Urdu   /   English   /   Nawayathi

ಉಗ್ರನನ್ನು ಕೊಂದು ರಸ್ತೆಯಲ್ಲಿ ಎಳೆದುಕೊಂಡು ಹೋದ ಯೋಧ; ಫೋಟೋ ವೈರಲ್, ವ್ಯಾಪಕ ಖಂಡನೆ

share with us

ಶ್ರೀನಗರ: 15 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಸೇನಾ ಯೋಧರೊಬ್ಬರು ಕಳೆದ ಗುರುವಾರ ಎನ್ ಕೌಂಟರ್ ನಲ್ಲಿ ಮೃತಪಟ್ಟ ಉಗ್ರನ ಮೃತದೇಹವನ್ನು ರಸ್ತೆಯಲ್ಲಿ ಎಳೆದುಕೊಂಡು ಹೋದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದೊಂದು ಅನಾಗರಿಕ ಹೇಯ ಕೃತ್ಯ ಎಂದು ಮಾನವ ಹಕ್ಕು ಹೋರಾಟಗಾರರು ಟೀಕಿಸಿದ್ದಾರೆ. ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯ ಕತ್ರಾದ ರಸ್ತೆಯಲ್ಲಿ ಗುಂಡಿನ ಚಕಮಕಿಯಲ್ಲಿ ಕೊಂದ ಉಗ್ರನ ಶವದ ಕಾಲಿಗೆ ಚೈನ್ ನಿಂದ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋದ ಚಿತ್ರವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಅದು ವೈರಲ್ ಆಗಿದೆ.

ಜಮ್ಮು ಪ್ರಾಂತ್ಯದ ರಿಯಾಸಿ ಜಿಲ್ಲೆಯ ಧಿರಿತಿ ಗ್ರಾಮದಲ್ಲಿ ಕಳೆದ ಗುರುವಾರ ಭದ್ರತಾ ಪಡೆ ಯೋಧರು ಮತ್ತು ಉಗ್ರರ ನಡುವೆ ಸುಮಾರು 7 ಗಂಟೆಗಳಿಗೂ ಅಧಿಕ ಕಾಲ ಗುಂಡಿನ ಚಕಮಕಿ ನಡೆಯಿತು. ಇದರಲ್ಲಿ ಜೈಶ್ ಇ ಮೊಹಮ್ಮದ್ ಸಂಘಟನೆಯ ಮೂವರು ಉಗ್ರಗಾಮಿಗಳು ಹತರಾಗಿದ್ದರು. ಗುಂಡಿನ ದಾಳಿಯಲ್ಲಿ ಮೂವರು ಅಧಿಕಾರಿಗಳು ಸೇರಿದಂತೆ ಕನಿಷ್ಠ 12 ಭದ್ರತಾ ಯೋಧರು ಗಾಯಗೊಂಡಿದ್ದಾರೆ.

ಕಳೆದ ಬುಧವಾರ ನಸುಕಿನ ಜಾವ ಸಾಂಬಾ ವಲಯದಲ್ಲಿ ಮೂವರು ಉಗ್ರರು ಒಳನುಸುಳಿ ಹೋಗಿದ್ದರು. ಈ ಸಂದರ್ಭದಲ್ಲಿ ಉಗ್ರರನ್ನು ಸದೆಬಡಿಯಲು ಭದ್ರತಾ ಪಡೆ ಯೋಧರು ಗುಂಡಿನ ದಾಳಿ ನಡೆಸಬೇಕಾಯಿತು. ಉಗ್ರರು ಜಜ್ಜರ್ ಕೊಟ್ಲಿ ಪ್ರದೇಶದಲ್ಲಿ ಪೊಲೀಸರೆಡೆಗೆ ಗುಂಡಿನ ಸುರಿಮಳೆಗೈಯಲಾರಂಭಿಸಿದರು. ಉಗ್ರರಿಗೆ ತಕ್ಕ ಪ್ರತ್ಯುತ್ತರ ನೀಡಿದ್ದ ಯೋಧರು ಮೂವರು ಉಗ್ರರನ್ನು ಸದೆಬಡಿದು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡರು.

ಯೋಧ ಉಗ್ರನ ಶವವನ್ನು ರಸ್ತೆಯಲ್ಲಿ ಎಳೆದುಕೊಂಡ ಹೋದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು ಮೃತದೇಹಕ್ಕೆ ಗೌರವ ತೋರಿಸದಿರುವುದು ಕ್ರೂರ ಅನಾಗರಿಕ ವರ್ತನೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಖುರ್ರಮ್ ಪರ್ವೇಜ್ ಟೀಕಿಸಿದ್ದಾರೆ. ಭಾರತೀಯ ಸೇನೆಯ ಮಾನವ ಹಕ್ಕುಗಳ ನಡವಳಿಕೆಯನ್ನು ಇದು ತೋರಿಸುತ್ತದೆ ಎಂದಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಜಮ್ಮುವಿನ ರಕ್ಷಣಾ ಇಲಾಖೆ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಸಂಪರ್ಕಕ್ಕೆ ಸಿಗಲಿಲ್ಲ. ಇನ್ನು ರಕ್ಷಣಾ ಇಲಾಖೆ ವಿಶ್ಲೇಷಕ ಮತ್ತು ಟಿವಿ ನಿರೂಪಕ ಮೇಜರ್ ಗೌರವ್ ಆರ್ಯ ಸೇನಾ ಯೋಧರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಕಾಶ್ಮೀರದ ಪತ್ರಕರ್ತ ಅಹ್ಮದ್ ಅಲಿ ಫಯಾಝ್ ಕೂಡ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾನೂನು, ಅಂತಾರಾಷ್ಟ್ರೀಯ ಶಿಷ್ಟಾಚಾರಗಳು ಸೇನಾ ಯೋಧ ಉಗ್ರಗಾಮಿಯ ಶವವನ್ನು ಈ ರೀತಿ ಎಳೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ. ಸೇನಾಪಡೆಯ ಇಂತಹ ನಡವಳಿಕೆಗಳಿಂದಾಗಿ ಒಬ್ಬ ಉಗ್ರನನ್ನು ಕೊಂದರೆ ಮತ್ತೆ ಇಬ್ಬರು ಉಗ್ರರು ಹುಟ್ಟಿಕೊಳ್ಳುತ್ತಾರೆ. ಇದು ಹೀಗೆಯೇ ಮುಂದುವರಿಯುತ್ತಾ ಹೋಗುತ್ತದೆ. ಇದು ಕಾನೂನು ಬಾಹಿರ ಮತ್ತು ಖಂಡನೀಯ ಎಂದು ಹೇಳಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا