನಕ್ಕುಚಿ ಗ್ರಾಮಸ್ಥರು, ಪಟಾಕಿಗಳನ್ನು ಅತ್ಯಂತ ಹಸಿರುಮಯ ಮತ್ತು ಸಾಂಪ್ರದಾಯಿಕವಾಗಿ ತಯಾರಿಸುತ್ತಿದ್ದಾರೆ. ಅತಿ ಕಡಿಮೆ ಶಬ್ದ ಹೊಮ್ಮಿಸುವ, ಬೆಂಕಿ ಕಾಣಿಸಿಕೊಳ್ಳದ, ಶೇ.100ರಷ್ಟು ರಾಸಾಯನಿಕ ಮುಕ್ತ ಪಟಾಕಿಗಳು ಇವಾಗಿದ್ದರೂ, ಇವರ ದೀಪಾವಳಿಯ ರಾತ್ರಿ ಬಹಳ ಕಲರ್‌ಫ‌ುಲ್‌. 50ಕ್ಕೂ ಹೆಚ್ಚು ಮಾದರಿಯ ಇಲ್ಲಿನ ಪಟಾಕಿಗಳು ಒಂದಕ್ಕಿಂತ ಒಂದು ವಿಭಿನ್ನ ಮತ್ತು ಆಕರ್ಷಕ.

ಅಂದಹಾಗೆ, ಈ ಪಟಾಕಿಗಳನ್ನು ಯಂತ್ರಗಳು ತಯಾರಿಸುವುದಿಲ್ಲ. ಗನಕ್ಕುಚಿ ಹಳ್ಳಿಯ ಜನರು ಮತ್ತು ಸ್ಥಳೀಯ ಬುಡಕಟ್ಟು ಸಮುದಾಯದವರು ಇದನ್ನು ಸಿದ್ಧಪಡಿಸುತ್ತಾರೆ. ಹೀಗೆ ಪಟಾಕಿ ತಯಾರಿಸುವವರ ಆರೋಗ್ಯವೂ ಬಹಳ ಚೆನ್ನಾಗಿದೆಯಂತೆ. "ಶಿವಕಾಶಿಯಲ್ಲಿ ಪಟಾಕಿ ತಯಾರಿಸುವವರ ಆರೋಗ್ಯದ ಕುರಿತು ಆತಂತಕಾರಿ ಸುದ್ದಿಗಳನ್ನು ಓದಿದ್ದೆವು. ಆದರೆ, ನಮ್ಮ ಗನಕ್ಕುಚಿಯಲ್ಲೂ ಪಟಾಕಿ ತಯಾರಿಸುವ ಪುಟ್ಟ ಪುಟ್ಟ ಕೇಂದ್ರಗಳಿವೆ. ಅವರ ಆರೋಗ್ಯವನ್ನೂ ತಪಾಸಣೆ ಮಾಡಿದ್ದೇವೆ. ಯಾವುದೇ ವಿಷಪೂರಿತ ಸಮಸ್ಯೆಗಳು ಅವರನ್ನು ಬಾಧಿಸಿಲ್ಲ' ಎನ್ನುತ್ತಾರೆ ಅಸ್ಸಾಂನ ಆರೋಗ್ಯಾಧಿಕಾರಿಗಳು.
 
ಪಟಾಕಿಯ ಮಹತ್ವವನ್ನು ಜನರು ಮೊದಲು ಅರ್ಥಮಾಡಿಕೊಳ್ಳಬೇಕು. ದೀಪಾವಳಿ ಎನ್ನುವುದು ಬೆಳಕಿನ ಒಂದು ಸಂಭ್ರಮವಷ್ಟೇ. ಆ ಸಂಭ್ರಮವನ್ನು ಹಾನಿದಾಯಕವಾಗಿ ಮಾರ್ಪಡಿಸಬಾರದು' ಎನ್ನುವುದು ಅಲ್ಲಿನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವ್ಯಾಖ್ಯಾನ.ಸುಪ್ರೀಂ ತೀರ್ಪು ಹೊರಬೀಳುತ್ತಿದ್ದಂತೆ, ಗನಕ್ಕುಚಿಯ ಹಸಿರು ಪಟಾಕಿಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಇದೇ ಸದುದ್ದೇಶದಿಂದ ಯಂತ್ರಗಳ ಮೂಲಕ ಹೇಗೆ ಪಟಾಕಿ ತಯಾರಿಸಬಹುದು ಎನ್ನುವುದರ ಕುರಿತು ಸಂಶೋಧನೆಯೂ ಶುರುವಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا