Urdu   /   English   /   Nawayathi

ರೈತನ ಕಷ್ಟ ಏನು ಎನ್ನುವುದು ಗದ್ದೆಯಲ್ಲಿ ಅರಿವಾಯಿತು;ನೇಜಿ ನಟ್ಟು ಸಿಎಂ

share with us

ಮಂಡ್ಯ: 11 ಆಗಸ್ಟ್ (ಫಿಕ್ರೋಖಬರ್ ಸುದ್ದಿ) 'ರೈತನ ಕಷ್ಟ ಏನು ಎನ್ನುವುದು ನನಗೆ ಇಂದು ಕೆಸರು ಗದ್ದೆಯಲ್ಲಿ ಅರಿವಾಯಿತು. 25 ವರ್ಷಗಳ ಬಳಿಕ ಗದ್ದೆಗಿಳಿದು ಕೆಲಸ ಮಾಡಿದೆ. ಇದು ನನ್ನ ಜೀವನದಲ್ಲಿ  ಮರೆಯಲಾರದ ದಿನ' ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡ್ಯದ ಸೀತಾಪುರದ ಜಮೀನಿನಲ್ಲಿ ಶನಿವಾರ ನೇಜಿ ನಟ್ಟು ಹೇಳಿದರು. ರೈತರನ್ನುದ್ದೇಶಿಸಿ ಮಾತನಾಡಿದ ಸಿಎಂ 'ನಾನು ರಾಜ್ಯದ ಜನತೆಗೆ ಸಂದೇಶ ಕೊಡಲು ಇಲ್ಲಿಗೆ ಬಂದಿದ್ದೇನೆ. ಬರೀ ಮಂಡ್ಯಕ್ಕಾಗಿ ಅಲ್ಲ' ಎಂದರು. 

'ರೈತ ಸಾಲಗಾರರ ಕಾಟದಿಂದ ಮುಕ್ತ ವಾಗಬೇಕು ಎನ್ನುವುದು ನನ್ನ ಪರಮಗುರಿ' ಎಂದರು. 

'ಇದು ನಿಮ್ಮ ಸರ್ಕಾರ. ಇದನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ,ದುಪ್ಪಟ್ಟು ಕೆಲಸ ಮಾಡಲು ನಾನು ಸಿದ್ದನಿದ್ದೇನೆ. ನನ್ನ ಮೇಲೆ ಯಾರೂ ಸಂಶಯ ಪಡಬೇಡಿ' ಎಂದರು. 

'ನನಗೆ ನಗರ ಬೇರೆ ಅಲ್ಲ, ಗ್ರಾಮೀಣ ಪ್ರದೇಶ ಬೇರೆ ಅಲ್ಲ. ಎರಡನ್ನೂ ಸಮಾನವಾಗಿ ಕಾಣುವವನು ನಾನು . ನಗರಕ್ಕೆ ಉದ್ಯೋಗ ಅರಸಿ ಬಂದಿರುವ ಯುವ ಜನತೆ ಪುನಃ  ನಿಮ್ಮ ಹಳ್ಳಿಗಳಿಗೆ ಮರಳಿ ತಂದೆ-ತಾಯಿಗಳೊಂದಿಗೆ ಬದುಕಬೇಕು.ಇದಕ್ಕಾಗಿ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಪ್ರೋತ್ಸಾಹ ನೀಡುತ್ತದೆ' ಎಂದರು. 

'ನಾನು ಬೆಂಗಳೂರಿನಲ್ಲಿ ಕೂರುವುದಿಲ್ಲ.ನಾನು 30 ಜಿಲ್ಲೆಯ ಪ್ರತಿನಿಧಿ. 30 ಜಿಲ್ಲೆಗಳನ್ನೂ ದತ್ತು ತೆಗೆದುಕೊಳ್ಳುತ್ತೇನೆ. ಮೂವತ್ತು ಜಿಲ್ಲೆಗಳ ರೈತರು ನನ್ನವರು . ನನ್ನ ರೈತ ಮುಂದೆಂದೂ ಸಾಲಗಾರನಾಗಬಾರದು . ಯಾರೂ ಆತನ ಮನೆ ಬಾಗಿಲಿಗೆ ಸಾಲ ವಸೂಲಿಗೆಂದು ಬರಬಾರದು. ಅಂತಹ ಯೋಜನೆಗಳನ್ನು ಸರ್ಕಾರದಿಂದ ಜಾರಿ ಮಾಡುತ್ತೇನೆ' ಎಂದರು. 

'ಯಾವೊಬ್ಬ ರೈತನು ಆತ್ಮಹತ್ಯೆ ಮಾಡಿಕೊಳ್ಳಬಾರದು. ನಮ್ಮದ್ದು ರೈತ ಪರ ಸರ್ಕಾರ. 70 ವರ್ಷ ಕಳೆದಿದ್ದೀರಿ, ನನಗೆ ಇನ್ನೂ ನಾಲ್ಕೈದು ತಿಂಗಳು ಅವಕಾಶ ನೀಡಿ' ಎಂದರು.

ಶುಗರ್‌ ಫ್ಯಾಕ್ಟರಿಗೆ ಪುನರ್‌ ಜೀವ

'ಏಳೇಳು ಜನ್ಮದಲ್ಲಿ ಮಂಡ್ಯ ನಾಡಿನ ಜನರ ಋಣವನ್ನು ತೀರಿಸುವುದು ಸಾಧ್ಯವಿಲ್ಲ. ಮಂಡ್ಯ ಶುಗರ್‌ ಫ್ಯಾಕ್ಟರಿಗೆ ಪುನರ್‌ ಜೀವ ಕೊಡುತ್ತೇನೆ, ಪಾಂಡವಪುರ ಶುಗರ್‌ ಫ್ಯಾಕ್ಟರಿಗೂ ಜೀವ ಕೊಡುತ್ತೇನೆ. ಸದ್ಯದಲ್ಲೇ ಪ್ರಾರಂಭ ಮಾಡುತ್ತೇನೆ' ಎಂದು ಆಶ್ವಾಸನೆ ನೀಡಿದರು. 

ನೂಕು ನುಗ್ಗಲು ನಾಟಿಗೆ ಪರದಾಟ !
ಸಿಎಂ ಕಂಡ ಬಳಿಕ ನೂರಾರು ಜನರು ಮುಗಿಬಿದ್ದ ಹಿನ್ನಲೆಯಲ್ಲಿ ಪೊಲೀಸರು ಹರಸಾಹಸ ಪಡಬೇಕಾಯಿತು. ಆದರೂ ಸಿಎಂ 10 ನಿಮಷಗಳ ಕಾಲ ನೇಜಿ ನಟ್ಟರು. 

ರೈತರೊಂದಿಗೆ ಭೋಜನ 
ರಾಗಿಮುದ್ದೆ , ಹೆಸರು ಬೇಳೆ ಪಾಯಸ, ಅವರೆ ಕಾಳು ಕೂಟು ಸೇರಿದಂತೆ ವಿಶೇಷವಾದ ಸ್ಥಳೀಯ ಖಾದ್ಯಗಳನ್ನು ಸಿದ್ದಪಡಿಸಲಾಗಿತ್ತು. ಸಿಎಂ ಗದ್ದೆ ಬದಿಯಲ್ಲೇ ರೈತರೊಂದಿಗೆ ಊಟ ಮಾಡಿದರು. 

ನಿರ್ಮಲಾನಂದ ಶ್ರೀಗಳು ಭಾಗಿ 
ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ನಿರ್ಮಲಾನಂದ ಶ್ರೀಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ರೈತರಿಗೆ ಆಶೀರ್ವಚನ ನೀಡಿದರು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا