Urdu   /   English   /   Nawayathi

ಮಂಗಳೂರು- ಬೆಂಗಳೂರು ರೈಲು ಮತ್ತೆ ಆರಂಭ

share with us

ಮಂಗಳೂರು: 09 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಸುಮಾರು ಎರಡು ತಿಂಗಳ ದೀರ್ಘಕಾಲದ ಬಳಿಕ ಮಂಗಳೂರು- ಬೆಂಗಳೂರು ಮಧ್ಯೆ ಪ್ಯಾಸೆಂಜರ್ ರೈಲು ಸಂಚಾರ ಅ.10ರಂದು ಆರಂಭವಾಗಲಿದೆ. ಇದರೊಂದಿಗೆ ನವರಾತ್ರಿ ಆರಂಭದಲ್ಲಿಯೇ ಕರಾವಳಿ ಜನತೆಗೆ ರೈಲ್ವೆ ಇಲಾಖೆ ಸಿಹಿ ಸುದ್ದಿಯನ್ನು ನೀಡಿದೆ. 

ಬೆಂಗಳೂರು - ಕಾರವಾರ/ಕಣ್ಣೂರು - ಬೆಂಗಳೂರು ರಾತ್ರಿ ಎಕ್ಸ್‌ಪ್ರೆಸ್ ರೈಲು ಬುಧವಾರ ಆರಂಭವಾಗಲಿದೆ. ಬೆಂಗಳೂರು ಹಗಲು ರೈಲು ಗುರುವಾರ ಓಡಾಟ ಶುರು ಮಾಡಲಿದೆ ಎಂದು ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ. 

ಸಕಲೇಶಪುರ- ಸುಬ್ರಹ್ಮಣ್ಯ ಘಾಟಿ ಪ್ರದೇಶದಲ್ಲಿ ಭಾರಿ ಮಳೆ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ ಮಂಗಳೂರು - ಬೆಂಗಳೂರು ರೈಲು ಸೇವೆಯನ್ನು ರದ್ದುಗೊಳಿಸಲಾಗಿತ್ತು. ಸುಬ್ರಹ್ಮಣ್ಯ ಮತ್ತು ಎಡಕುಮೇರಿ ನಡುವೆ ಸುಮಾರು 55 ಕಿಮೀ. ಉದ್ದದ ರೈಲ್ವೆ ಹಳಿಯ ಮೇಲೆ 65ಕ್ಕೂ ಹೆಚ್ಚು ಕಡೆಗಳಲ್ಲಿ ಭೂಕುಸಿತವಾದ ಕಾರಣ ಈ ಮಾರ್ಗದಲ್ಲಿ ರೈಲು ಸಂಚಾರ ನಿಷೇಧಿಸಲಾಗಿತ್ತು. 

ರೈಲ್ವೆ ಹಳಿಯಲ್ಲಿ ಭೂಕುಸಿತ ಸಂಭವಿಸಿದ 65 ಕಡೆಗಳಲ್ಲಿ 2ಲಕ್ಷ ಕ್ಯುಬಿಕ್ ಮೀಟರ್‌ನಷ್ಟು ಮಣ್ಣು ಮತ್ತು ಕಲ್ಲು ರೈಲ್ವೆ ಹಳಿಯನ್ನು ಸಮಾಧಿ ಮಾಡಿತ್ತು. ರೈಲ್ವೆ ಇಲಾಖೆಯ ತಾಂತ್ರಿಕ ವಿಭಾಗ ಸಮರೋಪಾದಿಯಲ್ಲಿ ಕಾಮಗಾರಿ ನಡೆಸಿದೆ. ಈ ಮಾರ್ಗದಲ್ಲಿ ಪ್ರಾಯೋಗಿಕ ಓಡಾಟದ ಬಳಿಕ ಕಳೆದ ಸೆ.1ರಿಂದ ಈ ಮಾರ್ಗದಲ್ಲಿ ಗೂಡ್ಸ್ ರೈಲು ಸಂಚಾರ ಆರಂಭಿಸಲಾಗಿತ್ತು. ಇದೀಗ ಈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಓಡಾಟಕ್ಕೆ ಅವಕಾಶ ಒದಗಿಸಲಾಗಿದೆ. 

ಮಂಗಳೂರು -ಬೆಂಗಳೂರು ರೈಲು ಸಂಚಾರ ಆರಂಭದೊಂದಿಗೆ ಪ್ರಾಕೃತಿಕ ವಿಕೋಪದಿಂದ ಕಡಿದು ಹೋಗಿದ್ದ ಬೆಂಗಳೂರು ನಡುವೆ ಬಹುತೇಕ ಸಂಪರ್ಕ ಮತ್ತೆ ಸುಗಮಗೊಂಡಂತಾಗುತ್ತದೆ. ಕಾರವಾರದಿಂದ ಬೆಂಗಳೂರಿಗೆ ತೆರಳುವ ರೈಲು ಮಾತ್ರ ಭೋಗಿಗಳ ಕೊರತೆಯಿಂದ ಶನಿವಾರ ಕಾರವಾರದಿಂದ ಸಂಚಾರ ಆರಂಭಿಸಲಿದೆ. ಉಳಿದ ರೈಲುಗಳು ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿವೆ ಎಂದು ಇಲಾಖೆ ಮೂಲ ತಿಳಿಸಿದೆ. 

ವರ್ಕಔಟ್ ಆಗದ ಕೇರಳ ಮಾರ್ಗ ! 
ಸಕಲೇಶಪುರ ಭೂಕುಸಿತ ಸಂದರ್ಭ ಕೇರಳ ಮಾರ್ಗವಾಗಿ ಬೆಂಗಳೂರು ರೈಲು ಸಂಚಾರ ಆರಂಭಿಸಲಾಗಿತ್ತು. ಕೇರಳ ಮಾರ್ಗದಲ್ಲಿ ಪ್ರತೀ ಪ್ರಯಾಣದ ಅವಧಿ ಎಂಟರಿಂದ 10 ಗಂಟೆ ಹೆಚ್ಚುವರಿ ಬೀಳಲು ಆರಂಭಿಸಿದ ಪರಿಣಾಮ ಈ ರೈಲು ಕೇರಳ ಮಾರ್ಗದ ಇತರ ರೈಲುಗಳ ಓಡಾಟದ ಮೇಲೆ ಅಡ್ಡ ಪರಿಣಾಮ ಬೀರಲಾರಂಭಿಸಿತು. ಇದರಿಂದ ಕೆಲವೇ ದಿನಗಳಲ್ಲೇ ರೈಲು ಸಂಚಾರವನ್ನು ನಿಲ್ಲಿಸಲಾಯಿತು. 

ಆಗಸ್ಟ್ 14ರಿಂದ ಸ್ತಬ್ದ 
ಸಕಲೇಶಪುರ ಘಾಟಿ ಪ್ರದೇಶದಲ್ಲಿ ಭೂ ಕುಸಿತದಿಂದ ಮಂಗಳೂರು -ಬೆಂಗಳೂರು ಮಧ್ಯೆ ರೈಲು ಓಡಾಟ ಆಗಸ್ಟ್ 14ರಿಂದ ಸ್ಥಗಿತಗೊಂಡಿತ್ತು. 

ವಿ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا