Urdu   /   English   /   Nawayathi

ಬ್ಯಾಂಕ್, ಮೊಬೈಲ್, ಮತ್ತು ಶಾಲಾ ಪ್ರವೇಶಕ್ಕೆ ಆಧಾರ್ ಕಡ್ಡಾಯವಲ್ಲ : ಸುಪ್ರೀಂ

share with us

ನವದೆಹಲಿ: 26 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಕೇಂದ್ರ ಸರ್ಕಾರದ ಮಹತ್ವದ ಮಹತ್ವಾಕಾಂಕ್ಷಿ ಆಧಾರ್ ಯೋಜನೆಗೆ ಇಂದು ಸಂವಿಧಾನಿಕ ಮಾನ್ಯತೆ ನೀಡಿರುವ ಸುಪ್ರೀಂಕೋರ್ಟ್, ಬ್ಯಾಂಕ್ ಖಾತೆಗಳು, ಮೊಬೈಲ್ ಫೋನ್‍ಗಳು ಮತ್ತು ಶಾಲೆಗಳ ಪ್ರವೇಶಕ್ಕೆ ಆಧಾರ್ ಕಾರ್ಡ್‍ಗಳನ್ನು ಸಂಪರ್ಕಿಗೊಳಿಸಬೇಕೆಂಬ ನಿಯಮವನ್ನು ತೆಗೆದು ಹಾಕಿದೆ.

ಆದಾಯ ತೆರಿಗೆ ವಿವರ ಸಲ್ಲಿಕೆ(ಐಟಿ ರಿಟನ್ರ್ಸ್) ಹಾಗೂ ಶಾಶ್ವತ ಖಾತೆ ಸಂಖ್ಯೆ(ಪ್ಯಾನ್) ಮಂಜೂರಾತಿಗೆ ಆಧಾರ್‍ನನ್ನು ಸರ್ವೋಚ್ಚ ನ್ಯಾಯಾಲಯ ಕಡ್ಡಾಯಗೊಳಿಸಿದೆ. ಆಧಾರ್ ಕಾರ್ಡ್‍ಗಳ ಸಂಖ್ಯೆಗಳನ್ನು ಬ್ಯಾಂಕ್ ಖಾತೆಗಳಿಗೆ ಹಾಗೂ ದೂರಸಂಪರ್ಕ ಸೇವೆ ಒದಗಿಸುವ ಸಂಸ್ಥೆಗಳಿಗೆ ಸಂಪರ್ಕ ಕಲ್ಪಿಸುವ ಅಗತ್ಯವಿಲ್ಲ ಎಂದು ಸಹ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಸಷ್ಟಪಡಿಸಿದೆ.

ಅಲ್ಲದೇ ಸಿಬಿಎಸ್‍ಸಿ, ವೈದ್ಯಕೀಯ ಕೋರ್ಸ್‍ಗಳ ಪ್ರವೇಶಕ್ಕಾಗಿ ಹಾಗೂ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ) ನಡೆಸುವ ಪರೀಕ್ಷೆಗಳಿಗೂ ಸಹ ಆದಾಯ ಕಡ್ಡಾಯವಲ್ಲ ಎಂದು ಸರ್ವೋನ್ನತ ನ್ಯಾಯಾಲಯ ತಿಳಿಸಿದೆ. ಈ ತೀರ್ಪಿನೊಂದಿಗೆ ಆಧಾರ್ ಕಾರ್ಡ್ ಕುರಿತು ತಲೆದೋರಿದ್ದ ಗೊಂದಲ ಮತ್ತು ವಿವಾದಗಳು ಈಗ ನಿವಾರಣೆಯಾದಂತಾಗಿದೆ. ಆಧಾರ್ ಕಾರ್ಡ್ ಯೋಜನೆಯಿಂದ ಸಂವಿಧಾನದ ಖಾಸಗಿತನ ಹಕ್ಕು ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಾಧೀಶರ ಪೀಠ ಈ ಮಹತ್ವದ ತೀರ್ಪು ನೀಡಿ, ಕೆಲವೊಂದು ನಿರ್ಬಂಧಗಳನ್ನು ವಿಧಿಸಿದೆ.

ಆಧಾರ್‍ಗೆ ಸಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್ ಆಧಾರ್ ವಿರುದ್ಧದ ದಾಳಿ ಭಾರತೀಯ ಸಂವಿಧಾನಕ್ಕೆ ವಿರೋಧವಾದುದು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಖಾಸಗಿತನವು ಘನತೆಯಿಂದ ಬದುಕುವ ಹಕ್ಕನ್ನು ಹೊಂದಿದೆ . ಸಮಾಜದ ಹಿತದೃಷ್ಟಿಯಿಂದ ಆಧಾರ್‍ಗೆ ಕೆಲವು ನಿರ್ಬಂಧಗಳ ಅಗತ್ಯವಿದೆ ಎಂದು ಕೂಡ ಸರ್ವೋಚ್ಚ ನ್ಯಾಯಾಲಯ ಪ್ರತಿಪಾದಿಸಿದೆ.  ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎ.ಎಂ.ಕನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಅವರು ಪ್ರತ್ಯೇಕವಾಗಿ ತಮ್ಮ ತೀರ್ಪುಗಳನ್ನು ಪ್ರಕಟಿಸಿದರು.

ಆಧಾರ್ ಕಾರ್ಡ್ ಸಿಂಧುತ್ವದ ಬಗ್ಗೆ ಮೂವರು ನ್ಯಾಯಾಧೀಶರು ಸ್ವಾಗತಿಸಿದ್ದರೆ, ಇದಕ್ಕೆ ಇನ್ನಿಬ್ಬರು ನ್ಯಾಯಮೂರ್ತಿಗಳು ಆಕ್ಷೇಪಿಸಿದ್ದರು. ನಂತರ ಒಮ್ಮತದ ನಿಲುವು ವ್ಯಕ್ತವಾಯಿತು.  ಆಧಾರ್ ದೇಶದ ಬಹು ಚರ್ಚಿತ ವಿಷಯವಾಗಿದೆ. ವಿಶಿಷ್ಟವಾದ ಗುರುತಿರುವಂತಹ ವ್ಯವಸ್ಥೆ ದೇಶಕ್ಕೆ ಅಗತ್ಯವಿದೆ. ಆಧಾರ್‍ನಿಂದ ಫಲಾನುಭವಿಗಳಿಗೆ ಪ್ರಯೋಜನವಾಗಿದ್ದು ಇದು ದುರ್ಬಲರ ಸಬಲೀಕರಣಕ್ಕೆ ನೆರವಾಗುತ್ತದೆ ಆಧಾರ್ ಸಮಾಜದ ಒಂದು ವರ್ಗಕ್ಕೆ ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ ಎಂದು ಹೇಳಿದರು.

ಆಧಾರ್ ಕಾರ್ಡ್ ಸಂಪೂರ್ಣ ಸುರಕ್ಷಿತ ಎಂದು ಹೇಳಿರುವ ನ್ಯಾಯಪೀಠ, ಆಧಾರ್‍ನ್ನು ತಿರುಚಲು ಅಥವಾ ನಕಲು ಮಾಡಲು ಸಾಧ್ಯವಿಲ್ಲ. ಆಧಾರ್ ಮಾಹಿತಿ ಕಳವು ಸಂವಿಧಾನಕ್ಕೆ ವಿರೋಧವಾದುದು. ಆಧಾರ್ ಮಾಹಿತಿ ಮೇಲೆ ಕೇಂದ್ರ ಸರ್ಕಾರ ಕಣ್ಗಾವಲು ಇಡಬೇಕು. ಆಧಾರ್ ಪ್ರಾಧಿಕಾರದಿಂದಲೂ ಗೌಪ್ಯತೆಯ ಭರವಸೆ ಈಗಾಗಲೇ ನೀಡಲಾಗಿದೆ ಎಂದು ನ್ಯಾಯಮೂರ್ತಿಗಳು ಹೇಳಿದರು.

ಆಧಾರ್‍ನಿಂದ ಜನರ ಖಾಸಗಿತನ ಮತ್ತು ಗೌಪ್ಯತೆಗೆ ಧಕ್ಕೆಯಾಗಿದ್ದು, ಇದರಿಂದ ಸಂವಿಧಾನದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಕರ್ನಾಟಕ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್.ಪುಟ್ಟಸ್ವಾಮಿ ಸೇರಿದಂತೆ 31 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.  ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಕಾಂಗ್ರೆಸ್, ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇದರಿಂದ ಮುಖಭಂಗವಾಗಿದೆ ಎಂದು ಟೀಕಿಸಿದೆ. ತೃಣಮೂಲ ಕಾಂಗ್ರೆಸ್ ಸಹ ಆಧಾರ್ ಕುರಿತ ತೀರ್ಪು ಮತ್ತು ಆಧೇಶವನ್ನು ಸ್ವಾಗತಿಸಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا