Urdu   /   English   /   Nawayathi

ಶಾಸಕರಿಗೂ ಬೇಡವಾದ ಸರ್ಕಾರಿ ಆಸ್ಪತ್ರೆ

share with us

ಬೆಂಗಳೂರು: 17 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಎಲ್ಲರೂ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕೆಂದು ಹಿಂದಿನ ಸರ್ಕಾರದಲ್ಲಿ ಜಾರಿಗೆ ತರಲಾಗಿದ್ದ ಆರೋಗ್ಯ ಕರ್ನಾಟಕ ಯೋಜನೆಯನ್ನು ಪಾಲಿಸಲು ಜನಪ್ರತಿನಿಧಿಗಳೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ! ಹಾಲಿ ಸ್ಪೀಕರ್‌ ರಮೇಶ್‌ ಕುಮಾರ್‌ ಹಿಂದಿನ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದಾಗ ಎಲ್ಲ ಆರೋಗ್ಯ ಯೋಜನೆಗಳನ್ನು ಒಂದೇ ಸೂರಿನಡಿ ತರಲು ಹಾಗೂ ಸಾಮಾನ್ಯನಿಂದ ಹಿಡಿದು, ಶಾಸಕ, ಮಂತ್ರಿ, ಮುಖ್ಯಮಂತ್ರಿಗಳೆಲ್ಲರೂ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕೆಂಬ ನಿಯಮಕ್ಕೆ ಕೆಲವು ಶಾಸಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆಂದು ತಿಳಿದು ಬಂದಿದೆ. ಶಾಸಕರ ವೈದ್ಯಕೀಯ ವೆಚ್ಚ ಭರಿಸಲು ಕರ್ನಾಟಕ ವಿಧಾನಮಂಡಲ(ಸದಸ್ಯರ ವೈದ್ಯಕೀಯ ಹಾಜರಾತಿ) ನಿಯಮ 1968 ಇದ್ದು, ಇದರಲ್ಲಿ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕೆಂಬ ನಿಯಮ ಇಲ್ಲ ಎಂಬ ಕಾರಣ ನೀಡುತ್ತಿದ್ದಾರೆ ಎನ್ನಲಾಗಿದೆ.

ಯಾರಿಗೆಲ್ಲಾ ಚಿಕಿತ್ಸೆ?: ನಿಯಮ 5ಎ (ಐ) ಪ್ರಕಾರ ವಿಧಾನ ಮಂಡಲದ ಸದಸ್ಯರು ಹಾಗೂ ಅವರ ಕುಟುಂಬ (ಹೆಂಡತಿ, ಮಗ, ಮದುವೆಯಾಗದಿರುವ ಮಗಳು, ತಂದೆ ತಾಯಿ, ಮಹಿಳಾ ಶಾಸಕಿಯಾದರೆ ಅತ್ತೆ ಮಾವ) ಸದಸ್ಯರಿಗೆ ಅವಕಾಶವಿದೆ. ಇವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಸರ್ಕಾರದಿಂದ ವೆಚ್ಚವನ್ನು ಮರುಪಾವತಿ ಮಾಡಿಸಿಕೊಳ್ಳಬಹುದು.

ಯಾವ ಯಾವ ಆಸ್ಪತ್ರೆಗಳು?: 1998 ರಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳನ್ನು ಸೇರಿಸಲಾಗಿದೆ. ಮಣಿಪಾಲ್‌ ಆಸ್ಪತ್ರೆ, ಮಲ್ಯ ಆಸ್ಪತ್ರೆ, ವೋಕಾರ್ಡ್‌, ನಂಜಪ್ಪ ನರ್ಸಿಂಗ್‌ ಹೋಮ್‌ ಶಿವಮೊಗ್ಗ, ದೇವರಾಜ ಅರಸು ಮೆಡಿಕಲ್‌ ಕಾಲೇಜ್‌ ಕೋಲಾರ, ಬಸವೇಶ್ವರ ಹಾಸ್ಪಿಟಲ್‌ ಕಲಬುರಗಿ, ಅಪೋಲೊ ಹಾಸ್ಪಿಟಲ್‌ ಹೈದರಾಬಾದ್‌, ಜಸ್‌ಲಾಕ್‌ ಆಸ್ಪತ್ರೆ ಮುಂಬೈ, ಚೆನ್ನೈ ಅಪೋಲೊ ಆಸ್ಪತ್ರೆ ಹಾಗೂ
ತಮಿಳುನಾಡಿನ ವೆಲ್ಲೂರಿನ ಸಿಎಂಸಿ ಆಸ್ಪತ್ರೆ.

ಹೊಸ ಕಾಯ್ದೆ ಹೇಳುವುದೇನು?: ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ (ತಿದ್ದುಪಡಿ) ವಿಧೇಯಕಕ್ಕೆ ತಿದ್ದುಪಡಿ ತಂದು, 2018ರ ಮಾರ್ಚ್‌ನಲ್ಲಿ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಲಾಗಿದೆ. ಇದರ ಪ್ರಕಾರ ಮುಖ್ಯಮಂತ್ರಿಯೂ ಸೇರಿ ಶಾಸಕರು, ಮಾಜಿ ಶಾಸಕರು ಅಪಘಾತ ಮತ್ತು ಹೃದಯಾಘಾತದಂಥ ತುರ್ತು ಸಂದರ್ಭ ಹೊರತು ಪಡಿಸಿ ಕಡ್ಡಾಯವಾಗಿ
ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ಸರ್ಕಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲವೆಂದು ಸಂಬಂಧ ಪಟ್ಟ ಸರ್ಕಾರಿ ಆಸ್ಪತ್ರೆಯ ವೈದ್ಯರು ಅಧಿಕೃತವಾಗಿ ಸೂಚನೆ ನೀಡಿದರೆ ಮಾತ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.

ಆಂತರಿಕ ಸಂಘರ್ಷ: ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಹೊರಡಿಸಿರುವ ಈ ಆದೇಶವನ್ನು ವಿರೋಧಿಸಿರುವ ಶಾಸಕರು ತಮಗೆ ಈ ಯೋಜನೆ ಅನ್ವಯ ಆಗುವುದಿಲ್ಲವೆಂದು ಖಾಸಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದು ಚಿಕಿತ್ಸಾ ವೆಚ್ಚವನ್ನು ಮರು ಪಾವತಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಮತ್ತು ಶಾಸಕರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.

ತಿದ್ದುಪಡಿಗೆ ಸೂಚನೆ
ಹಳೆಯ ನಿಯಮ ಮುಂದಿಟ್ಟುಕೊಂಡು ಶಾಸಕರು ತಮ್ಮ ಆದೇಶವನ್ನು ಉಲ್ಲಂ ಸುತ್ತಿರುವುದರಿಂದ ಅದಕ್ಕೆ ಕಡಿವಾಣ ಹಾಕಲು ಸಭಾಧ್ಯಕ್ಷ ರಮೇಶ್‌ ಕುಮಾರ್‌ ಕರ್ನಾಟಕ ವಿಧಾನ ಮಂಡಲ (ಸದಸ್ಯರ ವೈದ್ಯಕೀಯ ಹಾಜರಾತಿ) ನಿಯಮ 1968 ರ ನಿಯಮ 5ಎಗೆ ತಿದ್ದುಪಡಿ ತರಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಈಗಾಗಲೇ ವಿಧಾನಸಭೆ ಸಚಿವಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ, ಡಿಸೆಂಬರ್‌ನಲ್ಲಿ ನಡೆಯುವ ಬೆಳಗಾವಿ ಅಧಿವೇಶನದಲ್ಲಿ ತಿದ್ದುಪಡಿ ವಿಧೇಯಕ ಮಂಡನೆ ಮಾಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ತಿದ್ದುಪಡಿಗೆ ಒಪ್ಪಿಗೆ ನೀಡದಂತೆ ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا