Urdu   /   English   /   Nawayathi

ಎಚ್ಚರಿಕೆ : ರಿವಾರ್ಡ್, ಕ್ಯಾಶ್ ಬ್ಯಾಕ್ ಆಸೆಗೆ ಆಪ್ ಗಳನ್ನು ಡೌನ್ಲೋಡ್ ಮಾಡೋ ಮುನ್ನ ಹುಷಾರ್..!

share with us
ಬೆಂಗಳೂರು: 24 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ರಿವಾರ್ಡ್ ಆಸೆಗೆ ಆನ್‍ಲೈನ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಬೆನ್ನೇರಿ ಹೋಗುವ ಗ್ರಾಹಕರೇ ಎಚ್ಚರ! ನಿಮ್ಮ ಬ್ಯಾಂಕ್ ಖಾತೆಯ ಸಂಪೂರ್ಣ ವಿವರಗಳ ಬಗ್ಗೆ ಮುಂದೊಂದು ದಿನ ಭಾರೀ ದೋಖಾ ಮಾಡುವ ಸಾಧ್ಯತೆಗಳಿವೆ ಎಂದು ಸೋಪೋಸ್ ಲ್ಯಾಬ್ ಸಂಸ್ಥೆ ವರದಿ ಮಾಡಿದೆ. ಇತ್ತೀಚೆಗೆ ಭಾರತೀಯ ಆರ್ಥಿಕ ವಹಿವಾಟಿನ ಆನ್‍ಲೈನ್ ವ್ಯವಹಾರದ ಮೇಲೆ ಅಧ್ಯಯನ ನಡೆಸಿರುವ ಸೋಪೋಸ್ ಲ್ಯಾಬ್ಸ್ ಸಂಸ್ಥೆ ಕೆಲವು ನಕಲಿ ಮೊಬೈಲ್ ಆ್ಯಪ್‍ಗಳನ್ನು ಪತ್ತೆ ಹಚ್ಚಿದ್ದು, ಅವುಗಳಿಂದ ಗ್ರಾಹಕರ ಮಾಹಿತಿಯನ್ನು ಕದ್ದು ಸಂಗ್ರಹಿಸಿರುವ ವಿಷಯವನ್ನು ಬಹಿರಂಗಪಡಿಸಿದೆ. ಖಾಸಗಿ ಸಂಸ್ಥೆಯೊಂದು ಸುಮಾರು 12ಕ್ಕೂ ಹೆಚ್ಚು ಮೊಬೈಲ್ ಆ್ಯಪ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅವುಗಳಲ್ಲಿ ಬಹಳಷ್ಟು ಆ್ಯಪ್‍ಗಳು ಗ್ರಾಹಕರಿಗೆ ಪ್ರತಿ ವಹಿವಾಟಿಗೂ ಬಹುಮಾನದ ರೂಪದಲ್ಲಿ ಕೂಪನ್, ಗಿಫ್ಟ್‍ವೋಚರ್ಸ್ ಮತ್ತು ಕ್ಯಾಷ್ ರಿವಾರ್ಡ್ ಕೊಡುವ ಆಮಿಷವೊಡ್ಡುತ್ತಿವೆ. ಅವುಗಳ ಬಳಕೆ ಸುಲಭವಾಗಿರುವುದರಿಂದ ಗ್ರಾಹಕರು ಬೇಗ ಆಕರ್ಷಿತರಾಗುತ್ತಿದ್ದಾರೆ. ಆದರೆ ಈ ಆ್ಯಪ್‍ಗಳ ಬಳಕೆಗೂ ಮುನ್ನ ತಮ್ಮ ಬ್ಯಾಂಕ್, ಕ್ರೆಡಿಟ್‍ಕಾಡ್, ಡೆಬಿಟ್ ಕಾರ್ಡ್ ಅಥವಾ ಆನ್‍ಲೈನ್ ಬ್ಯಾಂಕ್‍ನ ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಆ್ಯಪ್‍ಗಳನ್ನು ನಂಬಿ ಗ್ರಾಹಕರು ತಮ್ಮ ಖಾಸಗಿ ಮಾಹಿತಿಗಳನ್ನು ದಾಖಲಿಸಿ ವ್ಯವಹಾರವನ್ನೂ ನಡೆಸುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ರಿವಾರ್ಡ್‍ಗಳನ್ನೂ ಪಡೆಯುತ್ತಿದ್ದಾರೆ. ಆದರೆ ಇದು ಭವಿಷ್ಯದಲ್ಲಿ ಹೆಚ್ಚು ಅಪಾಯ ಉಂಟು ಮಾಡುವ ಸಾಧ್ಯತೆ ಇದೆ. ನಕಲಿ ಆ್ಯಪ್‍ಗಳಿಗೂ, ಬ್ಯಾಂಕ್‍ಗಳಿಗೂ ಯಾವುದೇ ನೇರ ಸಂಬಂಧವಿರುವುದಿಲ್ಲ. ಈ ಆ್ಯಪ್‍ಗಳಿಂದಾಗುವ ನಷ್ಟಕ್ಕೆ ಬ್ಯಾಂಕ್‍ಗಳು ಹೊಣೆಯನ್ನೂ ಹೊರುವುದಿಲ್ಲ. 2016ರ ಮೇ ಯಿಂದಲೂ ಈ ರೀತಿಯ ಆ್ಯಪ್‍ಗಳು ಭಾರತದಲ್ಲಿ ಚಾಲ್ತಿಯಲ್ಲಿವೆ. ಈ ಎಲ್ಲಾ ಆ್ಯಪ್‍ಗಳು ಮೂಲ ಸರ್ವರ್ ಮತ್ತು ನಿಯಂತ್ರಣಾ ಸರ್ವರ್ ಒಂದೇ ಆಗಿದ್ದು, ಸಂಪೂರ್ಣ ಮಾಹಿತಿ ಅಲ್ಲಿ ದಾಖಲಾಗುತ್ತಿದೆ ಎಂದು ಸೋಪೋಸ್ ಲ್ಯಾಬ್ಸ್ ವರದಿ ಮಾಡಿದೆ. ಗ್ರಾಹಕರ ಮಾಹಿತಿಗಳನ್ನು ಸಂಪೂರ್ಣವಾಗಿ ಸಂಗ್ರಹಿಸುತ್ತಿರುವ ನಕಲಿ ಆ್ಯಪ್‍ಗಳ ಮಾಲೀಕತ್ವದ ಸಂಸ್ಥೆ ಮಾಹಿತಿಯನ್ನು ಮತ್ತೊಂದು ಸಂಸ್ಥೆಗೆ ಮಾರಿಕೊಳ್ಳುತ್ತಿದೆ. ಆ ಸಂಸ್ಥೆ ಹಂತ ಹಂತವಾಗಿ ಗ್ರಾಹಕರ ಖಾತೆಯಿಂದ ಸಣ್ಣ ಪ್ರಮಾಣದಲ್ಲಿ ಹಣ ಕದಿಯುವ ಕೆಲಸ ಮಾಡುತ್ತಿದೆ. ಮುಂದೊಂದು ದಿನ ದೊಡ್ಡ ಪ್ರಮಾಣದಲ್ಲೂ ಹಣ ದೋಚಲು ಅವಕಾಶವಿದೆ. ಸದ್ಯಕ್ಕೆ ಈ ನಕಲಿ ಆ್ಯಪ್‍ಗಳು ಭಾರತದ ಪ್ರಮುಖ ಬ್ಯಾಂಕ್‍ಗಳಾದ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್‍ಗಳ ಗ್ರಾಹಕರ ಮೇಲೆ ಕಣ್ಣಿಟ್ಟಿದ್ದು, ಬ್ಯಾಂಕ್‍ಗಳ ಲೋಗೋಗಳನ್ನು ಹಾಕಿ ಆ್ಯಪ್ ಸಿದ್ಧಪಡಿಸಿದೆ. ಜೊತೆಗೆ ಕೆಲವು ಆ್ಯಪ್‍ಗಳು ಪ್ರಧಾನಮಂತ್ರಿ ನರೇಂದ್ರ ಮೋದಿ, ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್ ಅವರನ್ನು ಭಾವಚಿತ್ರಗಳನ್ನು ಬಳಸಿ ಪ್ರಚಾರ ಮಾಡುತ್ತಿವೆ. ಕೆಲವು ಆ್ಯಪ್‍ಗಳಂತೂ 10 ಖಾತೆಗಳನ್ನು ಏಕಕಾಲಕ್ಕೆ ನಿರ್ವಹಣೆ ಮತ್ತು ನಿಭಾಯಿಸುವ ಸೌಲಭ್ಯ ಒದಗಿಸುವುದಾಗಿ ಹೇಳಿಕೊಳ್ಳುತ್ತಿದೆ. ನರೇಂದ್ರ ಮೋದಿ ಸರ್ಕಾರದ ಡಿಜಿಟಲ್ ಮನಿ ಯೋಜನೆಯಲ್ಲಿ ಈ ರೀತಿಯ ಸೇವೆ ಒದಗಿಸುತ್ತಿರುವುದಾಗಿ ಘೋಷಿಸಿಕೊಳ್ಳುತ್ತಿವೆ. ಇ-ಎಟಿಎಂ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿರುವುದಾಗಿ ತಿಳಿಸಿವೆ. ಸದ್ಯಕ್ಕೆ ಮೂರು ಬ್ಯಾಂಕ್‍ಗಳ ನಕಲಿ ಆ್ಯಪ್ ಪತ್ತೆಯಾಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಇಂಡಿಯನ್ ಓವರ್‍ಸಿಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಯಸ್ ಬ್ಯಾಂಕ್, ಸಿಟಿ ಬ್ಯಾಂಕ್‍ಗಳ ಗ್ರಾಹಕರ ಮೇಲೆ ಆ್ಯಪ್‍ಗಳ ಖಾತಾ ದೃಷ್ಟಿ ಬಿದ್ದಿದೆ. ಆ್ಯಪ್‍ಗೆ ಲಾಗ್ ಇನ್ ಆಗಲು ಎಟಿಎಂ ಕಾರ್ಡ್, ಪಿನ್, ನೆಟ್ ಬ್ಯಾಂಕಿಂಗ್‍ನ ಮಾಹಿತಿ, ಕ್ರೆಡಿಟ್ ಕಾರ್ಡ್, ಆಧಾರ್ ಕಾರ್ಡ್ ಸಂಖ್ಯೆಗಳನ್ನು ಪಡೆದುಕೊಳ್ಳಲಾಗುತ್ತಿದೆ. ಇದು ಅತ್ಯಂತ ಅಪಾಯಕಾರಿಯಾದ ಬೆಳವಣಿಗೆ ಎಂದು ಸಿಡ್ನಿ ಮೂಲದ ಸೋಪೋಸ್‍ಲ್ಯಾಬ್ಸ್ ಕಳವಳ ವ್ಯಕ್ತಪಡಿಸಿದೆ. ಮುಂದೊಂದು ದಿನ ಗ್ರಾಹಕರ ಈ ಮಾಹಿತಿ ಆಧರಿಸಿ ಸಾಕಷ್ಟು ಆರ್ಥಿಕ ಅವ್ಯವಹಾರ ನಡೆಸುವ ಅವಕಾಶಗಳಿವೆ. ಹೀಗಾಗಿ ಗ್ರಾಹಕರು ಎಚ್ಚರದಿಂದ ಇರಬೇಕು ಎಂದು ಸಂದೇಶ ನೀಡಲಾಗಿದೆ. ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا