Urdu   /   English   /   Nawayathi

ಡಿಪ್ಲೊಮಾ ಪರೀಕ್ಷಾ ಅಕ್ರಮ: 592 ವಿದ್ಯಾರ್ಥಿಗಳ ಶಿಕ್ಷೆ ಪ್ರಕಟ

share with us

ಬೆಂಗಳೂರು: 04 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಡಿಪ್ಲೊಮಾ ಸೆಮಿಸ್ಟರ್‌ ಪರೀಕ್ಷೆಯೊಂದರಲ್ಲೇ  ಅಕ್ರಮ ಎಸಗಿದ 592 ವಿದ್ಯಾರ್ಥಿಗಳ ಫ‌ಲಿತಾಂಶ ರದ್ದು ಮತ್ತು ಡಿಬಾರ್‌ ಶಿಕ್ಷೆ ವಿಧಿಸಲಾಗಿದೆ. ಸಾಮೂಹಿಕ ನಕಲು ಮತ್ತಿತರ ಗಂಭೀರ ಪರೀಕ್ಷಾ ಅವ್ಯವಹಾರ ನಡೆಸಿದ ವಿದ್ಯಾರ್ಥಿಗಳು 2021ರ ಅಂತ್ಯದವರೆಗೆ ಯಾವುದೇ ಪರೀಕ್ಷೆ ಬರೆಯುವಂತಿಲ್ಲ! ತಾಂತ್ರಿಕ ಶಿಕ್ಷಣ ಇಲಾಖೆ ರಾಜ್ಯದ ಪಾಲಿಟೆಕ್ನಿಕ್‌ ಕಾಲೇಜುಗಳ ವಿವಿಧ ಡಿಪ್ಲೊಮಾ ಕೋರ್ಸ್‌ಗೆ 2018ರ ಮೇ, ಜೂನ್‌ನಲ್ಲಿ ನಡೆದ ಸೆಮಿಸ್ಟರ್‌ ಪರೀಕ್ಷೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಜರಾಗಿದ್ದರು. ಇಲಾಖೆಯ ಪರೀಕ್ಷಾ ನಿಯಮಕ್ಕೆ ವಿರುದ್ಧವಾಗಿ ಪರೀಕ್ಷಾ ಕೇಂದ್ರದ ಒಳಗೆ ನಕಲು, ಅಕ್ರಮ ಚಟುವಟಿಕೆ  ಸೇರಿ ನಾನಾ ರೀತಿಯ ಪರೀಕ್ಷಾÒ ಅವ್ಯವಹಾರ ನಡೆಸಿದ 592 ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲಾಗಿತ್ತು.

ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಹೀಗೆ ಎಲ್ಲ ಪರೀಕ್ಷೆಗಳಲ್ಲೂ ಕೆಲವು ವಿದ್ಯಾರ್ಥಿಗಳು ನಕಲು ಇತ್ಯಾದಿ ಮಾಡುತ್ತಾರೆ, ಪರೀಕ್ಷಾ ಮೇಲ್ವಿಚಾರಕರ ಬಳಿ ಸಿಕ್ಕಿಹಾಕಿಕೊಳ್ಳುತ್ತಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ತಕ್ಷಣವೇ ಡಿಬಾರ್‌ ಮಾಡಲಾಗುತ್ತದೆ. ಆದರೆ, ತಾಂತ್ರಿಕ ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳು ಮಾಡಿರುವ ಕೃತ್ಯದ ಆಧಾರದಲ್ಲಿ ವಿವಿಧ ಕ್ರಮ ತೆಗೆದುಕೊಳ್ಳುತ್ತದೆ.

ವಿಚಾರಣಾ ಸಮಿತಿ :ತಾಂತ್ರಿಕ ಶಿಕ್ಷಣ ಇಲಾಖೆಯು ಡಿಪ್ಲೊಮಾ ಕೋರ್ಸ್‌ಗಳ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ವಿದ್ಯಾರ್ಥಿಗಳ ವಿಚಾರಣೆಗಾಗಿ ತಜ್ಞರ ನೇತೃತ್ವದಲ್ಲಿ ಮಾಲ್‌ಪ್ರಾಕ್ಟೀಸ್‌ ವಿಚಾರ ಸಮಿತಿ ರಚನೆ ಮಾಡಿದೆ. ಆ ಸಮಿತಿಯು ಜುಲೈ 11ರಿಂದ 17ರ ತನಕ ಎಲ್ಲ ವಿದ್ಯಾರ್ಥಿಗಳನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದೆ.
ವಿದ್ಯಾರ್ಥಿಗಳ ಹೇಳಿಕೆ ಮತ್ತು ಅವರು ಒದಗಿಸಿದ್ದ ದಾಖಲೆ ಆಧಾರದಲ್ಲಿ ಸಮಿತಿ 5 ವಿಧದ ತೀರ್ಪು ನೀಡಿದೆ. ಸಮಿತಿ ನೀಡಿರುವ ತೀರ್ಪನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ಎಲ್ಲ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲರಿಗೂ ಇಲಾಖೆ ನಿರ್ದೇಶಿಸಿದೆ.

592 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ವಿಚಾರಣೆ ವೇಳೆ ನೀಡಿದ ಹೇಳಿಕೆ ಮತ್ತು ದಾಖಲೆ ಆಧಾರದಲ್ಲಿ ದೋಷಮುಕ್ತಗೊಳಿಸಲಾಗಿದೆ. 35 ವಿದ್ಯಾರ್ಥಿಗಳ ಪರೀಕ್ಷೆಯ ಫ‌ಲಿತಾಂಶ ಪ್ರಕಟಿಸಲಾಗುತ್ತದೆ.

276 ವಿದ್ಯಾರ್ಥಿಗಳ ವಿರುದ್ಧ ಪರ್‌ಫಾರ್ಮೆನ್ಸ್‌ ಆಫ್ ಸಬೆjಕ್ಟ್ ಕ್ಯಾನ್ಸಲ್ಡ್‌(ಪಿಎಸ್‌ಸಿ) ತೀರ್ಪು ನೀಡಲಾಗಿದ್ದು, ಈ ವಿದ್ಯಾರ್ಥಿಗಳ ಪರೀಕ್ಷಾ ಅಕ್ರಮದ ಪಠ್ಯ ವಿಷಯ ಫ‌ಲಿತಾಂಶ ರದ್ದುಗೊಳಿಸಿದೆ.  ಉಳಿದ ವಿಷಯದ ಫ‌ಲಿತಾಂಶ ನೀಡಲಾಗುತ್ತದೆ. 243 ವಿದ್ಯಾರ್ಥಿಗಳ ವಿರುದ್ಧ ಪರ್‌ಫಾರ್ಮೆನ್ಸ್‌ ಆಫ್ ಎಕ್ಸಾಮಿನೇಷನ್‌ ಕ್ಯಾನ್ಸಲ್ಡ್‌(ಪಿಇಸಿ) ಆದೇಶ ನೀಡಲಾಗಿದ್ದು, ಈ ವಿದ್ಯಾರ್ಥಿಗಳ ಎಲ್ಲ ವಿಷಯದ ಫ‌ಲಿತಾಂಶ ರದ್ದುಗೊಳಿಸಿದೆ ಮತ್ತು 2018ರ ನವೆಂಬರ್‌ನಲ್ಲಿ ಪರೀಕ್ಷೆಗೆ ಹಾಜರಾಗಬಹುದು (ಬೇರೆ ಸೆಮಿಸ್ಟರ್‌ ಪರೀಕ್ಷೆಗೆ ಹಾಜರಾಗಿದ್ದರೆ ಅದರ ಫ‌ಲಿತಾಂಶ ಪ್ರಕಟಿಸಲಾಗುತ್ತದೆ) ಎಂದು ಸಮಿತಿ ತೀರ್ಪು ನೀಡಿದೆ.

ಪರ್‌ಫಾರ್ಮೆನ್ಸ್‌ ಆಫ್ ಎಕ್ಸಾಮಿನೇಷನ್‌ ಕ್ಯಾನ್ಸಲ್ಡ್‌+1 (ಪಿಇಸಿ+1) ಎಂದು 4 ವಿದ್ಯಾರ್ಥಿಗಳ ವಿರುದ್ದ ಆದೇಶ ಬಂದಿದ್ದು, ಇವ ರು 2019ರವರೆಗೂ ಪರೀಕ್ಷೆಗೆ ಕುಳಿತುಕೊಳ್ಳುವಂತಿಲ್ಲ. ಪಿಇಸಿ+2 ಎಂದು ಇಬ್ಬರು ವಿದ್ಯಾರ್ಥಿಗಳನ್ನು ಶಿಕ್ಷಿಸಲಾಗಿದ್ದು, ಇವರು 2019ರ ನವೆಂಬರ್‌ವರೆಗೂ ಪರೀಕ್ಷೆ ಬರೆಯುವಂತಿಲ್ಲ. ಪರ್‌ಫಾರ್ಮೆನ್ಸ್‌ ಆಫ್ ಎಕ್ಸಾಮಿನೇಷನ್‌ ಕ್ಯಾನ್ಸಲ್‌+7(ಪಿಇಸಿ+7) ಶಿಕ್ಷೆಗೆ ಗುರಿಯಾಗಿರುವ 19 ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಈ ವಿದ್ಯಾರ್ಥಿಗಳು 2021ರ ನವೆಂಬರ್‌ವರೆಗೂ ಡಿಬಾರ್‌ ಆಗಿದ್ದಾರೆ ಮತ್ತು ಅಲ್ಲಿಯವರೆಗೂ ಪರೀಕ್ಷೆ ಬರೆಯುವಂತಿಲ್ಲ ಎಂದು ಖಡಕ್‌ ಆದೇಶ ನೀಡಿದೆ.

ದೋಷಮುಕ್ತ-35
ವಿಷಯದ ರದ್ದು-276
ಪರೀಕ್ಷೆ ರದ್ದು-243
2019ರ ಮೇ ಅಥವಾ ನವೆಂಬರ್‌ ವರೆಗೂ ಡಿಬಾರ್‌-6
2021ರ ನವೆಂಬರ್‌ ವರೆಗೂ ಡಿಬಾರ್‌ -19

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا