Urdu   /   English   /   Nawayathi

‘ಮಹಾ’ ಚಿತ್ರಮಂದಿರಗಳ ಬಳಿ ಸ್ಫೋಟ ಪ್ರಕರಣ: ತಪ್ಪೊಪ್ಪಿದ ಸನಾತನ ಸಂಸ್ಥೆ ಸದಸ್ಯರು

share with us

ಬೆಂಗಳೂರು: 09 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಮಹಾರಾಷ್ಟ್ರದ ಚಿತ್ರಮಂದಿರಗಳ ಬಳಿ 2008ರಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣದ ಆರೋಪದಲ್ಲಿ ಖುಲಾಸೆಗೊಂಡಿರುವ ಸನಾತನ ಸಂಸ್ಥೆಯ ಸದಸ್ಯರು ತಪ್ಪೊಪ್ಪಿಕೊಂಡಿದ್ದಾರೆ. ಠಾಣೆ, ಪನ್ವೇಲ್ ಮತ್ತು ವಾಶಿ ಚಿತ್ರ ಮಂದಿರಗಳ ಬಳಿ ನಡೆದಿದ್ದ ಸ್ಫೋಟದಲ್ಲಿ ಗೋವಾ ಮೂಲದ ಸನಾತನ ಸಂಸ್ಥೆಯ ಸದಸ್ಯರ ಕೈವಾಡವಿದೆ ಎನ್ನಲಾಗಿತ್ತು. ಮಂಗೇಶ್ ದಿನಕರ್ ನಿಕಮ್ ಮತ್ತು ಹರಿಭಾವು ಕೃಷ್ಣ ದಿವಾಕರ್ ಆರೋಪಿಗಳಾಗಿದ್ದರು. ಇವರು ಇಂಡಿಯಾ ಟುಡೆ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.

ಚಿತ್ರ ಮಂದಿರಗಳ ಬಳಿ ಬಾಂಬ್‌ ಇಟ್ಟಿದ್ದ ಆರೋಪ ಎದುರಿಸುತ್ತಿದ್ದ ಮಂಗೇಶ್ ದಿನಕರ್ ನಿಕಮ್ ಅವರನ್ನು ವಿಚಾರಣಾ ನ್ಯಾಯಾಲಯ ಏಳು ವರ್ಷ ಹಿಂದೆ ಖುಲಾಸೆಗೊಳಿಸಿತ್ತು. ಮರಾಠಿ ಚಿತ್ರದಲ್ಲಿ ಹಿಂದೂ ದೇವರು ಮತ್ತು ದೇವಿಯರನ್ನು ತಪ್ಪಾಗಿ ಬಿಂಬಿಸಿದ್ದಕ್ಕೆ ಪ್ರತೀಕಾರವಾಗಿ ಬಾಂಬ್‌ ಇಟ್ಟಿದ್ದಾಗಿ ನಿಕಮ್ ಒಪ್ಪಿಕೊಂಡಿದ್ದಾರೆ. ಸತಾರಾ ಜಿಲ್ಲೆಯಲ್ಲಿರುವ ಅವರ ನಿವಾಸಕ್ಕೆ ತೆರಳಿ ವರದಿಗಾರರು ಅವರನ್ನು ಮಾತಿಗೆಳೆದಿದ್ದರು.

ಮಂಗೇಶ್ ದಿನಕರ್ ನಿಕಮ್ ಹೇಳಿದ್ದು...

‘ನಾನು ವಾಶಿಯಲ್ಲಿದ್ದೆ. ಅಲ್ಲಿ ಕಚ್ಚಾ ಬಾಂಬ್ ಇಟ್ಟು ನಾನು ಹೊರ ಬಂದೆ. ಅದು ನನ್ನ ಕೆಲಸವಾಗಿತ್ತು. ನಮ್ಮ ದೇವರು ಮತ್ತು ದೇವಿಯರನ್ನು ಅಪಹಾಸ್ಯ ಮಾಡಲಾಗಿತ್ತು. ಅದನ್ನು ತಡೆಯಲು ನಾವು ಪ್ರಯತ್ನಿಸಿದ್ದೆವು ಅಷ್ಟೆ, ಮತ್ತಿನ್ನೇನೂ ಇಲ್ಲ’ ಎಂದು ನಿಕಮ್ ಹೇಳಿದ್ದಾರೆ.

ಆಗ, ‘ನೀವೇ ಅದರಲ್ಲಿ ಭಾಗಿಯಾಗಿದ್ದೀರಾ’ ಎಂದು ವರದಿಗಾರರು ಪ್ರಶ್ನಸಿದ್ದಾರೆ.

ಇದಕ್ಕುತ್ತರಿಸಿದ ಅವರು, ‘ಹೌದು, ನಾನೇ ಭಾಗಿಯಾಗಿದ್ದೆ. ನಾವು ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿದ್ದೆವು. ಆದರೆ ಏನೂ ಪ್ರಯೋಜನವಾಗಲಿಲ್ಲ. ಹಾಗಾಗಿ ಜನರನ್ನು ಅದರಿಂದ ದೂರವುಳಿಯುವಂತೆ ಬೆದರಿಸಲು ಪ್ರಯತ್ನಿಸಿದೆವು’ ಎಂದು ಹೇಳಿದ್ದಾರೆ.

2000ನೇ ಇಸವಿಯಿಂದ ಸನಾತನ ಸಂಸ್ಥೆಯನ್ನು ಅನುಸರಿಸುತ್ತಿರುವುದಾಗಿಯೂ ತಾನೊಬ್ಬ ಅನ್ವೇಷಕ ಎಂದೂ ನಿಕಮ್ ಹೇಳಿಕೊಂಡಿದ್ದಾರೆ. ಅಲ್ಲದೆ, ಪನ್ವೇಲ್‌ನಲ್ಲಿರುವ ಸನಾತನ ಆಶ್ರಮಕ್ಕೆ ಭೇಟಿ ನೀಡುತ್ತಿದ್ದುದಾಗಿಯೂ ಅಲ್ಲಿ ಇತರರ ಸಂಪರ್ಕವಾಯಿತು ಎಂದೂ ತಿಳಿಸಿದ್ದಾರೆ. ಸಂಸ್ಥೆಯ ಸೌಲಭ್ಯದೊಂದಿಗೆ ಪನ್ವೇಲ್‌ನಲ್ಲಿರುವ ಆಶ್ರಮದಲ್ಲಿ ಸಂಚು ರೂಪಿಸಲಾಗಿತ್ತು ಎಂದೂ ಹೇಳಿದ್ದಾರೆ.

ತಪ್ಪೊಪ್ಪಿದ ಹರಿಭಾವು ಕೃಷ್ಣ ದಿವಾಕರ್

ಮತ್ತೊಬ್ಬ ಆರೋಪಿ ಹರಿಭಾವು ಕೃಷ್ಣ ದಿವಾಕರ್ ಸಹ ಸ್ಫೋಟಕಗಳನ್ನು ಹೊಂದಿದ್ದ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್) ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ ಪ್ರಕಾರ, ದಿವಾಕರ್‌ಗೆ ಪ್ರಕರಣದ ಇಬ್ಬರು ಅಪರಾಧಿಗಳ ಜತೆ ನಿಕಟ ಸಂಪರ್ಕವಿತ್ತು. ಆದಾಗ್ಯೂ, ದಾಳಿ ನಡೆದ ಮೂರು ವರ್ಷಗಳ ನಂತರ ಅವರು ಖುಲಾಸೆಗೊಂಡಿದ್ದರು.

ರಾಯಗಡದಲ್ಲಿರುವ ಅವರ ನಿವಾಸದಲ್ಲಿ ಇಂಡಿಯಾ ಟುಡೆ ವರದಿಗಾರರು ಅವರನ್ನು ಪ್ರಶ್ನಿಸಿದಾಗ ಸ್ಫೋಟಕಗಳನ್ನು ಹೊಂದಿದ್ದುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಈ ಅಂಶ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿರಲಿಲ್ಲ.

‘ನಾನು ಅಲ್ಲಿದ್ದಾಗ ಪೊಲೀಸರು ಬಂದು ಶೋಧ ಕಾರ್ಯ ನಡೆಸಿದರು. ತನಿಖೆ ನಡೆಸಿದರು. ನನ್ನ ಬಳಿ ಇದ್ದುದನ್ನು ಅವರಿಗೆ ಹಸ್ತಾಂತರಿಸಿದ್ದೆ’ ಎಂದು ದಿವಾಕರ್ ಹೇಳಿದ್ದಾರೆ.

‘ನಿಮ್ಮ ಬಳಿ ಏನಿತ್ತು’ ಎಂದು ವರದಿಗಾರ ಅವರನ್ನು ಪ್ರಶ್ನಿಸಿದ್ದಾರೆ.

ಅದಕ್ಕುತ್ತರಿಸಿ, ‘ಆಗ ನನ್ನ ಬಳಿ ಒಂದೆರಡು ಬಂದೂಕು ಮತ್ತು ಸ್ಫೋಟಕಗಳಿದ್ದವು. ಜಿಲೆಟಿನ್ ಕಡ್ಡಿಗಳು ಮತ್ತು ಡಿಜಿಟಲ್ ಮೀಟರ್‌ಗಳಿದ್ದುವು. ಸುಮಾರು 20 ಜಿಲೆಟಿನ್‌ಗಳು ಮತ್ತು 23 ಸ್ಫೋಟಕಗಳಿದ್ದವು. ಎಲ್ಲವನ್ನೂ ಪೊಲೀಸರು ತೆಗೆದುಕೊಂಡರು. ಸುಮಾರು ಐದಾರು ದಿನಗಳಿಂದ ಅವು ನನ್ನ ಬಳಿ ಇದ್ದವು’ ಎಂದು ತಿಳಿಸಿದ್ದಾರೆ.

ಎಟಿಎಸ್‌ ಚಾರ್ಜ್‌ಶೀಟ್‌ನಲ್ಲಿ ರಮೇಶ್ ಹನುಮಂತ್ ಗಡ್ಕರಿ, ಮಂಗೇಶ್ ದಿನಕರ್ ನಿಕಮ್, ವಿಕ್ರಮ್ ವಿನಯ್ ಭಾವೆ, ಸಂತೋಷ್ ಸೀತಾರಾಮ್ ಅಂಗ್ರೆ, ಹರಿಭಾವು ಕೃಷ್ಣ ದಿವಾಕರ್ ಮತ್ತು ಹೇಮಂತ್ ತುಕಾರಾಮ್ ಚಲ್ಕೆ ಹೆಸರು ಉಲ್ಲೇಖವಾಗಿತ್ತು. ಈ ಪೈಕಿ ಗಡ್ಕರಿ ಮತ್ತು ಭಾವೆಯನ್ನು ಅಪರಾಧಿಗಳು ಎಂದು 2011ರಲ್ಲಿ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು. ಉಳಿದ ನಾಲ್ವರು ಖುಲಾಸೆಗೊಂಡಿದ್ದರು.

ಮಹಾರಾಷ್ಟ್ರ ಸರ್ಕಾರದಿಂದ ಕ್ರಮ ಕೈಗೊಳ್ಳುವ ಭರವಸೆ

ರಹಸ್ಯ ಕಾರ್ಯಾಚರಣೆ ಪ್ರಸಾರವಾದ ಬಳಿಕ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸರ್ಕಾರ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.

‘ಸರ್ಕಾರ ಕ್ರಮ ಕೈಗೊಳ್ಳಲಿದೆ. ಅವರನ್ನು ಖುಲಾಸೆಗೊಳಿಸಲಾಗಿದೆ ಎಂದಾದಲ್ಲಿ ಕಾನೂನಿನ ಅಡಿಯಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆಯೇ ಎಂಬ ಬಗ್ಗೆ ಗಮನಹರಿಸಲಾಗುವುದು. ಎಲ್ಲ ಸಾಕ್ಷಿಗಳನ್ನು ಕೇಂದ್ರಕ್ಕೆ ಕಳುಹಿಸಲಿದ್ದೇವೆ’ ಎಂಬುದಾಗಿ ಗೃಹ ಸಚಿವ ದೀಪಕ್ ಕೇಸರ್‌ಕರ್ ಹೇಳಿದ್ದಾರೆ ಎಂದು ಇಂಡಿಯಾ ಟುಡೆ ಟಿವಿ ವರದಿ ತಿಳಿಸಿದೆ.

ಸನಾತನ ಸಂಸ್ಥೆಯ ನಿಷೇಧ ಸಾಧ್ಯತೆ ಬಗ್ಗೆ ಕೇಳಲಾದ ಪ್ರಶ್ನೆಗೆ, ಕಾನೂನು ರೀತಿಯಲ್ಲಿ ರಾಜ್ಯ ಸರ್ಕಾರವು ಕ್ರಮ ಕೈಗೊಳ್ಳಲಿದೆ ಎಂದಷ್ಟೇ ಅವರು ಹೇಳಿದರು ಎಂದು ವರದಿ ಉಲ್ಲೇಖಿಸಿದೆ.

ಖುಲಾಸೆಗೊಂಡವರ ವಿರುದ್ಧ ಸಲ್ಲಿಸಲಾಗಿರುವ ಮೇಲ್ಮನವಿ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಹೈಕೋರ್ಟ್‌ ವಿಚಾರಣೆ ವೇಳೆ ಇಂಡಿಯಾ ಟುಡೆ ಟಿವಿಯ ತನಿಖೆಯನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುವುದು ಎಂದೂ ಸಚಿವರು ಭರವಸೆ ನೀಡಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا