Urdu   /   English   /   Nawayathi

ಜೋಗದಲ್ಲಿ ಶರಾವತಿಯ ಹಾಲ್ನೊರೆ ವೈಭವ

share with us

ಶಿವಮೊಗ್ಗ:18 ಆಗಸ್ಟ್ (ಫಿಕ್ರೋಖಬರ್ ಸುದ್ದಿ)ಅಲ್ಲಿ ರಾಜ ರಾಣಿ ಇಲ್ಲ, ಗಗನ ಚುಂಬಿ ರಾಕೆಟ್‌, ಸದ್ದು ಮಾಡುವ ರೋರರ್‌ ಸಹ ಇಲ್ಲ. ಅವರೆಲ್ಲರನ್ನು ಅಪರೂಪಕ್ಕೆಂಬಂತೆ ಶರಾವತಿ ನದಿ ಒಗ್ಗೂಡಿಸಿ, ಹಾಲ್ನೊರೆಯ ವೈಭೋಗ ಸೃಷ್ಟಿಸಿದೆ. 12 ವರ್ಷಗಳ ಬಳಿಕ ಜೋಗಜಲಪಾತದಲ್ಲಿ ಶರಾವತಿ ಭೋರ್ಗರೆಯುತ್ತಿದೆ. ಲಿಂಗನಮಕ್ಕಿಜಲಾಶಯದಿಂದ 56 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಟ್ಟಿರುವುದರಿಂದ ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ 961 ಅಡಿ ಎತ್ತರದಿಂದ ಶರಾವತಿ ನದಿಯು ಧುಮ್ಮಿಕ್ಕುತ್ತಿದೆ. 

ಜಲಪಾತದಲ್ಲಿ ಈಗ ಯಾವ ಕವಲುಗಳೂ ಇಲ್ಲ. ಗಾಂಭೀರ್ಯ ಮೆರೆಯುವ ರಾಜನಾಗಲಿ, ವಯ್ಯಾರದ ರಾಣಿಯಾಗಲಿ, ಹೊಗೆ ಉಗುಳುವ ರಾಕೆಟ್‌ ಆಗಲಿ, ಜೋರಾಗಿ ಶಬ್ದ ಮಾಡುವ ರೋರರ್‌ ಆಗಲಿ ಇಲ್ಲ. 
ನದಿ ಅಗಲಕ್ಕೂ ಪ್ರಪಾತಕ್ಕೆ ಜಿಗಿಯುತ್ತಿರುವ ಜಲಧಾರೆ ಒಂದೇ ಆಗಿದೆ. ಹಾಲ್ನೊರೆ ಜತೆ ಮಂಜು ಸೃಷ್ಟಿಸುತ್ತಿದೆ. ಜಲಧಾರೆ ಸೌಂದರ್ಯ ಇನ್ನಷ್ಟು ಹೆಚ್ಚಿದೆ. ಈ ವಭವವನ್ನು ಕಣ್ತುಂಬಿಕೊಳ್ಳಲು ಮಳೆಯನ್ನೂ ಲೆಕ್ಕಿಸದೇ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಜಮಾಯಿಸುತ್ತಿದ್ದಾರೆ. 

ದಾಖಲೆ ಪ್ರಮಾಣದ ನೀರು: ಲಿಂಗನಮಕ್ಕಿ ಜಲಾಶಯದ ಇತಿಹಾಸದಲ್ಲಿ 2ನೇ ಬಾರಿ ಅತಿಹೆಚ್ಚು ನೀರನ್ನು ಹೊರಗೆ ಹರಿಸಲಾಗುತ್ತಿದೆ. ಈ ಹಿಂದೆ 2007ರ ಆಗಸ್ಟ್‌ 12ರಂದು 1.20 ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಹರಿಸಿದ್ದು ಈವರೆಗಿನ ದಾಖಲೆಯಾಗಿದೆ. ಆ ವರ್ಷ ಜಲಾಶಯಕ್ಕೆ ಒಟ್ಟಾರೆ 213 ಟಿಎಂಸಿ ನೀರು ಹರಿದುಬಂದಿತ್ತು. ಈ ವರ್ಷ 56 ಸಾವಿರ ಕ್ಯೂಸೆಕ್‌ ನೀರು ಬಿಟ್ಟಿರುವುದು 2ನೇ ದಾಖಲೆಯಾಗಿದೆ. 2007ರಲ್ಲಿ ಸೆಪ್ಟೆಂಬರ್‌ ಅಂತ್ಯದವರೆಗೆ ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಗಿತ್ತು. ರಾಜ್ಯ ಮತ್ತು ಹೊರ ರಾಜ್ಯಗಳಿಂದ ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಿದ್ದರು. 

ಜಲ ಸಂಗ್ರಹ: 151.75 ಟಿಎಂಸಿ ಸಾಮರ್ಥ್ಯ‌ದ ಜಲಾಶಯದಲ್ಲಿ ಪ್ರಸ್ತುತ 147.42 ಟಿಎಂಸಿ ನೀರಿದೆ. ಶುಕ್ರವಾರ ಬೆಳಗ್ಗೆ 8ಗಂಟೆಗೆ 1817.70 ಅಡಿ ತಲುಪಿ ಪೂರ್ಣಮಟ್ಟ ತಲುಪಲು 1.30 ಅಡಿ ಮಾತ್ರ ಬಾಕಿ ಉಳಿದಿತ್ತು. ಒಳಹರಿವು 50,620 ಕ್ಯೂಸೆಕ್‌ ಇದ್ದುದರಿಂದ ಕ್ರಸ್ಟ್‌ಗೇಟ್‌ಗಳ ಮೂಲಕ 35,473 ಕ್ಯೂಸೆಕ್‌ ನೀರನ್ನು ಬಿಡಲಾಗುತ್ತಿತ್ತು. ಮಧ್ಯಾಹ್ನದ ಹೊತ್ತಿಗೆ ಒಳಹರಿವು 56ಸಾವಿರ ಕ್ಯೂಸೆಕ್‌ ತಲುಪಿದ ಹಿನ್ನೆಲೆಯಲ್ಲಿ ಹೊರ ಹರಿವನ್ನೂ ಅಷ್ಟೇ ಪ್ರಮಾಣಕ್ಕೆ ಏರಿಕೆ ಮಾಡಲಾಯಿತು. 

ಒಂದೂವರೆ ತಿಂಗಳು ಜೋರು: ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸೆಪ್ಟೆಂಬರ್‌ ಅಂತ್ಯದವರೆಗೆ ಮಳೆಯಾಗುವುದರಿಂದ ವಾಡಿಕೆ ಪ್ರಕಾರ ಸುರಿದರೂ ಪ್ರವಾಸಿಗರಿಗೆ ಇನ್ನೂ ಒಂದೂವರೆ ತಿಂಗಳ ಕಾಲ ಈ ಸುಂದರ ದೃಶ್ಯವನ್ನು ವೀಕ್ಷಿಸುವ ಅವಕಾಶ ಲಭ್ಯವಾಗುತ್ತದೆ. ಜೋಗದಲ್ಲಿ ಹಾಲ್ನೊರೆ ಉಕ್ಕಿಸುತ್ತಾ ಧುಮ್ಮಿಕ್ಕುವ ಶರಾವತಿಯ ಜಲಧಾರೆಯನ್ನು ಸಾವಿರಾರು ಪ್ರವಾಸಿಗರು ಶುಕ್ರವಾರ ಕಣ್ತುಂಬಿಕೊಂಡರು. 

ವಿ, ಕ ವರದಿ   

Prayer Timings

Fajr فجر
Dhuhr الظهر
Asr أسر
Maghrib مغرب
Isha عشا