Urdu   /   English   /   Nawayathi

BIG NEWS : ಲಾಂಗು ಮಚ್ಚುಗಳಿಂದ ಕೊಚ್ಚಿ ತುಮಕೂರು ಮಾಜಿ ಮೇಯರ್ ಭೀಕರ ಹತ್ಯೆ..!

share with us

ತುಮಕೂರು: 30 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ತುಮಕೂರು ಮಹಾ ನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ಹಾಲಿ ಕಾರ್ಪೊರೇಟರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಅವರನ್ನು ಇಂದು ಬೆಳಗ್ಗೆ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಳ್ಳಂಬೆಳಗ್ಗೆ ಕಣ್ಣೆದುರೇ ನಡೆದ ಈ ಕಗ್ಗೊಲೆಯಿಂದ ಜನ ಬೆಚ್ಚಿಬಿದ್ದಿದ್ದು, ಸಾವಿರಾರು ಮಂದಿ ಜೆಡಿಎಸ್ ಕಾರ್ಯಕರ್ತರು, ಸಾರ್ವಜನಿಕರು ಮೃತದೇಹ ಇರಿಸಿರುವ ಸರ್ಕಾರಿ ಆಸ್ಪತ್ರೆಗೆ ಧಾವಿಸಿದ್ದಾರೆ.

ರವಿಕುಮಾರ ಇಂದು ಬೆಳಗ್ಗೆ ವಾಯುವಿಹಾರ ಮುಗಿಸಿ ತಮ್ಮ ವಾರ್ಡ್‍ನ ಜನರ ಸಮಸ್ಯೆ ಆಲಿಸಿದ್ದಾರೆ. ಬಳಿಕ ರಾಷ್ಟ್ರೀಯ ಹೆದ್ದಾರಿ 48ರ ಬಟವಾಡಿ ಸೇತುವೆ ಬಳಿಯ ಸರ್ವೀಸ್ ರಸ್ತೆಯಲ್ಲಿ ಇರುವ ತಮ್ಮ ಚಿಕ್ಕಪ್ಪ ಮೂರ್ತಿ ಅವರ ಹೋಟೆಲ್‍ಗೆ ಹೋಗಿ ಟೀ ಕುಡಿದಿದ್ದಾರೆ. ಅಲ್ಲಿ ಸ್ವಲ್ಪ ಹೊತ್ತು ಅವರೊಂದಿಗೆ ಮಾತನಾಡಿ ಮನೆ ಕಡೆಗೆ ನಡೆದುಕೊಂಡು ಹೋಗಲು ಅಣಿಯಾಗುತ್ತಿದ್ದಂತೆ ಕ್ಯಾಂಟರ್ ಲಾರಿಯಿಂದ ಇಳಿದ ಆರು ಮಂದಿ ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಏಕಾಏಕಿ ರವಿ ಅವರ ಮೇಲೆ ಮುಗಿಬಿದ್ದು, ಕೊಚ್ಚಿ ಕೊಲೆ ಮಾಡಿದ್ದಾರೆ. ತಕ್ಷಣ ಅದೇ ವಾಹನದಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಅವರೆಲ್ಲರೂ ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡಿದ್ದರು.  ಮಾರಕಾಸ್ತ್ರಗಳಿಂದ ಹೊಡೆದಿರುವುದುರಿಂದ ರವಿ ಕುಮಾರ್ ಅವರ ತಲೆ ಬುರುಡೆ ಕತ್ತರಿಸ್ಪಟ್ಟಿದ್ದು, ಮೆದುಳು ರಸ್ತೆಯಲ್ಲಿ ಬಿದ್ದಿತ್ತು. ತಕ್ಷಣ ಸ್ಥಳಕ್ಕಾಗಮಿಸಿದ ಕ್ಯಾತ್ಸಂದ್ರ ಪೊಲೀಸರು ಮೃತದೇಹವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.ರವಿ ಅವರ ಚಿಕ್ಕಪ್ಪ ಮೂರ್ತಿ ಅವರ ಕಣ್ಣೆದುರೇ ಈ ಘಟನೆ ನಡೆದಿದ್ದು, ಅವರ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.  ರವಿಗೆ ನಾನೇ ಎರಡು ಕಪ್ ಟೀ ಬಲವಂತವಾಗಿ ನೀಡಿದೆ. ಸ್ವಲ್ಪ ಹೊತ್ತು ಅಂಗಡಿಯಲ್ಲೇ ನಿಂತು ಮಾತನಾಡಿ, ಮನೆಗೆ ಕಡೆಗೆ ಹೊರಡುವಷ್ಟರದಲ್ಲಿ ಈ ಕೃತ್ಯ ನಡೆದಿದೆ ಎಂದು ಈ ಸಂಜೆಗೆ ಅವರು ತಿಳಿಸಿದರು.

Tumakuru-Ex-Mayor-Murder--2

ಇತ್ತೀಚೆಗೆ ನಡೆದ ತುಮಕೂರು ಪಾಲಿಕೆ ಚುನಾವಣೆಯ ವೇಳೆ 22ನೆ ವಾರ್ಡ್‍ನಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದ ರವಿ ಕುಮಾರ್ ಈ ಹಿಂದೆ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಆಗಿಯೂ ಕೆಲಸ ಮಾಡಿದ್ದರು. ಮೂಲತಃ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಕಡಿಯಾಲದ ನಿವಾಸಿಯಾಗಿದ್ದ ರವಿಕುಮಾರ್ 20 ವರ್ಷಗಳ ಹಿಂದೆ ತುಮಕೂರು ನಗರಕ್ಕೆ ಬಂದು ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು.ನಗರಸಭೆ ಸದಸ್ಯ ಆಂಜಿನಪ್ಪ ಅವರ ಒಡನಾಡ ಬೆಳೆಸಿಕೊಂಡ ರವಿ ಅವರು ರಾಜಕೀಯದಲ್ಲೂ ಕಾಣಿಸಿಕೊಳ್ಳತೊಡಗಿದರು. ರೌಡಿ ಶೀಟರ್ ಆಗಿದ್ದ ಆಂಜಿನಪ್ಪ ಅವರನ್ನು ಬಾಲಾಜಿ ಮತ್ತು ತಂಡ, ಅಗ್ನಿಶಾಮಕ ಠಾಣೆಯ ರೈಲ್ವೆ ಗೇಟ್ ಬಳಿ ಬರ್ಬರವಾಗಿ ಕೊಲೆ ಮಾಡುತ್ತಾರೆ.

ಬಳಿಕ ರವಿ ಕುಮಾರ್ ಟೋಪಿ ಸತೀಶ್‍ನ ಜೊತೆ ಸೇರಿ ರಿಯಲ್ ಎಸ್ಟೇಟ್ ಮತ್ತಿತರ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಕ್ಯಾತ್ಸಂದ್ರ ಮತ್ತು ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದ ರವಿ ಕುಮಾರ್‍ನಿಗೂ ಟೋಪಿ ಸತೀಶ್ ನಡುವೆ ರಾಜಕೀಯ ಕಾರಣಕ್ಕಾಗಿ ವೈಷಮ್ಯ ಉಂಟಾಗುತ್ತದೆ.
ಗುಬ್ಬಿ ಶಾಸಕ ಹಾಗೂ ಕೈಗಾರಿಕಾ ಸಚಿವ ಎಸ್.ಆರ್. ಶ್ರೀನಿವಾಸ್ ಅವರ ಆಪ್ತ ಶಿಷ್ಯನಾಗಿದ್ದ ರವಿಕುಮಾರ್ ಮೇಲೆ ಹಲವು ಬಾರಿ ದಾಳಿಗಳು ನಡೆದಿದ್ದವು. ಈ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದರು. ದೊಡ್ಡಬಳ್ಳಾಪುರ ಮತ್ತು ಬೆಂಗಳೂರಿನ ರೌಡಿಗಳ ತಂಡ ರವಿಕುಮಾರ್ ಕೊಲೆಗೆ ಸುಪಾರಿ ಪಡೆದಿದೆ ಎಂದು ಪೊಲೀಸರು ಶಂಕಿಸಿ, ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾ ಪೊಲೀಸರು ಕೌನ್ಸಿಲರ್‍ಗೆ ಮಾಹಿತಿ ನೀಡಿದ್ದರು.

Tumakuru-Ex-Mayor-Murder--3

ಕಳೆದ 15 ದಿನಗಳಿಂದ ದುಷ್ಕರ್ಮಿಗಳ ತಂಡ ರವಿಕುಮಾರ್ ಹತ್ಯೆಗೆ ಸಂಚು ರೂಪಿಸಿ ಅವರ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಆದರೆ ಇಂದು ಬೆಳಗ್ಗೆ ಕಾದು ಕುಳಿತು ಹತ್ಯೆ ಮಾಡಿದೆ. ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ, ಡಿವೈಎಸ್‍ಪಿ ನಾಗರಾಜ್, ಕ್ಯಾತ್ಸಂದ್ರ ವೃತ್ತ ನಿರೀಕ್ಷಕ ರಾಮಕೃಷ್ಣ, ಪತ್ತೆದಳದ ಇನ್ಸ್‍ಪೆಕ್ಟರ್ ರಾಘವೇಂದ್ರ, ಸಬ್ ಇನ್ಸ್‍ಪೆಕ್ಟರ್ ನವೀನ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.  ಈ ಬಗ್ಗೆ ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ, ಘಟನೆಯ ಬಗ್ಗೆ ಕೇಂದ್ರ ವಲಯ ಐಜಿಪಿ ದಯಾನಂದ ಅವರ ಗಮನಕ್ಕೆ ತರಲಾಗಿದೆ. ಆರೋಪಿಗಳ ಪತ್ತೆ ಮಾಹಿತಿ ಲಭ್ಯವಾಗಿದ್ದು, ಶೀಘ್ರವೇ ಅವರನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದರು.

Tumakuru-Ex-Mayor-Murder--4

Tumakuru-Ex-Mayor-Murder--5

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا