Urdu   /   English   /   Nawayathi

ಮಕ್ಕಳ ಕಳ್ಳರು ಎಂದುಅಮಾಯಕರನ್ನು ಕೊಲ್ಲುವವರ ವಿರುದ್ಧ ಕಠಿಣ ಕಾನೂನು ರಚನೆಗೆ ಸುಪ್ರೀಂ ಸೂಚನೆ

share with us

ನವದೆಹಲಿ: 17 ಜುಲೈ (ಫಿಕ್ರೋಖಬರ್ ಸುದ್ದಿ) ವದಂತಿಗಳ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪಿನಿಂದ ಅಮಾಯಕರನ್ನು ಹಿಂಸಿಸಿ ಕೊಲ್ಲುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್, ಇಂಥವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಂಸತ್ ಸೂಕ್ತ ಕಾನೂನು ರಚಿಸುವಂತೆ ಇಂದು ಮಹತ್ವದ ಆದೇಶ ನೀಡಿದೆ.  ಮಕ್ಕಳ ಕಳ್ಳರೆಂಬ ವದಂತಿಗಳಿಂದಾಗಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಅಮಾಯಕರನ್ನು ಉದ್ರಿಕ್ತ ಜನರು ಹಿಂಸಿಸಿ ಕೊಲ್ಲುತ್ತಿರುವ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಈ ಆದೇಶ ಭಾರಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ವದಂತಿಗಳಿಗೆ ಕಿವಿಗೊಟ್ಟು ಉದ್ರಿಕ್ತ ಗುಂಪು ಮುಗ್ಧರನ್ನು ಕೊಲ್ಲುತ್ತಿರುವುದು ಅತ್ಯಂತ ಹೀನ ಕೃತ್ಯ. ಇದು ಮುಂದುವರಿಯಲು ಬಿಡಬಾರದು. ವಜ್ರಮುಷ್ಠಿಯಿಂದ ಇದನ್ನು ನಿಯಂತ್ರಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಸಂಬಂಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು, ಕಾನೂನು ಕೈಗೆತ್ತಿಕೊಳ್ಳುವವರನ್ನು ಶಿಕ್ಷಿಸಲು ಸಂಸತ್ ಸೂಕ್ತ ಕಾನೂನು ರಚಿಸಬೇಕು. ಉದ್ರಿಕ್ತರ ಹಲ್ಲೆ, ಹಿಂಸೆ ಮತ್ತು ಕೊಲೆ ಪ್ರಕರಣಗಳ ವಿರುದ್ಧ ಹೊಸ ನಿಯಮ ಜಾರಿಗೆ ಬರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿತು.

ಯಾರೊಬ್ಬರೂ ಕಾನೂನು ಕೈಗೆತ್ತಿಕೊಳ್ಳಬಾರದು ಹಾಗೂ ನಾವೇ ಕಾನೂನು ರೂಪಿಸುವವರು ಎಂದು ತಿಳಿಯಬಾರದು. ಇದು ಕಾನೂನು ಬಾಹಿರ. ಇಂಥವರಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಪೀಠವು ಹೇಳಿದೆ. ಈ ಪೀಠದಲ್ಲಿ ಹಿರಿಯ ನ್ಯಾಯಮೂರ್ತಿಗಳಾದ ಎ.ಎಂ.ಕಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಸಹ ಇದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹೊಣೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ತಾಕೀತು ಮಾಡಿತು. ದೇಶದ ವಿವಿಧ ರಾಜ್ಯಗಳಲ್ಲಿ ಇತ್ತೀಚೆಗೆ ಮಕ್ಕಳ ಕಳ್ಳರು ಎಂಬ ವದಂತಿ ಸೇರಿದಂತೆ ಇತರ ಗಾಳಿ ಸುದ್ದಿಗಳ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪಿನ ಹಿಂಸಾಚಾರಕ್ಕೆ ಹಲವರು ಬಲಿಯಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا