Urdu   /   English   /   Nawayathi

ರಸ್ತೆಯಲ್ಲಿ ಸಿಕ್ಕಿದ ಚಿನ್ನವನ್ನು ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ದಿನಗೂಲಿ ನೌಕರ!

share with us

ಮಂಗಳೂರು: 27 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಸಾಮಾನ್ಯವಾಗಿ ಯಾರಾದರೂ  ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಚಿನ್ನ ತುಂಬಿದ ಬ್ಯಾಗ್ ಬಿದ್ದಿರುವುದು ನೋಡಿದರೆ ಏನು ಮಾಡುತ್ತಾರೆ? ಖುಷಿಯಿಂದ ಯಾರಿಗೂ ಕಾಣದಂತೆ ಎತ್ತಿ ಬಚ್ಚಿಟ್ಟುಕೊಂಡು ಮನೆಗೆ ತರುತ್ತಾರೆ ಅಲ್ಲವೇ? ಆದರೆ ಮಂಗಳೂರಿನ 38 ವರ್ಷದ ಮೊಹಮ್ಮದ್ ಆಲಿ ಎಂಬುವವರು ಸುಮಾರು 3 ಲಕ್ಷದ 20 ಸಾವಿರ ಮೌಲ್ಯದ ಚಿನ್ನವನ್ನು ಅದರ ಮಾಲಿಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ನಡೆದ ಘಟನೆಯೇನು?: ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿಯಲ್ಲಿ ದಿನಗೂಲಿ ನೌಕರರಾಗಿರುವ ಮೊಹಮ್ಮದ್ ಆಲಿ ಮೊನ್ನೆ ಮಂಗಳವಾರ ಸಾಯಂಕಾಲ ಕೆಲಸ ಮುಗಿಸಿಕೊಂಡು ತಮ್ಮ ಮನೆಗೆ ಹಿಂತಿರುಗುತ್ತಿರುವಾಗ ರಸ್ತೆ ಮೇಲೆ ಬ್ಯಾಗು ಬಿದ್ದಿರುವುದನ್ನು ಕಂಡರು. ಅದನ್ನು ತೆರೆದು ನೋಡಿದಾಗ ಅದರ ತುಂಬ ಚಿನ್ನ ಮತ್ತು ಮೊಬೈಲ್ ಫೋನ್ ಕಾಣಿಸಿತು. ಅದರಲ್ಲಿರುವ ಚೀಟಿಯೊಂದರಲ್ಲಿ ಬ್ಯಾಗಿನ ಮಾಲಿಕ ಇತ್ತೀಚೆಗೆ ತಿರುಪತಿಗೆ ಹೋಗಿದ್ದರು ಎಂದು ಕೂಡ ಗೊತ್ತಾಯಿತು.
ಮೊಹಮ್ಮದ್ ಆಲಿ ಕೂಡಲೇ ಬ್ಯಾಗನ್ನು ತೆಗೆದುಕೊಂಡು ಹೋಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದರು. ಪೊಲೀಸ್ ಇನ್ಸ್ ಪೆಕ್ಟರ್ ಅವಿನಾಶ್ ಬ್ಯಾಗನ್ನು ತಪಾಸಣೆ ಮಾಡಿ ಅದರಲ್ಲಿರುವ ಮೊಬೈಲ್ ಮೂಲಕ ಬ್ಯಾಗನ್ನು ಕಳೆದುಕೊಂಡಿದ್ದ ಮಹಿಳೆಯ ಪತಿಗೆ ಕರೆ ಮಾಡಿದರು. ಕೆಲ ಹೊತ್ತಿನ ನಂತರ ಉಡುಪಿಯ ಬೈಂದೂರು-ಕೊನೂರಿನ ಕ್ಯಾಬ್ ಚಾಲಕ ರಾಮಚಂದ್ರ ದೇವಾಡಿಗ ತನ್ನ ಬ್ಯಾಗು ಎಂದು ಹೇಳಿಕೊಂಡು ಪೊಲೀಸ್ ಠಾಣೆಗೆ ಬಂದರು.
ರಾಮಚಂದ್ರ ದೇವಾಡಿಗ ಮತ್ತು ಅವರ ಪತ್ನಿ ಪ್ರೇಮಾ ಮೊನ್ನೆ 24ರಂದು ತಿರುಪತಿಗೆ ಹೋಗಿ ಬಂದು ಬೆಂಗಳೂರಿನಿಂದ ತಮ್ಮ ಊರಿಗೆ ವಾಪಸಾಗುತ್ತಿದ್ದರು. ರಾತ್ರಿ ಬೆಂಗಳೂರಿನಿಂದ ಖಾಸಗಿ ಬಸ್ಸಿನಲ್ಲಿ ಬರುವಾಗ ಭದ್ರತೆಗೆಂದು ಧರಿಸಿದ್ದ ಚಿನ್ನವನ್ನೆಲ್ಲಾ ಕಳಚಿ ಬ್ಯಾಗಿನಲ್ಲಿ ಹಾಕಿಟ್ಟಿದ್ದರು. ಅದು ಮಾರ್ಗ ಮಧ್ಯೆ ಬಿದ್ದು ಹೋಗಿತ್ತು.
ನಸುಕಿನ ಜಾವ 4.30ಕ್ಕೆ ಮಹಿಳೆಗೆ ತನ್ನ ಚಿನ್ನದ ಬ್ಯಾಗು ಕಾಣೆಯಾಗಿದ್ದು ಗೊತ್ತಾಗಿತ್ತು. ಈ ಬಗ್ಗೆ ಬಸ್ಸಿನ ನಿರ್ವಾಹಕರಿಗೆ ಹೇಳಿದಾಗ ಅವರು ಎಲ್ಲಾ ಕಡೆ ಹುಡುಕಿದ್ದರು. ಬೇರೆ ಪ್ರಯಾಣಿಕರ ಬ್ಯಾಗುಗಳನ್ನು ಕೂಡ ಪರೀಕ್ಷಿಸಿದ್ದರು. ಆದರೆ ಸಿಕ್ಕಿರಲಿಲ್ಲ. ಬೇಸರದಿಂದ ರಾಮಚಂದ್ರ ಮತ್ತು ಪ್ರೇಮಾ ದಂಪತಿ ತಮ್ಮೂರಿಗೆ ಹೋಗಿದ್ದರು.
ಚಿನ್ನ ಕಳೆದುಕೊಂಡ ದುಃಖದಲ್ಲಿದ್ದ ದಂಪತಿಗೆ ಅದೇ ದಿನ ಧರ್ಮಸ್ಥಳ ಪೊಲೀಸ್ ಠಾಣೆಯಿಂದ ಕರೆಬಂತು, ಪೊಲೀಸ್ ಠಾಣೆಗೆ ಬಂದು ಚಿನ್ನ ಪಡೆದುಕೊಂಡ ದಂಪತಿಯ ಖುಷಿ ವರ್ಣಿಸಲು ಸಾಧ್ಯವಿರಲಿಲ್ಲ. ಮೊಹಮ್ಮದ್ ಆಲಿ ಕೂಡ ದಂಪತಿ ಖುದ್ದಾಗಿ ಬಂದು ಚಿನ್ನದ ಬ್ಯಾಗು ತೆಗೆದುಕೊಂಡು ಹೋಗುವವರೆಗೆ ಠಾಣೆಯಲ್ಲಿಯೇ ಇದ್ದರು ಎನ್ನುತ್ತಾರೆ ಇನ್ಸ್ ಪೆಕ್ಟರ್ ಅವಿನಾಶ್. ಬಸ್ಸಿನಿಂದ ಚಿನ್ನದ ಬ್ಯಾಗು ರಸ್ತೆಯಲ್ಲಿ ಹೇಗೆ ಬಿದ್ದು ಹೋಯಿತು ಎಂದು ಮಾತ್ರ ದಂಪತಿಗೆ ಕೊನೆಗೂ ಗೊತ್ತಾಗಲೇ ಇಲ್ಲ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا