Urdu   /   English   /   Nawayathi

ಯುವಕನ ಕೊಲೆಯಲ್ಲಿ ಶಾಮೀಲಾಗಿದ್ದಾಳೆಂದು ಶಂಕಿಸಿ ಮಹಿಳೆಯ ನಗ್ನ ಮೆರವಣಿಗೆ, ಹಲ್ಲೆ..!

share with us

ಅರ್ರಾ (ಪಿಟಿಐ): 21 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಸುಪ್ರೀಂಕೋರ್ಟ್ ಮತ್ತು ಕೇಂದ್ರ ಸರ್ಕಾರದ ಎಚ್ಚರಿಕೆ ನಡುವೆಯೂ ದೇಶದ ವಿವಿಧೆಡೆ ಉದ್ರಿಕ್ತ ಗುಂಪಿನಿಂದ ಸಾಮೂಹಿಕ ಹಲ್ಲೆ ಪ್ರಕರಣಗಳು ಮುಂದುವರಿದಿವೆ. ಯುವಕನೊಬ್ಬನ ಕೊಲೆಯಲ್ಲಿ ಶಾಮೀಲಾದ ಶಂಕೆಯಿಂದ ಗುಂಪೊಂದು ಮಹಿಳೆಯೊಬ್ಬಳನ್ನು ಮನಬಂದಂತೆ ಥಳಿಸಿ, ನಗ್ನಗೊಳಿಸಿ ಮೆರವಣಿಗೆ ಮಾಡಿರುವ ಘಟನೆ ಬಿಹಾರದ ಭೋಜ್‍ಪುರ್ ಜಿಲ್ಲೆಯ ಬಹಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗ್ರಾಮಸ್ಥರ ಗುಂಪಿನ ದಾಳಿಯಲ್ಲಿ ಕೆಲವು ಅಂಗಡಿಗಳು ಸುಟ್ಟು ಭಸ್ಮವಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಹಿಂಸಾಚಾರದಲ್ಲಿ ತೊಡಗಿದ್ದ ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.

ಘಟನೆ ವಿವರ:

ಭೋಜ್‍ಪುರ್ ಜಿಲ್ಲೆಯ ದಾಮೋದರ್‍ಪುರ್ ಗ್ರಾಮದ ವಿಮಲೇಶ್ ಸಹಾ(19) ಎಂಬ ಯುವಕ ಹಳ್ಳಿಯಿಂದ ನಾಪತ್ತೆಯಾಗಿದ್ದ. ಆತನ ಶವ ನಿನ್ನೆ ಬೆಳಗ್ಗೆ ಗ್ರಾಮದ ಬಳಿ ಇರುವ ರೈಲ್ವೆ ಹಳಿ ಮೇಲೆ ಪತ್ತೆಯಾಯಿತು. ಗುಂಪುಗೂಡಿದ ಜನರು ಗ್ರಾಮದ ಹೊರವಲಯದಲ್ಲಿ ವೇಶ್ಯಾವೃತ್ತಿಯಲ್ಲಿ ತೊಡಗಿರುವ ಮಂದಿಯೇ ಈ ಕೃತ್ಯಕ್ಕೆ ಕಾರಣವೆಂದು ಶಂಕಿಸಿದರು. ನಂತರ ದಾಮೋದರ್‍ಪುರ್‍ನ ಉದ್ರಿಕ್ತ ಗ್ರಾಮಸ್ಥರ ಆ ಪ್ರದೇಶಕ್ಕೆ ನುಗ್ಗಿ ಕೆಲವು ಅಂಗಡಿಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿ ಸುಟ್ಟು  ಹಾಕಿದರು. ಅಲ್ಲದೇ ಕೈಗೆ ಸಿಕ್ಕವರನ್ನು ಥಳಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಅನೇಕರು ಗಾಯಗೊಂಡಿದ್ಧಾರೆ.

ವಿಮಲೇಶ್ ಕೊಲೆಗೆ ಕಾರಣವೆಂದು ಶಂಕಿಸಲಾದ ಮಹಿಳೆಯನ್ನು ಮನೆಯಿಂದ ಹೊರಗೆ ಎಳೆತಂದ ಗುಂಪು ಮನಬಂದಂತೆ ಥಳಿಸಿ, ವಿವಸ್ತ್ರಗೊಳಿಸಿ ಗ್ರಾಮದ ಬೀದಿಗಳಲ್ಲಿ ಬೆತ್ತಲೆ ಮೆರವಣಿಗೆ ನಡೆಸಿ ಮತ್ತೆ ಹಲ್ಲೆ ನಡೆಸಿದರು ಎಂದು ಭೋಜ್‍ಪರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವಕಾಶ್ ಕುಮಾರ್ ತಿಳಿಸಿದ್ದಾರೆ.  ನಂತರ ಉದ್ರಿಕ್ತ ಗುಂಪು ಚಲಿಸುತ್ತಿದ್ದ ರೈಲಿನ ಮೇಲೆ ಕಲ್ಲುಗಳನ್ನು ತೂರಿದ್ದು ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಹಿಂಸಾಚಾರದಲ್ಲಿ ತೊಡಗಿದ್ದ ಗ್ರಾಮಸ್ಥರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿಯೂ ಕೆಲವರು ಗಾಯಗೊಂಡಿದ್ದಾರೆ.

ಕೆಲವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.  ಈ ಘಟನೆಗಳಿಂದ ಅಕ್ಕಪಕ್ಕದ ಗ್ರಾಮಗಳಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಹಿತಕರ ಘಟನೆ ಸಂಭವಿಸದಂತೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا