Urdu   /   English   /   Nawayathi

ಗುಟ್ಕಾ ಹಗರಣ : ತಮಿಳುನಾಡು ಆರೋಗ್ಯ ಸಚಿವ, ಡಿಜಿಪಿ ಮನೆ ಸೇರಿ 45 ಕಡೆ ಸಿಬಿಐ ದಾಳಿ

share with us

ಚೆನ್ನೈ: 05 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಸುಮಾರು 40 ಕೋಟಿ ರೂ.ಗಳ ಗುಟ್ಕಾ ಲಂಚ ಹಗರಣಕ್ಕೆ ಸಂಬಂಧಪಟ್ಟಂತೆ ತನಿಖೆ ತೀವ್ರಗೊಳಿಸಿರುವ ಕೇಂದೀಯ ತನಿಖಾ ದಳದ(ಸಿಬಿಐ) ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆಯೇ ತಮಿಳುನಾಡು ಆರೋಗ್ಯ ಸಚಿವ ಡಾ. ಸಿ.ವಿಜಯಭಾಸ್ಕರ್, ಪೊಲೀಸ್ ಮಹಾ ನಿರ್ದೇಶಕ ಟಿ.ಕೆ.ರಾಜೇಂದ್ರನ್, ಉನ್ನತಾಧಿಕಾರಿಗಳು ಹಾಗೂ ಇತರರ ಮನೆಗಳ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಈ ಹಗರಣಕ್ಕೆ ಸಂಬಂಧಪಟ್ಟ ದಾಖಲೆ ಪತ್ರಗಳು, ಕಡತಗಳು, ಹಾಗೂ ದಸ್ತಾವೇಜುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.   ಚೆನ್ನೈ ಸೇರಿದಂತೆ ರಾಜ್ಯದ ವಿವಿಧೆಡೆ ಇಂದು ಬೆಳಗ್ಗೆ 7 ಗಂಟೆಗೆ ದಾಳಿ ಕಾರ್ಯಾಚರಣೆ ಆರಂಭಿಸಿದ ಸಿಬಿಐ ಆಧಿಕಾರಿಗಳು 45ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದರು.

ಸಚಿವ ವಿಜಯ್‍ಕುಮಾರ್, ಡಿಜಿಪಿ ರಾಜೇಂದ್ರನ್, ಮಾಜಿ ಡಿಜಿಪಿ ಎಸ್. ಜಾರ್ಜ್, ಉನ್ನತ ಪೊಲೀಸ್ ಅಧಿಕಾರಿಗಳು, ಗುಟ್ಕಾ ವ್ಯವಹಾರಕ್ಕೆ ಸಂಬಂಧ ಪಟ್ಟವರ ಮನೆಗಳು ಮತ್ತು ಕಚೇರಿಗಳ ಮೇಲೆ ಸಿಬಿಐ ಕ್ಷಿಪ್ರ ದಾಳಿ ನಡೆಸಿದೆ. ಚೆನ್ನೈ ಸೇರಿದಂತೆ ವಿವಿಧೆಡೆ ನಿಷೇಧಿತ ಗುಟ್ಕಾ ಮತ್ತು ಪಾನ್ ಮಸಾಲ ಮಾರಾಟ ಮಾಡಲು ಓರ್ವ ಸಚಿವರು, ಇಬ್ಬರು ಉನ್ನತ ಪೊಲೀಸ್ ಅಧಿಕಾರಿಗಳು, ಹಾಗೂ ಇತರ ಅಧಿಕಾರಿಗಳಿಗೆ ಗುಟ್ಕಾ ತಯಾರಕರು 39.91 ಕೋಟಿ ರೂ.ಗಳ ಲಂಚ ನೀಡಿದ್ದಾರೆ ಎಂದು ಆರೋಪಿಸಿದ ಆದಾಯ ತೆರಿಗೆ ಇಲಾಖೆ ರಾಜ್ಯ ಸರ್ಕಾರಕ್ಕೆ ರಹಸ್ಯ ವರದಿಯೊಂದನ್ನು ಸಲ್ಲಿಸಿತ್ತು. ಗುಟ್ಕಾ ತಯಾರಕರು ಸರ್ಕಾರಕ್ಕೆ 250 ಕೋಟಿ ರೂ. ತೆರಿಗೆ ವಂಚಿಸಿದ್ದಾರೆಂದು ವರದಿಯಲ್ಲಿ ತಿಳಿಸಲಾಗಿತ್ತು.

ರಾಜ್ಯ ಸರ್ಕಾರದ ಆಗಿನ ಮುಖ್ಯ ಕಾರ್ಯದರ್ಶಿ ಪಿ.ಎಸ್.ರಾಮ ಮೋಹನ ರಾವ್ ಹಾಗೂ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಅಶೋಕ್ ಕುಮಾರ್ ಅವರಿಗೆ ಈ ಗೋಪ್ಯ ವರದಿಯನ್ನು ಐಟಿ ಅಧಿಕಾರಿಗಳು ರವಾನಿಸಿದ್ದರು.   ಈ ವರದಿಯನ್ನು ಚೆನ್ನೈ ಮೂಲದ ಪ್ರಮುಖ ಆಂಗ್ಲ ದೈನಿಕವೊಂದು ತನಿಖಾ ವರದಿ ಮೂಲಕ ಬೆಳಕಿಗೆ ತಂದಿತ್ತು.   ಸಚಿವರು, ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಶಾಮೀಲಾಗಿರುವ ಈ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಪ್ರತಿಪಕ್ಷಗಳು ಭಾರೀ ಪ್ರತಿಭಟನೆ ನಡೆಸಿದ್ದವು. ಅಲ್ಲದೇ ಈ ಹಗರಣ ವಿಧಾನಸಭೆಯಲ್ಲೂ ಪ್ರತಿಧ್ವನಿಸಿ ವಿರೋಧಪಕ್ಷಗಳು ತನಿಖೆಗೆ ಆಗ್ರಹಿಸಿ ಸಭಾತ್ಯಾಗ ಮಾಡಿದ್ದವು.

1984ರ ಬ್ಯಾಚ್‍ನ ವಿವಾದಿತ ಐಪಿಎಸ್ ಅಧಿಕಾರಿ ಟಿ.ಕೆ.ರಾಜೇಂದ್ರನ್ ಅವರ ಹೆಸರು ಈ ಹಗರಣದಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದರೂ ಸಹ ರಾಜ್ಯ ಸರ್ಕಾರ ಅವರ ಸೇವೆಯನ್ನು ಎರಡು ವರ್ಷಗಳಿಗೆ ವಿಸ್ತರಿಸಿದ್ದಲ್ಲದೇ ಡಿಜಿಪಿ/ಪೊಲೀಸ್ ಪಡೆಯ ಮುಖ್ಯಸ್ಥರ ಹುದ್ದೆಗೂ ನಿಯೋಜಿತ್ತು. ರಾಜ್ಯ ಸರ್ಕಾರ ಈ ವಿಷಯಗಳ ಬಗ್ಗೆ ನಿರ್ಲಕ್ಷ್ಯ ತೋರಿದ್ದನ್ನು ಪ್ರಶ್ನಿಸಿ ಮದುರೈನ ಕಾರ್ಮಿಕ ನಾಯಕರೊಬ್ಬರು ಮದ್ರಾಸ್ ಹೈಕೋರ್ಟ್‍ನ ಮದುರೈ ಪೀಠಕ್ಕೆ ಅರ್ಜಿ ಸಲ್ಲಿಸಿ, ಡಿಜಿಪಿ ಆಗಿ ರಾಜೇಂದ್ರನ್ ಅವರ ನೇಮಕವನ್ನು ಪ್ರಶ್ನಿಸಿ ಹಗರಣದ ತನಿಖೆ ಬಗ್ಗೆ ಸಿಬಿಐ ತನಿಖೆಗೂ ಒತ್ತಾಯಿಸಿದ್ದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಗುಟ್ಕಾ ಮತ್ತು ಪಾನ್ ಮಸಾಲ ಹಗರಣಕ್ಕೆ ಸಂಬಂಧಪಟ್ಟಂತೆ ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ರಹಸ್ಯ ವರದಿ ಸಲ್ಲಿಕೆಯಾಗಿಲ್ಲ ಎಂದು ಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ ಐಟಿ ಇಲಾಖೆ ಯಾರಿಗೆ, ಯಾವಾಗ ಈ ಗೋಪ್ಯ ವರದಿ ಸಲ್ಲಿಸಿದೆ ಎಂಬುದನ್ನು ಮಾಧ್ಯಮಗಳು ದಾಖಲೆ ಮತ್ತು ಸಾಕ್ಷ್ಯಾಧಾರದ ಸಮೇತ ಪ್ರಕಟಿಸಿದ್ದವು.

ಈ ಮಧ್ಯೆ ಇದಕ್ಕೆ ಸಂಬಂಧಿಸಿದ ಕಡತಗಳು ನಾಪತ್ತೆಯಾದವು. ಜಾಗೃತ ಆಯುಕ್ತರ ನೇಮಕಕ್ಕೆ ಆದೇಶ ನೀಡಿದ ನ್ಯಾಯಾಲಯವು ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯಕ್ಕೆ(ಡಿಎಎಸಿ) ಕಣ್ಮರೆಯಾಗಿರುವ ಕಡತಗಳ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿತು. ಡಿಎಎಸಿ ಕೆಲವು ಮಧ್ಯಮ ಶ್ರೇಣಿ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು, ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಹಾಗೂ ಇನ್ನಿತರರಿಗೆ ಪ್ರಶ್ನಾವಳಿಗಳನ್ನು ಕಳುಹಿಸಿ ಉತ್ತರಿಸುವಂತೆ ಸೂಚಿಸಿತ್ತು.

ನಂತರ ಆಗಿನ ರಾಮ ಮೋಹನ ರಾವ್ ಸಂದರ್ಶನವೊಂದರಲ್ಲಿ ಆದಾಯ ತೆರಿಗೆ ಇಲಾಖೆ ಈ ಹಗರಣದ ಸಂಬಂಧ ರಹಸ್ಯ ವರದಿ ಸಲ್ಲಿಸಿದ್ದು ನಿಜ. ಅದನ್ನು ನಾವು ಆಗಿನ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ನೀಡಿದ್ದಾಗಿ ಒಪ್ಪಿಕೊಂಡಿದ್ದರು.   ಅಚ್ಚರಿ ಬೆಳವಣಿಗೆಯೊಂದರಲ್ಲಿ ಐಟಿ ಇಲಾಖೆ ಜಯಲಲಿತಾ ಅವರ ವೇದ ನಿಲಯಂ ಮೇಲೆ ನಡೆಸಿದ ದಾಳಿ ವೇಳೆ ಕಣ್ಮರೆಯಾಗಿದ್ದ ರಹಸ್ಯ ದಾಖಲೆ ಸಹ ಪತ್ತೆಯಾಗಿತ್ತು.   ಈ ಸಂಬಂಧ ಡಿಎಂಕೆ ಶಾಸಕ ಅನ್ಬಳಗನ್ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿ ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು. ಇವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಸಿಬಿಐ ತನಿಖೆಗೆ ಆದೇಶಿಸಿತ್ತು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا