Urdu   /   English   /   Nawayathi

ನಿರ್ಭಯಾ ನಿಧಿ ಅಡಿ ಬೆಂಗಳೂರಿಗೆ 667 ಕೋಟಿ..!, ಮಹಿಳಾ ಸುರಕ್ಷತೆಗೆ 2919 ಕೋಟಿ ರೂ. ವೆಚ್ಚ

share with us

ನವದೆಹಲಿ: 04 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಲು ಉದ್ದೇಶಿಸಿದೆ. ನಿರ್ಭಯಾ ನಿಧಿ ಅಡಿ ಈ ಯೋಜನೆಗಳಿಗೆ ಒಟ್ಟು 2919.55 ಕೋಟಿ ರೂ. ವೆಚ್ಚವಾಗಲಿದೆ.  ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಖಾತೆ ರಾಜ್ಯ ಸಚಿವ ವೀರೇಂದ್ರ ಕುಮಾರ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.  ನವದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಅಹಮದಾಬಾದ್, ಹೈದರಾಬಾದ್ ಹಾಗೂ ಲಕ್ನೋ ನಗರಗಳಲ್ಲಿ ಮಹಿಳೆಯರ ರಕ್ಷಣೆ ಮತ್ತು ಸುರಕ್ಷತೆಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಬೀದಿ ದೀಪಗಳು, ಸುರಕ್ಷಿತ ಸಾರ್ವಜನಿಕ ಸಾರಿಗೆ, ಪೊಲೀಸ್ ಪಹರೆ ಬಿಗಿಗೊಳಿಸುವುದೂ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಮೂಲಕ ಈ ಎಂಟು ನಗರಗಳಲ್ಲಿ ಮಹಿಳೆಯರಿಗೆ ರಕ್ಷಣೆ ಒದಗಿಸುವುದು ಇದರ ಮುಖ್ಯ ಉದ್ದೇಶ. ಪ್ರತಿ ನಗರದಲ್ಲೂ ಇದನ್ನು ಈ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಆಯಾ ನಗರಗಳ ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆಗಳ ಉನ್ನತಾಧಿಕಾರಿಗಳೂ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ ಯೋಜನೆ ರೂಪಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಬೆಂಗಳೂರಿಗೆ ಅಗ್ರಸ್ಥಾನ : ಮಹಿಳೆಯರ ಸುರಕ್ಷತೆಗಾಗಿ ನಿಗದಿಗೊಳಿಸಿರುವ ಮೊತ್ತದಲ್ಲಿ ಬೆಂಗಳೂರಿಗೆ ಅಗ್ರಸ್ಥಾನ ಲಭಿಸಿದೆ. ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ ಎನಿಸಿರುವ ಬೆಂಗಳೂರಿನಲ್ಲಿ 667 ಕೋಟಿ ರೂ.ಗಳ ವೆಚ್ಚದಲ್ಲಿ ಈ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಕಣ್ಗಾವಲು, ಕ್ಷಿಪ್ರ ಪ್ರತಿಕ್ರಿಯೆ, ಪೊಲೀಸ್ ವಾಹನಗಳ ವ್ಯವಸ್ಥೆ, ಪೊಲೀಸ್ ಠಾಣೆಗಳು ಹಾಗೂ ಪ್ರಮುಖ ಆಸ್ಪತ್ರೆಗಳ ತೀವ್ರ ನಿಗಾ ಸ್ಪಂದನೆ ಘಟಕಗಳಲ್ಲಿ ಮಹಿಳೆಯರ ಹೆಲ್ಪ್‍ಡೆಸ್ಕ್‍ನಲ್ಲಿ ಎನ್‍ಜಿಒ ಸ್ವಯಂಸೇವಕರ ನೇಮಕ, ಮಹಿಳೆಯರು ಮತ್ತು ಮಕ್ಕಳಿಗಾಗಿ ಸಮಗ್ರ ಬೆಂಬಲ ಕೇಂದ್ರಗಳ ಸ್ಥಾಪನೆ, ಜಿಐಎಸ್ ಆಧಾರಿತ ಅಪರಾಧ ಪತ್ತೆ ಮತ್ತು ವಿಶ್ಲೇಷಣೆ ಸೌಲಭ್ಯ, ಶಾಲೆಗಳು, ಕಾಲೇಜುಗಳು, ಬಸ್ ನಿಲ್ದಾಣಗಳ ಬಳಿ ಮಹಿಳಾ ಪೊಲೀಸ್ ಔಟ್ ಪೊೀಸ್ಟ್‍ಗಳ ವ್ಯವಸ್ಥೆ, ಸೂಕ್ಷ್ಮ ಸ್ಥಳಗಳಲ್ಲಿ ಸುರಕ್ಷಿತ ಕೇಂದ್ರ ಸೃಷ್ಟಿ ಇತ್ಯಾದಿ ಯೋಜನೆಗಳೂ ಇದರಲ್ಲಿ ಸೇರ್ಪಡೆಯಾಗಲಿವೆ.

ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯ ಮತ್ತು ಹಿಂಸಾಚಾರಗಳನ್ನು ತಡೆಗಟ್ಟಲು ಸಾರ್ವಜನಿಕರನ್ನು ಜಾಗೃತಗೊಳಿಸಿ ಪೊಲೀಸರಿಗೆ ಮಾಹಿತಿ ನೀಡಲು ರಾಣಿ ಚನ್ನಮ್ಮ ತಂಡಗಳನ್ನು ರಚಿಸುವ ಪ್ರಸ್ತಾಪವೂ ಇದರಲ್ಲಿದೆ ಎಂದು ವೀರೇಂದ್ರ ಕುಮಾರ್ ವಿವರಿಸಿದ್ದಾರೆ.  ಬೆಂಗಳೂರು ನಂತರ ಎರಡನೇ ಸ್ಥಾನದಲ್ಲಿ ದೆಹಲಿ ಇದ್ದು, ಇಲ್ಲಿಗೆ 663.67 ಕೋಟಿ ರೂ.ಗಳು. ಚೆನ್ನೈಗೆ 425 ಕೋಟಿ ರೂ., ಹೈದರಾಬಾದ್‍ಗೆ 282.50 ಕೋಟಿ ರೂ., ಅಹಮದಾಬಾದ್‍ಗೆ 253 ಕೋಟಿ ರೂ., ಮುಂಬೈಗೆ 252 ಕೋಟಿ ರೂ. ಲಕ್ನೋಗೆ 195 ಕೋಟಿ ರೂ., ಕೋಲ್ಕತಾಗೆ 181.32 ಕೋಟಿ ರೂ.ಗಳ ಮೊತ್ತವನ್ನು ಈ ಉದ್ದೇಶಗಳಿಗೆ ಮೀಸಲಿಡಲಾಗುತ್ತಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا