Urdu   /   English   /   Nawayathi

ಮೆಟ್ರೊ ರೈಲಿನಲ್ಲಿ ಹಿಂಬಾಲಿಸಿಕೊಂಡು ಬಂದು ಕಿರುಕುಳ

share with us

ಬೆಂಗಳೂರು: 25 ಜುಲೈ (ಫಿಕ್ರೋಖಬರ್ ಸುದ್ದಿ) ಮೆಟ್ರೊ ರೈಲಿನಲ್ಲಿ ಹಿಂಬಾಲಿಸಿಕೊಂಡು ಬಂದು ಮಹಿಳೆಯ ಮೈ ಮುಟ್ಟಿ ಎಳೆದಾಡಿದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಬನಶಂಕರಿ ದೇವಸ್ಥಾನದ ಬಳಿ ನಡೆದಿದೆ. ಈ ಸಂಬಂಧ 31 ವರ್ಷದ ಮಹಿಳೆ ನೀಡಿದ ದೂರು ಆಧರಿಸಿ ದೀಲಾಕ್ಷ ಎಂಬಾತನನ್ನು ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. 
ಸಂತ್ರಸ್ತ ಮಹಿಳೆ ಜು. 20ರಂದು ಬೆಳಗ್ಗೆ 11.30ರ ಸುಮಾರಿಗೆ ಮಹಾಲಕ್ಷ್ಮೇ ಲೇಔಟ್‌ ಮೆಟ್ರೊ ನಿಲ್ದಾಣದಲ್ಲಿ ರೈಲು ಹತ್ತಿ ಬನಶಂಕರಿಗೆ ಹೊರಟಿದ್ದರು. ಈ ವೇಳೆ ಮಹಿಳೆಯ ಹತ್ತಿರ ಹೋಗಿದ್ದ ದೀಲಾಕ್ಷ, ಅವರ ಪಕ್ಕದಲ್ಲೇ ನಿಲ್ಲುತ್ತಿದ್ದು. ಆತನ ಕಿರುಕುಳ ಸಹಿಸದೆ ಮಹಿಳೆ ಸಾಕಷ್ಟು ಬಾರಿ ಪಕ್ಕಕ್ಕೆ ಸರಿದಿದ್ದರು. ಆದರೂ, ಆರೋಪಿ ಹಿಂಬಾಲಿಸುತ್ತಿದ್ದ. ನಂತರ ಮಹಿಳೆ ಬನಶಂಕರಿ ನಿಲ್ದಾಣದಲ್ಲಿ ಇಳಿದುಕೊಂಡು ಬನಶಂಕರಿ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಅವರನ್ನೇ ಹಿಂಬಾಲಿಸಿಕೊಂಡು ಹೋದ ಆರೋಪಿ, ''ನೀವು ಯಾವ ಊರು ? ಇಲ್ಲಿಗೇಕೆ ಬಂದಿದ್ದೀರಿ? ಜೊತೆಯಲ್ಲಿಯೇ ಹೋಗೋಣ'' ಎಂದು ಕೆಟ್ಟ ದೃಷ್ಟಿಯಿಂದ ನೋಡುತ್ತಾ ಕೆಟ್ಟದಾಗಿ ಮಾತನಾಡುತ್ತಿದ್ದ. ನಂತರ ದೇವಸ್ಥಾನದ ಬಳಿ ನಿಂಬೆಹಣ್ಣು ತೆಗೆದುಕೊಳ್ಳುತ್ತಿದ್ದಾಗ, ತಾನಾಗಿಯೇ ಹಣ ನೀಡಲು ಬಂದಿದ್ದಾನೆ. 

ಅಲ್ಲದೇ, ನಿನಗೆ ಹಣದ ಅಗತ್ಯವಿದ್ದರೆ ಹೇಳು ಎಂದು ಕೆಟ್ಟದಾಗಿ ವರ್ತಿಸಲು ಆರಂಭಿಸಿದ್ದ. ಕೈ ಹಿಡಿದು ಎಳೆದಾಡಿ ನಿನ್ನ ಮೊಬೈಲ್‌ ನಂಬರ್‌ ಕೊಡು ಎಂದು ಕೇಳಿದ್ದ. ಇದರಿಂದ ಆತಂಕಗೊಂಡ ಮಹಿಳೆ ಪತಿಯ ನಂಬರ್‌ ಕೊಟ್ಟು ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ಆರೋಪಿ, ''ನಿನಗಾಗಿ ಕಾಯುತ್ತಿರುತ್ತೇನೆ'' ಎಂದು ಹೇಳಿ ಗೇಟ್‌ ಬಳಿ ಕಾಯುತ್ತ ನಿಂತಿದ್ದ. ದೇವಸ್ಥಾನದಿಂದ ಹೊರ ಬಂದಾಗ ಗೇಟ್‌ ಬಳಿಯೇ ಆರೋಪಿಯನ್ನು ನೋಡಿದ ಮಹಿಳೆ, ಪತಿಗೆ ಮಾಹಿತಿ ನೀಡಿದ್ದರು. 
ಸ್ಥಳಕ್ಕೆ ಪತಿ ಬರುವಷ್ಟರಲ್ಲಿ ಮತ್ತೊಮ್ಮೆ ಆರೋಪಿ ಮಹಿಳೆಯ ಕೈ ಹಿಡಿದು ಎಳೆದಾಡಿ ಹೊಟೇಲ್‌ಗೆ ಹೋಗೋಣ ಬಾ ಎಂದು ಬಲವಂತ ಮಾಡಿದ್ದಾನೆ. ಈ ವೇಳೆ ಆತನನ್ನು ನೂಕಿದ ಅವರು, ದೇವಸ್ಥಾನದ ಒಳಗೆ ಹೋಗಿ ಸಾರ್ವಜನಿಕರಿಗೆ ತಿಳಿಸಿದ್ದರು. ಆಗ ಗುಂಪು ಸೇರಿದ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನ್ನ ಕೈ ಹಿಡಿದು ಎಳೆದಾಡಿ ಸಾರ್ವಜನಿಕ ಸ್ಥಳದಲ್ಲಿ ಗೌರವಕ್ಕೆ ಧಕ್ಕೆ ತರುವಂತೆ ನಡೆದುಕೊಂಡಿರುವ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆ ದೂರು ನೀಡಿದ್ದರು. 

''ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಮತ್ತಿಕೆರೆಯಲ್ಲಿ ವಾಸವಿರುವ ಆರೋಪಿ, ಬಟ್ಟೆ ವ್ಯಾಪಾರ ಮಾಡುತ್ತಿದ್ದಾನೆ. ಮಹಿಳೆಯ ಗೌರವಕ್ಕೆ ಧಕ್ಕೆ, ಕಿರುಕುಳ ನೀಡಿದ ಆರೋಪದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ'' ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು. 

ವಿ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا