Urdu   /   English   /   Nawayathi

ಬಿಡಿಎ ಎಂಜಿನಿಯರ್‌ ರಘು ವಿಚಾರಣೆಗೆ ಅನುಮತಿ

share with us

ಬೆಂಗಳೂರು: 16 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಆರು ವರ್ಷದ ಹಿಂದೆ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾರ್ಯನಿರ್ವಾಹಕ ಎಂಜಿನಿಯರ್‌ ಎಲ್‌. ರಘು ವಿಚಾರಣೆಗೆ (ಪ್ರಾಸಿಕ್ಯೂಷನ್‌) ರಾಜ್ಯ ಸರ್ಕಾರ ಕೊನೆಗೂ ಅನುಮತಿ ನೀಡಿದೆ. ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಲೋಕಾಯುಕ್ತ ಪೊಲೀಸರು ಸದ್ಯದಲ್ಲೇ ರಘು ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ. ರಾಜ್ಯದ ಪ್ರಭಾವಿ ಕಾಂಗ್ರೆಸ್‌ ನಾಯಕರೊಬ್ಬರಿಗೆ ಆಪ್ತರು ಎನ್ನಲಾದ ಈ ಅಧಿಕಾರಿ ವಿರುದ್ಧ ವಿಚಾರಣೆಗೆ ಅನುಮತಿ ನೀಡುವಂತೆ ಲೋಕಾಯುಕ್ತ ಪೊಲೀಸರು 2014ರ ಅಕ್ಟೋಬರ್‌ 10ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಆನಂತರ ಒಂದರ ಹಿಂದೆ ಮತ್ತೊಂದು ಪತ್ರ ಬರೆದರೂ ಸರ್ಕಾರ ಕವಡೆ ಕಾಸಿನ ಕಿಮ್ಮತ್ತೂ ಕೊಟ್ಟಿರಲಿಲ್ಲ. 2017ರ ಮೇ 31ರಂದು ಅಂದಿನ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಆ ಸಮ್ಮುಖದಲ್ಲಿ ಸೇರಿದ್ದ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಹಿರಿಯ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿ ವಿವಿಧ ತನಿಖಾ ಸಂಸ್ಥೆಗಳಿಂದ ಬಂದಿದ್ದ ಮನವಿಗಳನ್ನು ಕುರಿತು ಸುದೀರ್ಘವಾಗಿ ಚರ್ಚಿಸಲಾಗಿತ್ತು. ರಘು ವಿಚಾರಣೆಗೆ ಹತ್ತು ದಿನದೊಳಗೆ ಅನುಮತಿ ನೀಡುವಂತೆ ಕುಂಟಿಆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಆಗಿನ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ ಹದಿನಾರು ತಿಂಗಳ ಬಳಿಕ ಸರ್ಕಾರ ರಘು ವಿಚಾರಣೆಗೆ ಅನುಮತಿ ನೀಡಿದೆ. 2012ರ ನವೆಂಬರ್‌ ತಿಂಗಳಲ್ಲಿ ರಘು ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಆಗ ಅವರು ರಾಷ್ಟ್ರೀಯ ಹೆದ್ದಾರಿಯ ಕಾರ್ಯನಿವಾರ್ಹಕ ಎಂಜಿನಿಯರ್‌ ಆಗಿದ್ದರು.

ಆರ್‌ಪಿಸಿ ಲೇಔಟ್‌ ಮನೆ, ಮಾಗಡಿ ರಸ್ತೆ ಮನೆ, ದಾಸರಹಳ್ಳಿ ಕೆಎಚ್‌ಬಿ ಕಾಲೋನಿ ವಾಣಿಜ್ಯ ಸಂಕೀರ್ಣ, ಮೂರು ನಿವೇಶನ, ಮೈಸೂರಿನಲ್ಲಿ ಒಂದು ನಿವೇಶನ, 2.7 ಕೆ.ಜಿ ಚಿನ್ನ, 20 ಕೆ.ಜಿ ಬೆಳ್ಳಿ ಮತ್ತು ಮೂರು ಕಾರುಗಳು ಒಳಗೊಂಡಂತೆ ₹ 1.92 ಕೋಟಿ ಮೌಲ್ಯದಷ್ಟು ಆದಾಯ ಮೀರಿ ಆಸ್ತಿ ಗಳಿಸಿರುವುದು ಪತ್ತೆಯಾಗಿತ್ತು ಎಂದು ಲೋಕಾಯುಕ್ತ ಪೊಲೀಸರು ಆರೋಪಿಸಿದ್ದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا