Urdu   /   English   /   Nawayathi

ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಮಾಸ್ಟರ್ ಪ್ಲಾನ್..!

share with us

ಬೆಂಗಳೂರು: 12 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಮುಂದಿನ ಲೋಕಸಭಾ ಚುನಾವಣೆಗೆ ಇನ್ನು ಕೇವಲ ಎಂಟೇ ತಿಂಗಳು ಬಾಕಿ ಇದೆ. ಆ ವೇಳೆಗೆ ರಾಜ್ಯದಲ್ಲೂ ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾದರೆ ಏನಾಗಬಹುದು? ಇಂತಹದೊಂದು ಪ್ರಬಲ ಚರ್ಚೆ ಇದೀಗ ಬಿಜೆಪಿ ಹೈಕಮಾಂಡ್ ಅಂಗಳದಲ್ಲಿ ಭಾರೀ ಬಿರುಸು ಪಡೆದಿದೆ.  ಈಗಾಗಲೇ ಪ್ರಧಾನಿ ಮೋದಿ ಮತ್ತು ಭಾಜಪ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರುಗಳು ಇದಕ್ಕಾಗಿ ಒಂದು ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯೊಂದು ಇದೀಗ ದೆಹಲಿ ರಾಜಕೀಯ ಪಡಸಾಲೆಯ ಉನ್ನತ ಮೂಲಗಳಿಂದ ಹೊರಬಿದ್ದಿದೆ. ಅದು ನಿಜವೇ ಆದರೆ ರಾಜ್ಯದಲ್ಲಿ ಈಗ ನಡೆಯುತ್ತಿರುವ ರಾಜಕೀಯ ಮೇಲಾಟ ತಾರಕಕ್ಕೆ ತಲುಪುವುದೂ ಅಷ್ಟೇ ಖಚಿತ. ಇದರ ಸೂತ್ರದಾರರು ಯಾರಾಗಲಿದ್ದಾರೆ ಎಂಬುದಕ್ಕೆ ಇದೀಗ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳೇ ಒಂದು  ಸ್ಪಷ್ಟ ನಿದರ್ಶನ.

ಹೇಗಾದರೂ ಸರಿ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವುದು ಈ ಮಾಸ್ಟರ್ ಪ್ಲಾನ್‍ನ ಮೊದಲ ಸೂತ್ರ. ಆ ನಂತರ ಎಲ್ಲವೂ ಸುಸೂತ್ರ ಮತ್ತು ತೃಪ್ತಕರವಾಗಿದ್ದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ಎರಡನೆಯ ಸೂತ್ರ. ಅದೂ ಫಲಿಸದಿದ್ದರೆ ರಾಜ್ಯದಲ್ಲಿನ ಬಿಕ್ಕಟ್ಟು ಮುಂದಿಟ್ಟುಕೊಂಡು ರಾಷ್ಟ್ರಪತಿ ಆಡಳಿತ ಹೇರುವುದು ಮೂರನೆಯ ಸೂತ್ರ.  ಈ ಪೈಕಿ ಯಾವುದು ಸಾಧ್ಯ ಎಂಬುದನ್ನು ಅರಿಯುವ ಸಲುವಾಗಿಯೇ ಮೋದಿ ಮತ್ತು óಷಾ ರಹಸ್ಯ ಸಭೆಗಳನ್ನು ನಡೆಸುತ್ತಿದ್ದಾರೆ. ರಾಜ್ಯದ ಒಬ್ಬೊಬ್ಬರೇ ನಾಯಕರ ಜೊತೆಗೂ ಸತತ ಸಭೆಗಳನ್ನು ನಡೆಸುತ್ತಾ ಎಲ್ಲರ ಅಭಿಪ್ರಾಯಗಳನ್ನೂ ಸಂಗ್ರಹಿಸುವಲ್ಲಿ ಈ ಜೋಡಿ ನಿದ್ರೆಗೆಟ್ಟು ಶ್ರಮಿಸುತ್ತಿದೆ ಎಂಬುದು ಪಕ್ಷದ ಉನ್ನತ ಮೂಲಗಳ ಹೇಳಿಕೆ.

ಈಗಾಗಲೇ ತಮ್ಮದೇ ನಂಬಿಕಸ್ಥ ಪಡೆ ಮೂಲಕ ಈ ಜೋಡಿ ರಾಜ್ಯದಲ್ಲಿ ಒಂದು ಸುತ್ತಿನ ಸಮೀಕ್ಷೆ ನಡೆಸಿದೆ. ಇದರಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿ 2014ರ ಫಲಿತಾಂಶವನ್ನು ಹೊರಹೊಮ್ಮಿಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಒಂದೆರಡು ಸ್ಥಾನ ಅತ್ತಿತ್ತ ಆದರೂ ಬಿಜೆಪಿ ಮೇಲುಗೈ ಸಾಧಿಸಲಿದೆ ಎಂಬ ಅಂಶ ಈ ಇಬ್ಬರು ನಾಯಕರಿಗೆ ತಮ್ಮ ರಹಸ್ಯ ಸಮೀಕ್ಷೆಯಿಂದ ಖಚಿತವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಜೊತೆಜೊತೆಗೇ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ಅವರ ಹವಾ ಫಲಿಸಲಿದೆ ಎಂಬ ಅಂಶವೂ ಈ ಸಮೀಕ್ಷೆ ಸಂದರ್ಭದಲ್ಲಿ ಬಹಿರಂಗಗೊಂಡಿದೆ ಎಂಬುದು ಸದ್ಯದ ಹಾಟ್ ಸುದ್ದಿ.

ಇನ್ನು ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳ ನಾಯಕರ ಅಭಿಪ್ರಾಯಗಳನ್ನು ಕಲೆ ಹಾಕುತ್ತಿರುವ ಈ ಜೋಡಿ ಆ ಮೂಲಕವೂ ಒಂದು ಸ್ಪಷ್ಟ ನಿರ್ಧಾರಕ್ಕೆ ಬಂದಂತೆ ಕಾಣಿಸುತ್ತಿದೆ ಎಂಬ ಅಭಿಪ್ರಾಯವನ್ನು ಈ ಮೂಲಗಳು ವ್ಯಕ್ತಪಡಿಸಿವೆ. ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲೂ ಪಾಲ್ಗೊಳ್ಳದೆ ಯಡಿಯೂರಪ್ಪ ಅವರು ದಿಢೀರ್ ರಾಜ್ಯಕ್ಕೆ ಆಗಮಿಸಿದ್ದು ಮೋದಿ ಮತ್ತು ಷಾ ಆದೇಶದ ಮೇರೆಗೆ ಎಂಬುದು ಇದೀಗ ದೆಹಲಿ ಬಿಜೆಪಿ ಪಡಸಾಲೆಯಲ್ಲಿ ಸದ್ದು ಮಾಡುತ್ತಿರುವ ದೊಡ್ಡ ಸುದ್ದಿ. ರಾಜ್ಯ ಬಿಜೆಪಿಯಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಇದನ್ನು ಬಲ್ಲ ಮೋದಿ-ಷಾ ಜೋಡಿ ಯಡಿಯೂರಪ್ಪನವರಿಗೆ ಒಂದು ಕಟ್ಟಕಡೆಯ ಅವಕಾಶ ಕೊಟ್ಟು ಕಳುಹಿಸಿದೆಯಂತೆ. ಸಾಧ್ಯವಾದರೆ ಕಮಲ ಆಪರೇಷನ್ ಯಶಸ್ವಿಯಾಗಿ ನಡೆಸಿ ಆಶ್ವಮೇಧ ಯಾಗದ ಕುದುರೆ ಮೇಲೆ ಬನ್ನಿ. ನಿಮಗೆ ರಾಜಾ್ಯಧಿಕಾರ ಯಾವುದೇ ಅಡೆತಡೆಯಿಲ್ಲದೆ ಕಟ್ಟುತ್ತೇವೆ ಎಂದು ಸೂಚಿಸಿದೆಯಂತೆ.

ಈ ಅವಕಾಶ ಕೈತಪ್ಪಿದರೆ ಮುಂದೆಂದೂ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಅರಿತಿರುವ ಯಡಿಯೂರಪ್ಪ ಆ ಕ್ಷಣವೇ ನಾಗಾಲೋಟದಲ್ಲಿ ರಾಜ್ಯಕ್ಕೆ ಆಗಮಿಸಿದ್ದೇ ತಡ ಇಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ತಳಮಳ ಶುರುವಾಗಿದೆ. ಜಾರಕಿಹೊಳಿ ಸಹೋದರರಿಗೆ ಶಾಸಕ ಶ್ರೀರಾಮುಲು ಮೂಲಕ ಗಾಳ ಹಾಕಿಸಿರುವ ಯಡಿಯೂರಪ್ಪ ಒಂದೇ ಕಲ್ಲಿಗೆ ಎರಡು ಹಣ್ಣು ಉದುರಿಸಲು ಸಕಲ ತಯಾರಿ ನಡೆಸಿ ಆಖಾಡಕ್ಕೆ ಇಳಿದಿದ್ದಾರೆ. ಆ ಮೂಲಕ ರಾಜಾ್ಯಧಿಕಾರ ಪಡೆಯುವುದು ಮತ್ತು ಪಕ್ಷದಲ್ಲಿನ ತಮ್ಮ ವೈರಿಗಳಿಗೆ ತಾನಿನ್ನು ಬಲಾಢ್ಯ ಎಂದು ಪ್ರದಶಿರ್¸ಸುವುದು ಸದ್ಯದ ಅವರ ತುರ್ತು.

ಈ ಎಲ್ಲದಕ್ಕೂ ಕಳಸವಿಟ್ಟಂತೆ ಇದೀಗ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ತಾಕಲಾಟಗಳು ಸಾಕಷ್ಟು ಬಿರುಸು ಪಡೆಯುತ್ತಿವೆ. ಯಾವ ಕ್ಷಣದಲ್ಲಿ ಏನು ಬೇಕಾದರೂ ಸಂಭವಿಸಬಹುದು ಎಂಬ ಸನ್ನಿವೇಶಗಳು ದಿನನಿತ್ಯ ಘಟಿಸುತ್ತಿವೆ. ಬೆಳಗಾವಿ ಮಟ್ಟಿಗೆ ಪ್ರಬಲ ನಾಯಕರೆನಿಸಿಕೊಂಡಿರುವ ಜಾರಕಿಹೊಳಿ ಬ್ರದರ್ಸ್ ಮೂಲಕ ಈ ನಾಟಕಕ್ಕೆ ಮುನ್ನುಡಿ ಬರೆಸಲು ಈ ಜೋಡಿ ಮುಂದಾಗಿದೆ ಎಂಬುದೂ ಸದ್ಯದ ಬಿಸಿ ಬಿಸಿ ಸುದ್ದಿ.

ಒಟ್ಟಾರೆ, ಕಾಂಗ್ರೆಸ್ ಪಕ್ಷದ ಸದ್ಯದ ಜಗಳ ಈ ಹಿನ್ನೆಲೆಯಲ್ಲಿ ತಾರಕಕ್ಕೇರುತ್ತಿದೆ. ಹೈಕಮಾಂಡ್ ಮಾತಿಗೆ ಮೇಲ್ನೋಟಕ್ಕೆ ಮಣಿದಂತೆ ಕಾಣುವ ಬೆಳಗಾವಿ ಬ್ರದರ್ಸ್ ಒಳಗೊಳಗೇ ತಮ್ಮ ಶಕ್ತಪ್ರದರ್ಶನಕ್ಕೆ ಮುಂದಾಗಿರುವುದು ಮೋದಿ ಮತ್ತು ಷಾ ಜೋಡಿಯ ಮೂರು ಸೂತ್ರಗಳಿಗೆ ಸದ್ಯದಲ್ಲೇ ಗಾಳವಾಗಲಿದೆ.
ಆ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಆಖಾಡ ಸಿದ್ದವಾಗಲಿದೆ ಇಲ್ಲವೇ ರಾಜಕೀಯ ಬಿಕ್ಕಟ್ಟು ಸೃಷ್ಠಿಯಾಗಿ ರಾಷ್ಟ್ರಪತಿ ಆಡಳಿತ ಹೇರಿಕೆಯಾಗಲಿದೆ. ಅಲ್ಲಿಗೆ ಈ ಚಾಣಾಕ್ಷರಿಬ್ಬರ ಆಟ ಫಲಿಸಲಿದ್ದು ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ರಾಜ್ಯದಲ್ಲೂ ವಿಧಾಸಭೆಗೆ ಚುನಾವಣೆ ನಡೆಯಲಿದೆ. ಖಂಡಿತಾ ಆಗ ಮೋದಿ ಹವಾ ಬೀಸಲಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا