Urdu   /   English   /   Nawayathi

ಕಲ್ಬುರ್ಗಿ ಕೇಸಿನ ಕಾಕಾ-ಗೌರಿ ಕೇಸಿನ ದಾದಾ ಒಬ್ಬನೇ !

share with us

ಬೆಂಗಳೂರು: 18 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಇದುವರೆಗೂ ಭೂಗತನಾಗಿರುವ ದಾದಾ ಮತ್ತು ಎಂ.ಎಂ.ಕಲ್ಬುರ್ಗಿ ಹತ್ಯೆಯ ತನಿಖೆ ವೇಳೆ ಕೇಳಿ ಬಂದಿದ್ದ ಕಾಕಾ ಹೆಸರಿನ ವ್ಯಕ್ತಿ ಒಬ್ಬನೇ ಆಗಿರುವ ಸಾಧ್ಯತೆಗಳಿವೆ ಎಂದು ಎಸ್‌ಐಟಿ ಅನುಮಾನಿಸಿದೆ. ಇದುವರೆಗೂ ಬಂಧಿತರಾಗಿರುವ ಎಲ್ಲಾ 12 ಆರೋಪಿಗಳನ್ನು ಕೂಲಂಕಷ ವಿಚಾರಣೆಗೆ ಒಳಪಡಿಸಿದ ನಂತರ ಎಸ್‌ಐಟಿ ಈ ತೀರ್ಮಾನಕ್ಕೆ ಬಂದಿದ್ದು ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೂ ಈ ಮಾಹಿತಿ ರವಾನಿಸಿದೆ. ಎರಡೂ ಪ್ರಕರಣಗಳ ತನಿಖಾ ತಂಡ ಪರಸ್ಪರ ಮಾಹಿತಿಗಳನ್ನು ವಿನಿಮಯ ಮಾಡಿಕೊಂಡಿವೆ. 

ಗೌರಿ ಹತ್ಯೆಗೂ ಮೊದಲು ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆ ವೇಳೆ ಸಿಐಡಿ ತಂಡ ಆರೋಪಿ ಒಬ್ಬನ ಸುಳಿವು ಬೆನ್ನತ್ತಿ ನೇಪಾಳಕ್ಕೂ ಹೋಗಿ ಬಂದಿತ್ತು.ಆ ಸಂದರ್ಭ ಸಿಕ್ಕಿದ್ದ ಕೆಲವು ಸಂಗತಿಗಳನ್ನು ಎಸ್‌ಐಟಿ ಜತೆಗೆ ವಿನಿಮಯ ಮಾಡಿಕೊಂಡಿದ್ದೇವೆ. 'ಕಾಕಾ' ಹೆಸರಿನ ವ್ಯಕ್ತಿಯ ಸೂಚನೆ ಮೇರೆಗೆ ಕಲ್ಬುರ್ಗಿ ಹತ್ಯೆ ನಡೆದಿತ್ತು. ಗೌರಿ ಹತ್ಯೆಯಲ್ಲಿ ದಾದಾ ಅಲಿಯಾಸ್‌ ನಿಹಾಲ್‌ ಹೆಸರಿನ ವ್ಯಕ್ತಿಯ ಹೆಸರು ಕೇಳಿ ಬಂದಿದೆ. ಕಾಕಾ ಮತ್ತು ದಾದಾ ಹೆಸರಿನ ಜತೆಗೆ ಸಿಕ್ಕಿರುವ ಮಾಹಿತಿಗಳ ಆಧಾರದಲ್ಲಿ ಎರಡೂ ಹೆಸರಿನ ವ್ಯಕ್ತಿ ಒಬ್ಬನೇ ಆಗಿರುವ ಸಾಧ್ಯತೆಗಳೇ ಹೆಚ್ಚಾಗಿವೆ ಎಂದು ಸಿಐಡಿ ಮೂಲಗಳು ತಿಳಿಸಿವೆ. 

ಶಶಿಕಾಂತ್‌ ರಾಣೆ ಹೆಸರಿಗೆ 

ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಪ್ರವೀಣ್‌ ಅಲಿಯಾಸ್‌ ಸುಜಿತ್‌ನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದಾಗ ದಾದಾ ಅಲಿಯಾಸ್‌ ನಿಹಾಲ್‌ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿತ್ತು. ಬಳಿಕ ಬಂಧಿತರಾದ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದಾಗ ಮೊದಲ ಬಾರಿ ಶಶಿಕಾಂತ್‌ ರಾಣೆ ಹೆಸರು ಕೇಳಿ ಬಂದಿತ್ತು. ನಿಹಾಲ್‌ ಎಂದರೆ ಯಾರು ಎಂದು ವಿಚಾರಿಸಿದರೆ ಈ ಹೆಸರಿನ ಕಡೆಗೇ ಆರೋಪಿಗಳು ಬೊಟ್ಟು ಮಾಡುತ್ತಿದ್ದರು. ಆದರೆ ವೈಜ್ಞಾನಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಈ ಹೆಸರಿಗೂ ಹತ್ಯೆಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ಖಚಿತವಾಗಿತ್ತು. ಆರೋಪಿಗಳು ಎಸ್‌ಐಟಿ ಸಮಯ ಹಾಳು ಮಾಡಲು ಮತ್ತು ತನಿಖೆಯ ದಿಕ್ಕು ತಪ್ಪಿಸಲು ಈ ಹೆಸರನ್ನು ಹೇಳುತ್ತಿದ್ದರು. ಏಕೆಂದರೆ ಶಶಿಕಾಂತ್‌ ರಾಣೆ ಏ.5 ರಂದು ಹೃದಯಾಘಾತದಿಂದ ನಿಧನರಾಗಿದ್ದರು. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಈ ಹೆಸರು ತೇಲಿಬಿಟ್ಟಿದ್ದರು. ಅದೇ ರೀತಿ ಗೋವಾ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿ ನಂತರ ತಲೆ ಮರೆಸಿಕೊಂಡು ಮೃತಪಟ್ಟಿರುವ ಮತ್ತೊಬ್ಬ ಆರೋಪಿ ಮಲಗೊಂಡಾ ಪಾಟೀಲ್‌ ಹೆಸರನ್ನೂ ಆರೋಪಿಗಳು ಹೇಳಿ ಆತನೇ ನಿಹಾಲ್‌ ಎಂದು ನಂಬಿಸಲು ಯತ್ನಿಸಿದ್ದರು. ಆರೋಪಿಗಳು ಬಂಧನಕ್ಕೆ ಮೊದಲೇ ಈ ಬಗ್ಗೆ ತರಬೇತಿ ಪಡೆದಂತಿರುವುದು ಗಮನಕ್ಕೆ ಬರುತ್ತಿದ್ದಂತೆ ಶಶಿಕಾಂತ್‌ ರಾಣೆ ಮತ್ತು ಮಲಗೊಂಡಾ ಪಾಟೀಲ್‌ ಹೆಸರಿನ ಸುತ್ತ ತನಿಖೆ ನಡೆಸಲೇ ಇಲ್ಲ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. 


24 hrs with the man attempting to swim around Great BritainAd: Red Bull


Don’t let rains cut your long rides shortAd: Bajaj Allianz

Recommended By Colombia

5 ಪಿಸ್ತೂಲು ಎಫ್‌ಎಸ್‌ಎಲ್‌ಗೆ 

ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಮಹಾರಾಷ್ಟ್ರದಲ್ಲಿ ಬಂಧಿಸಿರುವ ವೈಭವ್‌ ರೌತ್‌, ಶರದ್‌ ಕಲಾಸ್ಕರ್‌, ಸುಧನ್ವ ಗೊಂಡಾಲೇಕರ್‌ ಬಳಿ ವಶಪಡಿಸಿಕೊಂಡಿರುವ 11 ನಾಡ ಪಿಸ್ತೂಲುಗಳಲ್ಲಿ 5ನ್ನು ಎಫ್‌ಎಸ್‌ಎಲ್‌ ಗೆ ಕಳುಹಿಸಿದ್ದು,ವರದಿಗೆ ಕಾಯಲಾಗುತ್ತಿದೆ. ವರದಿ ಬಂದ ನಂತರ ಪನ್ಸಾರೆ, ದಾಭೋಲ್ಕರ್‌ ದೇಹದಲ್ಲಿ ಸಿಕ್ಕ ಗುಂಡುಗಳ ಎಫ್‌ಎಸ್‌ಎಲ್‌ ವರದಿ ಜತೆಗೆ ಹೋಲಿಕೆ ಮಾಡಲಾಗುವುದು ಎಂದು ಎಸ್‌ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆ ಐದು ಪಿಸ್ತೂಲುಗಳ ಎಫ್‌ಎಸ್‌ಎಲ್‌ ವರದಿ ನಮಗೂ ಮುಖ್ಯವಾಗಿದೆ. ಆ ವರದಿ ಬಂದ ನಂತರವಷ್ಟೇ ಗೌರಿ ಮತ್ತು ಕಲ್ಬುರ್ಗಿ ಹತ್ಯೆಗೆ ಬಳಸಿದ್ದ ಪಿಸ್ತೂಲಿನ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ ಎನ್ನುತ್ತಾರೆ ಅಧಿಕಾರಿಗಳು. 

ನಿಹಾಲ್‌ ದೇಶ ಬಿಟ್ಟಿಲ್ಲ 

ಗೌರಿ ಪ್ರಕರಣದ ದಾದಾ ನಿಹಾಲ್‌ ಮತ್ತು ಕಲ್ಬುರ್ಗಿ ಪ್ರಕರಣದ ಕಾಕಾ ಭಾರತದ ಯಾವ ಏರ್‌ಪೋರ್ಟ್‌ ನಿಂದಲೂ ವಿದೇಶಕ್ಕೆ ಪರಾರಿ ಆಗಿಲ್ಲ. ಅನುಮಾನ ಬಂದ ಕೆಲವು ಚಹರೆಗಳ ಬಗ್ಗೆ ಗೌರಿ ಹತ್ಯೆ ನಂತರ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷಿಸಲಾಗಿದೆ. ಆದರೆ ರಸ್ತೆ ಮಾರ್ಗವಾಗಿ ನೇಪಾಳ ತಲುಪಿ ಅಲ್ಲೇ ತಲೆಮರೆಸಿಕೊಂಡಿರಬಹುದು. ಅಥವಾ ನೇಪಾಳದಲ್ಲಿ ಪಾಸ್‌ ಪೋರ್ಟ್‌ ಮಾಡಿಸಿಕೊಂಡು ಬೇರೆ ದೇಶಕ್ಕೆ ಹೋಗಿರಬಹುದು ಎನ್ನುವ ದಿಕ್ಕಿನಲ್ಲೂ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. 

ಪಿಸ್ತೂಲು ನಮ್ಮ ಸುದರ್ಶನ ಚಕ್ರ 

ಶ್ರೀಕೃಷ್ಣನ ಅಸ್ತ್ರ ಸುದರ್ಶನ ಚಕ್ರ ವಿರೋಧಿಗಳನ್ನು ಹತ್ಯೆ ಮಾಡಿದ ನಂತರ ವಾಪಸ್‌ ಕೃಷ್ಣನ ಕೈಗೇ ಸೇರುತ್ತಿತ್ತು. ಅದೇ ರೀತಿ ನಮ್ಮ ವಿರೋಧಿಗಳಾಗಿರುವ ವಿಚಾರವಾದಿಗಳ ಹತ್ಯೆಗಳನ್ನು ಮಾಡಿರುವ ಪಿಸ್ತೂಲು ವಾಪಸ್‌ ನಮ್ಮ ಕೈಗೇ ತಲುಪಬೇಕು ಎನ್ನುವುದು ಶೂಟರ್‌ಗಳಿಗೆ ಬಂದೂಕು ತರಬೇತಿ ನೀಡಿದ ರಾಜೇಶ್‌ ಬಂಗೇರಾನ ಕಾಮನ್‌ ಡೈಲಾಗ್‌ ಆಗಿತ್ತು. ಕಲ್ಬುರ್ಗಿ ಮತ್ತು ಗೌರಿ ಹತ್ಯೆ ಮಾಡಿದ ಪಿಸ್ತೂಲನ್ನು ಬಂಗೇರಾನ ಇಚ್ಚೆಯಂತೆ ವಾಪಸ್‌ ಅಮೋಲ್‌ ಕಾಳೆಗೆ ತಲುಪಿಸಿದ್ದೆವು. ಅಲ್ಲಿಂದ ಮುಂದಕ್ಕೆ ಅವು ಎಲ್ಲಿ ಹೋಯಿತೋ ಗೊತ್ತಿಲ್ಲ ಎಂದು ಬಂಧಿತ ಗಣೇಶ್‌ ಮಿಸ್ಕಿನ್‌ ಮತ್ತು ಪರಶುರಾಮ್‌ ವಾಗ್ಮೋರೆ ತಮ್ಮ ಸ್ವ ಇಚ್ಚಾ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. 

ವಿ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا