Urdu   /   English   /   Nawayathi

ಸಮುದ್ರದಲ್ಲಿ ಮೀನುಗಾರರಿಗೆ ಲಾಟರಿ: ಬಲೆಗೆ ಬಿದ್ದ ಈ ಮೀನಿನ ಬೆಲೆ ಎಷ್ಟು ಗೊತ್ತಾ ?

share with us

ಮುಂಬಯಿ: 07 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಮಹಾರಾಷ್ಟ್ರದ ಪಾಲ್ಗಾರ್ ಬಳಿ ಮೀನು ಹಿಡಿಯಲು ಹೋದ ಇಬ್ಬರು ಸಹೋದರರಿಗೆ ಅದೃಷ್ಟ ಖುಲಾಯಿಸಿದೆ. ಪಾಲ್ಗಾರ್‌ನ ಇಬ್ಬರು ಸಹೋದರರಿಗೆ ಗೋಲ್ ಮೀನು ದೊರೆತಿದ್ದು, ಈ ಒಂದೇ ಮೀನಿನಿಂದ ಅವರಿಗೆ 5.5 ಲಕ್ಷ ರೂ. ಸಿಕ್ಕಿದೆ. ಹೀಗಾಗಿ, ಮುಂಬಯಿ - ಪಾಲ್ಗಾರ್ ಕರಾವಳಿ ಪ್ರದೇಶದಲ್ಲಿ ದೊರೆತ ಅತ್ಯಂತ ದುಬಾರಿ ಮೀನು ಎಂಬ ಖ್ಯಾತಿ ಪಡೆದುಕೊಂಡಿದೆ. ಮಹೇಶ್‌ ಮೆಹೆರ್ ಹಾಗೂ ಭರತ್ ಎಂಬ ಸಹೋದರರು ತಮ್ಮ ಚಿಕ್ಕ ಬೋಟಿನಲ್ಲಿ ಮೀನು ಹಿಡಿಯಲು ಹೋದಾಗ ಅಪರೂಪಕ್ಕೆ ದೊರೆತ ಸುಮಾರು 30 ಕೆಜಿ ತೂಕದ ಗೋಲು ಮೀನನ್ನು ಹಿಡಿದಿದ್ದರು. ನಂತರ, ಇದನ್ನು ಐದೂವರೆ ಲಕ್ಷ ರೂ. ಗಳಿಗೆ ಮಾರಾಟ ಮಾಡಿದ್ದಾರೆ. ಇದು ಬಹಳ ಸವಿಯಾಗಿರುತ್ತದೆ ಎನ್ನಲಾಗಿದ್ದು, ಅಲ್ಲದೆ, ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಗೋಲು ಮೀನಿನಲ್ಲಿ ಔಷಧೀಯ ಮೌಲ್ಯ ಹೇರಳವಾಗಿರುವದರಿಂದ ಈ ಮೀನಿಗೆ ಒಳ್ಳೆಯ ಬೆಲೆ ಇದೆ. 

ಬ್ಲಾಕ್‌ ಸ್ಪಾಟೆಡ್ ಕ್ರೋಕರ್ ಎಂಬ ಹೆಸರಿನ ಈ ಮೀನಿನ ವೈಜ್ಞಾನಿಕ ಹೆಸರು ಪ್ರೊಟೋನಿಬಿಯಾ ಡಯಾಕ್ಯಾಂಥಸ್. ಇದನ್ನು ಚಿನ್ನದ ಹೃದಯವುಳ್ಳ ಮೀನು ಎಂದು ಸಹ ಕರೆಯುತ್ತಾರೆ. ಇನ್ನು, ಗೋಲು ಮೀನುಅನೇಕ ಬೆಲೆ ಶ್ರೇಣಿಗಳಲ್ಲಿ ಲಭ್ಯವಿದ್ದು, ಕಡಿಮೆ ಬೆಲೆಯ ಮೀನುಗಳನ್ನು ಸ್ಥಳೀಯ ಮೀನು ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇನ್ನು, ಪಾಲ್ಗಾರ್ ಬಳಿ ಸಹೋದರರಿಗೆ ದೊರೆತ ರೀತಿಯ ಅಧಿಕ ಬೆಲೆಯ ಮೀನನ್ನು ಸಿಂಗಾಪುರ, ಮಲೇಷ್ಯಾ, ಇಂಡೋನೇಷ್ಯಾ, ಹಾಂಗ್‌ಕಾಂಗ್ ಹಾಗೂ ಜಪಾನ್‌ ರಾಷ್ಟ್ರಗಳಿಗೆ ಮಾರಾಟ ಮಾಡಲಾಗುತ್ತದೆ. 

ಗೋಲು ಮೀನಿನ ಚರ್ಮದಲ್ಲಿ ಉತ್ತಮ ಗುಣಮಟ್ಟದ ಪ್ರಾಣಿಯ ಪ್ರೋಟೀನ್ ಹೊಂದಿದ್ದು, ಇದರಿಂದ ಆಹಾರ, ಕಾಸ್ಮೆಟಿಕ್ಸ್ ಹಾಗೂ ಔಷಧವನ್ನು ತಯಾರು ಮಾಡುತ್ತಾರೆ. ಅಲ್ಲದೆ, ಮೀನಿನ ರೆಕ್ಕೆಯಿಂದಲೂ ಬಹಳಷ್ಟು ಉಪಯೋಗವಿದ್ದು, ಹೀಗಾಗಿ ಗೋಲು ಮೀನಿಗೆ ಪ್ರಪಂಚದಾದ್ಯಂತ ಬೇಡಿಕೆ ಹೆಚ್ಚಾಗುತ್ತಿದೆ. ಮೆಹೆರ್ ಸಹೋದರರಿಗೆ ಈ ದುಬಾರಿ ಮೀನು ದೊರೆತ ಸುದ್ದಿ ಕಾಡ್ಚಿಚ್ಚಿನಂತೆ ಹರಡಿದ್ದು, ಮೀನನ್ನು ಹರಾಜಿನಲ್ಲಿ ಕೊಂಡುಕೊಳ್ಳಲು ವ್ಯಾಪಾರಿಗಳು ತುದಿಗಾಲಲ್ಲಿ ನಿಂತಿದ್ದು, ನಂತರ ಇದನ್ನು ಐದೂವರೆ ಲಕ್ಷ ರೂ. ಗೆ ಕೊಂಡುಕೊಳ್ಳಲಾಯಿತು. ಇನ್ನು, ಈ ಬಗ್ಗೆ ಮಾತನಾಡಿದ ಮಹೇಶ್, ಇತ್ತೀಚಿನ ಹಲವು ವರ್ಷಗಳಿಂದ ಮೀನು ಸಿಗುವುದು ಕಡಿಮೆಯಾಗಿದೆ. ಹೀಗಾಗಿ, ಈ ಗೋಲು ಮೀನು ದೊರೆತಿರುವುದು ದೊಡ್ಡ ಸಮಾಧಾನ. ಲಾಟರಿ ಹೊಡೆದಂತೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಹಣದಿಂದ ನಮ್ಮ ಆರ್ಥಿಕ ಸಂಕಷ್ಟ ಬಗೆಹರಿಯಲಿದ್ದು, ನಮ್ಮ ಬೋಟನ್ನು ರಿಪೇರಿ ಮಾಡಬಹುದು ಎಂದಿದ್ದಾನೆ. ಜತೆಗೆ, ಎರಡು ದಶಕಗಳಿಂದ ಇಬ್ಬರು ಸಹೋದರರು ಮೀನು ಹಿಡಿಯುತ್ತಿದ್ದರೂ, ಈ ಗೋಲು ಮೀನಿನ ಬಗ್ಗೆ ಕೇಳಿದ್ದೆವು, ಆದರೆ ಅದನ್ನು ನೋಡಿರಲಿಲ್ಲ ಎಂದು ಅಚ್ಚರಿಪಟ್ಟಿದ್ದಾರೆ. 

ಗೋಲು ಮೀನು ಹಿಂದೂ ಮಹಾಸಾಗರ ಹಾಗೂ ಫೆಸಿಫಿಕ್ ಮಹಾಸಾಗರದಲ್ಲಿ ವಾಸ ಮಾಡುತ್ತವೆ. ಜತೆಗೆ, ಪರ್ಶಿಯನ್ ಗಲ್ಫ್‌ ರಾಷ್ಟ್ರಗಳು, ಪಾಕ್, ಭಾರತ, ಬಾಂಗ್ಲಾದೇಶ, ಬರ್ಮಾದಿಂದ ಹಿಡಿದು ಉತ್ತರದ ಜಪಾನ್‌ವರೆಗೆ ದೊರೆಯುತ್ತದೆ. ಅಲ್ಲದೆ, ಪಪುವಾ ನ್ಯೂ ಗಿನಿಯಿಂದ ಉತ್ತರದ ಆಸ್ಟ್ರೇಲಿಯಾದವರೆಗೂ ಸಿಗುತ್ತದೆ. 

ವಿ, ಕ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا