Urdu   /   English   /   Nawayathi

BIG NEWS : ಮೈತ್ರಿ ಸರ್ಕಾರ ಉರುಳಿಸಲು ಗಣಿಧಣಿಗಳಿಂದ 300 ಕೋಟಿ ರೂ. ಬಂಡವಾಳ..!

share with us

ಬೆಂಗಳೂರು: 12 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರವನ್ನು ಪ್ರತಿಷ್ಠಾಪಿಸಲು ರೆಡಿಯಾಗಿದೆ 300 ಕೋಟಿ ರೂ.ಗಳ ಬಂಡವಾಳ…. ಕಾಂಗ್ರೆಸ್-ಜೆಡಿಎಸ್‍ನ 15 ರಿಂದ 20 ಶಾಸಕರನ್ನು ಬಿಜೆಪಿಗೆ ಕರೆತಂದು ಹೊಸ ಸರ್ಕಾರ ರಚನೆ ಮಾಡಲು ಬಳ್ಳಾರಿ ಗಣಿ ರೆಡ್ಡಿಗಳು ಮುಂದಾಗಿದ್ದಾರೆ ಎನ್ನಲಾಗಿದೆ. 2008ರಲ್ಲಿ ಬಿಜೆಪಿ 110 ಸ್ಥಾನಗಳನ್ನು ಪಡೆದು ಅತಂತ್ರವಾದಾಗ ಆರು ಪಕ್ಷೇತರರನ್ನು ಕರೆತಂದು ಸರ್ಕಾರ ರಚನೆ ಹಾಗೂ ಆಪರೇಷನ್ ಕಮಲ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿ ಅದಕ್ಕಾಗಿ ಸಂಪನ್ಮೂಲ ಕ್ರೋಢೀಕರಣ ಮಾಡಿದ್ದ ಇದೇ ರೆಡ್ಡಿಗಳು ಈಗ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ತಮ್ಮ ಪರಮಾಪ್ತರನ್ನು ಉಪಮುಖ್ಯಮಂತ್ರಿ ಮಾಡುವುದಾದರೆ ಈ ಬಹುದೊಡ್ಡ ಆಪರೇಷನ್‍ಗೆ ಕೈ ಹಾಕುವುದಾಗಿ ರೆಡ್ಡಿ ತಿಳಿಸಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಬಿಜೆಪಿ ನಾಯಕರು ಸರ್ಕಾರ ರಚನೆಯಲ್ಲಿ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಬಳ್ಳಾರಿ ರೆಡ್ಡಿ ಮತ್ತೆ ಅಖಾಡಕ್ಕಿಳಿದಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‍ನೊಳಗಿನ ಭಿನ್ನಮತ, ಕಾಂಗ್ರೆಸ್-ಜೆಡಿಎಸ್‍ನ ವೈಮನಸ್ಸು, ಅಧಿಕಾರದ ಹಪಾಹಪಿತನವನ್ನು ಲಾಭವಾಗಿ ಬಳಸಿಕೊಂಡು ಅಧಿಕಾರದ ಗದ್ದುಗಗೇರುವ ತಂತ್ರವನ್ನು ಹೆಣೆಯಲಾಗಿದೆ. ಅದಕ್ಕಾಗಿ ಕೆಲವರಿಂದ ರಾಜೀನಾಮೆ ಕೊಡಿಸಿ ಸರ್ಕಾರ ಉರುಳಿಸುವ ದಾಳವನ್ನು ಪ್ರಯೋಗಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಅಗತ್ಯವಾದ ಸಂಪನ್ಮೂಲ ಅಂದರೆ ಪ್ರತಿ ಶಾಸಕರಿಗೂ 15 ರಿಂದ 20 ಕೋಟಿ ವ್ಯಯಿಸಲು ಮತ್ತು ಅವರ ಮುಂದಿನ ಚುನಾವಣೆಯ ಖರ್ಚು-ವೆಚ್ಚ ಭರಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಆ ಚುನಾವಣೆಯೂ ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಬಂದರೆ ಗೆಲ್ಲಲು ಸಾಧ್ಯವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಗೆಲ್ಲುವ ಸಾಮಥ್ರ್ಯವಿರುವ ಅಭ್ಯರ್ಥಿಗಳನ್ನೇ ಬಿಜೆಪಿಗೆ ಸೇರಿಸಿಕೊಳ್ಳುವ ಲೆಕ್ಕಾಚಾರ ಹಾಕಿದ್ದಾರೆ.   ಅದರಲ್ಲೂ ಉತ್ತರ ಕರ್ನಾಟಕದವರನ್ನು ಹೆಚ್ಚಾಗಿ ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸಾಕಷ್ಟು ಜನರನ್ನು ಸಂಪರ್ಕಿಸಿ ಈಗಾಗಲೇ ಚರ್ಚೆ ಕೂಡ ನಡೆಸಿದ್ದಾರೆ. ಯಾವಾಗ ತಂತ್ರವನ್ನು ಕಾರ್ಯರೂಪಕ್ಕಿಳಿಸುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ರಾಜಕೀಯ ಮೇಲಾಟ ನಡೆಯುತ್ತಿದ್ದು, ಯಾರ ಕೈ ಮೇಲಾಗಲಿದೆ ಎಂಬುದನ್ನು ಕಾದು ನೋಡಬೇಕು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಪ್ರತಿದಿನ ಒಂದಲ್ಲ,ಒಂದು ಅಸ್ಥಿರತೆಯ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಸಣ್ಣಪುಟ್ಟ ಘಟನೆಗಳು ನಡೆದರೂ ಅವು ದೊಡ್ಡದಾಗಿ ಬಿಂಬಿತವಾಗುತ್ತಿವೆ. ಯಾವಾಗ ಯಾವ ಘಟನೆ ರಾಜಕೀಯ ಬದಲಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಈ ನಾಯಕರು ಪರಿಸ್ಥಿತಿಯನ್ನು ನಿರೀಕ್ಷಿಸುತ್ತಿದ್ದು, ಅಂತಹ ಪರಿಸ್ಥಿತಿ ಎದುರಾದರೆ ತಮ್ಮ ದಾಳಗಳನ್ನು ಉರುಳಿಸಲು ಸಜ್ಜಾಗಿದ್ದಾರೆ.
ಆಡಳಿತಾರೂಢ ಮೈತ್ರಿ ಸರ್ಕಾರವೂ ಕೂಡ ಸದಾ ಎಚ್ಚರಿಕೆ ಹೆಜ್ಜೆಯನ್ನು ಇಡುತ್ತಿದೆ. ಇಂತಹ ಬೆಳವಣಿಗೆಗಳ ಮೇಲೆ ತೀವ್ರ ನಿಗಾ ಇಟ್ಟಿದೆ. ಪ್ರತಿಪಕ್ಷಗಳ ಯಾವುದೇ ಪ್ರಯತ್ನಗಳು ಫಲ ನೀಡದಂತೆ ನೋಡಿಕೊಳ್ಳುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಶಾಸಕರು ರಾಜೀನಾಮೆ ಕೊಡುವ ಪರಿಸ್ಥಿತಿಯಲ್ಲಿಲ್ಲ. ಕೊಟ್ಟರೂ ಮುಂದೆ ಜನ ನಮ್ಮನ್ನು ಸ್ವೀಕರಿಸುತ್ತಾರೆಯೇ, ಪಕ್ಷದವರು ನಮಗೆ ಟಿಕೆಟ್ ಕೊಟ್ಟು ನಮ್ಮನ್ನು ಗೆಲ್ಲಿಸಿಕೊಳ್ಳುತ್ತಾರೆಯೇ ಎಂಬ ಅನುಮಾನ ಅವರಲ್ಲೂ ಕಾಡತೊಡಗಿದೆ.

ರಾಜಕೀಯ ಚದುರಂಗದಾಟ ಆಡಲು ಹೋಗಿ ನಮ್ಮ ರಾಜಕೀಯ ಭವಿಷ್ಯದ ಮೇಲೆ ತಾವೇ ಕಲ್ಲು ಹಾಕಿಕೊಂಡಂತಾಗುವುದಿಲ್ಲವೇ ಎಂದು ಹಲವರು ಯೋಚಿಸುತ್ತಿದ್ದಾರೆ. ಹಾಗಾಗಿ ಏನಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು ತಮ್ಮ ಆಟ ಆಡಲು ಪ್ರತಿಯೊಂದು ಪಕ್ಷವೂ ಕಾದು ಕುಳಿತಿದೆ. ಒಟ್ಟಾರೆ ರಾಜಕೀಯ ನಿಂತ ನೀರಂತೂ ಅಲ್ಲ, ನಿರಂತರ ಚಟುವಟಿಕೆ¼ಗಳ ತಾಣ. ಪ್ರತಿದಿನ ಪ್ರತಿಕ್ಷಣ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا