Urdu   /   English   /   Nawayathi

ಭಾರತವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುವುದು ನಮ್ಮ ಗುರಿ : ಪ್ರಧಾನಿ

share with us

ತಲ್‍ಚೇರ್(ಒಡಿಶಾ): 22 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಭಾರತವನ್ನು ಬೆಳವಣಿಗೆಯ ಹೊಸ ಎತ್ತರಕ್ಕೆ ಕೊಂಡೊಯ್ಯುವುದು ನಮ್ಮ ಗುರಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.  ಒಡಿಶಾದ ತಲ್‍ಚೇರ್‍ನಲ್ಲಿ 12,000 ಕೋಟಿ ರೂ. ವೆಚ್ಚದ ಗೊಬ್ಬರ ಘಟಕ ಪುನ:ಶ್ಚೇತನ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಮಹತ್ವದ ಯೋಜನೆಯಿಂದ ಇದೇ ಮೊದಲ ಬಾರಿ ಕಲ್ಲಿದ್ದಲನ್ನು ಅನಿಲವಾಗಿ ಪರಿವರ್ತಿಸಲಾಗುತ್ತಿದೆ. ಇದನ್ನು ಗೊಬ್ಬರ ಸಾಮಗ್ರಿ ಹಾಗೂ ಬೇವು ಲೇಪಿತ ಯೂರಿಯಾ ಉತ್ಪಾದನೆಗೆ ಬಳಸಬಹುದಾಗಿದೆ ಎಂದು ಮೋದಿ ಹೇಳಿದರು.

ಈ ಯೋಜನೆ 26 ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ. ಇದರಿಂದ ನೈಸರ್ಗಿಕ ಅನಿಲ ಮತ್ತು ಗೊಬ್ಬರಗಳ ಆಮದು ಮಾಡಿಕೊಳ್ಳುವ ಪ್ರಮೇಯ ತಪ್ಪುತ್ತದೆ ಹಾಗೂ ಭಾರತ ಸ್ವಾವಲಂಬನೆ ಸಾಧಿಸುತ್ತದೆ ಎಂದು ಪ್ರಧಾನಿ ಹೇಳಿದರು. ಭಾರತವನ್ನು ಪ್ರಗತಿಯ ಹೊಸ ಮನ್ವಂತರದತ್ತ ಕೊಂಡೊಯ್ಯುವುದು ನಮ್ಮ ಸರ್ಕಾರದ ಗುರಿಯಾಗಿದೆ. ಈ ಯೋಜನೆಯಿಂದ 4,500 ಜನರಿಗೆ ಉದ್ಯೋಗಾವಕಾಶ ಲಭಿಸುತ್ತಿದೆ. ಗೊಬ್ಬರ ಘಟಕದಂಥ ಯೋಜನೆಗಳು ಭಾರತದ ಬೆಳವಣಿಗೆಗೆ ಯಶೋಗಾಥೆಯಾಗಲಿದೆ ಎಂದು ಅವರು ಹೇಳಿದರು.

ನಾಳೆಯಿಂದ ಅಧಿಕೃತವಾಗಿ ಜಾರಿಗೆ ಬರಲಿರುವ ಆಯುಷ್ಮಾನ್ ಭಾರತ್ ಯೋಜನೆಗೆ ರಾಜ್ಯದ ಜನರನ್ನು ಸಂಪರ್ಕಿಸಬೇಕೆಂದು ಅವರು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಸಲಹೆ ಮಾಡಿದರು.  ಹಿಂದಿನ ಯುಪಿಎ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು, ಮುಚ್ಚಿ ಹೋಗಿದ್ದ ಕೈಗಾರಿಕೆಗಳನ್ನು ಪುನ:ಶ್ಚೇತನಕ್ಕೆ ಕಾಂಗ್ರೆಸ್ ಗಮನಹರಿಸಲಿಲ್ಲ. ಆದರೆ ಎನ್‍ಡಿಎ ಸರ್ಕಾರ ಬಂದ್ ಆಗಿರುವ ಅನೇಕ ಉದ್ದಿಮೆಗಳಿಗೆ ಜೀವ ನೀಡಿದೆ ಎಂದರು. ಇಂದು ಒಡಿಶಾ ಪ್ರವಾಸದಲ್ಲಿರುವ ಅವರು ಆರು ಮಹತ್ವಾಕಾಂಕ್ಷಿ ಯೋಜನೆಗಳಿಗೆ ವಿಧ್ಯುಕ್ತ ಚಾಲನೆ ನೀಡಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا