Urdu   /   English   /   Nawayathi

ಕೊಡಗಿನಲ್ಲಿ ಶಂಕಿತ ಉಗ್ರನ ವಿಚಾರಣೆ

share with us

ವಿರಾಜಪೇಟೆ: 21 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಬೆಂಗಳೂರಿನ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತ ಉಗ್ರ ಸಲೀಂನನ್ನು (43) ಸಿಸಿಬಿ ಪೊಲೀಸರು ವಿಚಾರಣೆಗಾಗಿ ಕೊಡಗು ಮಾರ್ಗವಾಗಿ ಕೇರಳಕ್ಕೆ ಭಾನುವಾರ ಕರೆದೊಯ್ದರು. ಬೆಂಗಳೂರಿನಿಂದ ಶನಿವಾರ ರಾತ್ರಿ ಪೊಲೀಸ್‌ ಭದ್ರತೆಯಲ್ಲಿ ಕರೆ ತಂದಿತ್ತ ಆತನನ್ನು ವಿರಾಜಪೇಟೆ ನಗರ ಠಾಣೆಯ ಲಾಕಪ್‌ನಲ್ಲಿ ಇರಿಸಲಾಗಿತ್ತು. ಠಾಣೆಯ ಸಿಬ್ಬಂದಿ ಹೊರತು ಪಡಿಸಿ ಬೇರೆ ಯಾರನ್ನೂ ಸುಳಿಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು.  

ಕೇರಳದ ಕಣ್ಣೂರಿನಲ್ಲಿ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಸಲೀಂನನ್ನು ಈಚೆಗೆ ಬಂಧಿಸಲಾಗಿತ್ತು. 2008ರಲ್ಲಿ ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸಿದ್ದ ಹಾಗೂ ಸ್ಫೋಟಕ್ಕೆ ಪೂರಕ ವಸ್ತುಗಳನ್ನು ಪೂರೈಸಲು ಸಹಕರಿಸಿದ್ದ ಎಂಬ ಆರೋಪ ಸಲೀಂ ಮೇಲಿದೆ.

ಕೊಡಗಿನಲ್ಲಿ ಕಾರ್ಯಾಚರಣೆ ನಡೆಸಿದ್ದ ಬಗ್ಗೆಯೂ ಸಂಶಯ ವ್ಯಕ್ತವಾಗಿದ್ದು, ಈ ಕುರಿತೂ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.   

ಕಳೆದ ಹತ್ತು ದಿನಗಳಿಂದ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ತನಿಖೆ ನಡೆಸಿ ಈಗ ಕಣ್ಣೂರಿಗೆ ಕರೆದೊಯ್ಯಲಾಗಿದೆ. ಶಂಕಿತ ಉಗ್ರನು ಕಣ್ಣೂರು ಜಿಲ್ಲೆಯ ಪಿಣರಾಯ್‌ ಗ್ರಾಮದ ನಿವಾಸಿ. ಪಿಣರಾಯ್‌ ಅರಣ್ಯದಲ್ಲಿ ಕೆಲವು ದಿನಗಳ ಹಿಂದೆ ಸಿಸಿಬಿಯ ಡಿಸಿಪಿ ಪಿ.ಟಿ. ಸುಬ್ರಮಣ್ಯ ನೇತೃತ್ವದಲ್ಲಿ ಬಂಧಿಸಲಾಗಿತ್ತು. ಬಳಿಕ ಆರೋಪಿಯನ್ನು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ತನಿಖೆಗಾಗಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. 

ಕೊಡಗಿನಲ್ಲೂ ಸಂಚಾರ: ಬಾಂಬ್ ಸ್ಫೋಟ ಪ್ರಕರಣದ ಮೊದಲ ಆರೋಪಿ, ಕೊಡಗಿನಲ್ಲಿ ಉಗ್ರಗಾಮಿಗಳಿಗೆ ತರಬೇತಿ ನೀಡಿದ್ದ ನಾಸಿರ್‌ ಮದನಿಯೊಂದಿಗೆ ಸಲೀಂ ನಿಕಟ ಸಂಪರ್ಕ ಹೊಂದಿದ್ದ. ಮದನಿಯ ಸಲಹೆಯಂತೆ ಸಲೀಂ, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಬಳಿಯ ಹೊಸತೋಟ ಹಾಗೂ ಕೇರಳದ ಪಿಣರಾಯ್‌ ಅರಣ್ಯದ ಆಯ್ದ ನಾಲ್ಕು ಕಡೆಗಳಲ್ಲಿ ಉಗ್ರರಿಗೆ ತರಬೇತಿ ನೀಡಿದ್ದ ಎಂದು ಮೂಲಗಳು ತಿಳಿಸಿವೆ. 

ಈ ಹಿಂದೆ ಸಲೀಂ ಕೊಡಗಿನಾದ್ಯಂತ ಸಂಚರಿಸಿ ವಿರಾಜಪೇಟೆ ಮಾರ್ಗವಾಗಿ ಕೇರಳಕ್ಕೆ ತೆರಳಿದ್ದ. ಕೇರಳದಲ್ಲಿ ಈಚೆಗೆ ನಡೆದ ದರೋಡೆ ಹಾಗೂ ಕೂತುಪರಂಬಿನಲ್ಲಿ ನಡೆದ ಯುವಕನೊಬ್ಬನ ಕೊಲೆ ಪ್ರಕರಣದಲ್ಲಿ ಕೂಡ ಸಲೀಂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. 

ಸೌದಿಗೆ ತೆರಳಿದ್ದ: ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟಿಸಲು ಮದನಿ ನೇತೃತ್ವದಲ್ಲಿ ಸಂಚು ಸಿದ್ಧವಾಗಿತ್ತು. ನಾಸಿರ್‌ ಬಂಧನದ ಬಳಿಕ ಸಲೀಂ ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡು ಕೆಲವು ತಿಂಗಳ ಹಿಂದೆ ಕೇರಳಕ್ಕೆ ವಾಪಸ್‌ ಆಗಿದ್ದ.  

ಡಿಸಿಪಿ ಸುಬ್ರಮಣ್ಯ, ಎಸಿಪಿ ಮೋಹನ್ ಕುಮಾರ್ ಅವರ ನೇತೃತ್ವದ ಸಿಸಿಬಿ ತಂಡ ಹಾಗೂ ಕೇಂದ್ರ ಶಸಸ್ತ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಗಳ ಭದ್ರತೆಯಲ್ಲಿ ಕೇರಳಕ್ಕೆ ಶಂಕಿತ ಉಗ್ರನ ಕರೆದೊಯ್ಯಲಾಯಿತು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا