Urdu   /   English   /   Nawayathi

ತಿರುವನಂತಪುರ ಕಚೇರಿ ದಾಳಿ: ಬಿಜೆಪಿ ವಿರುದ್ಧ ಶಶಿ ತರೂರ್‌ ಆಕ್ರೋಶ

share with us

ತಿರುವನಂತಪುರ: 16 ಜುಲೈ (ಫಿಕ್ರೋಖಬರ್ ಸುದ್ದಿ) ವಿವಾದಾತ್ಮಕ ಹಿಂದೂ ಪಾಕಿಸ್ಥಾನ ಹೇಳಿಕೆಯಿಂದ ಕೋಪೋದ್ರಿಕ್ತರಾಗಿರುವ ಬಿಜೆಪಿಯ ಯುವ ದಳದ ಕಾರ್ಯಕರ್ತರು ಇಂದು ಸೋಮವಾರ ಸಂಸದ ಶಶಿ ತರೂರ್‌ ಅವರ ಇಲ್ಲಿನ ಕಾರ್ಯಾಲಯಕ್ಕೆ ನುಗ್ಗಿ ಅಲ್ಲಿನ ಗೋಡೆ, ಬಾಗಿಲು, ಪೀಠೊಪಕರಣಗಳು, ಗೇಟ್‌,  ನಾಮ ಫ‌ಲಕಗಳಿಗೆ ಮತ್ತು ಎಲ್ಲೆಂದರಲ್ಲಿ ಕಪ್ಪು ಇಂಜಿನ್‌ ಆಯಿಲ್‌ ಎರಚಿ ಕಾರ್ಯಾಲಯವನ್ನು ವಿರೂಪಗೊಳಿಸಿದ್ದಾರೆ. ಮಾತ್ರವಲ್ಲದೆ ತರೂರ್‌ ಕಾರ್ಯಾಲಯಕ್ಕೆ "ಹಿಂದೂ ಪಾಕಿಸ್ಥಾನ್‌ ಆಫೀಸ್‌' ಎಂಬ ಬೋರ್ಡ್‌ ಹಾಕಿದ್ದಾರೆ. ತರೂರ್‌ ಅವರಿಗೆ ತಮ್ಮ ಮನವಿ ಪತ್ರಗಳನ್ನು ಒಪ್ಪಿಸಲು ಕಾದು ಕುಳಿತಿದ್ದ ಜನರನ್ನು ಅಲ್ಲಿಂದ ಓಡಿಸಿದ್ದಾರೆ. 

ಈ ಘಟನೆಯಿಂದ ತೀವ್ರವಾಗಿ ನೊಂದಿರುವ ಶಶಿ ತರೂರ್‌ ಅವರು "ನಮ್ಮ ದೇಶದಲ್ಲಿ ನಾವಿದನ್ನು ಬಯಸುವೆವೆ ? ನಾನಿದನ್ನು ಸಂಸದನಾಗಿ ಅಲ್ಲ; ಬದಲು ಒಬ್ಬ ಪ್ರಜೆಯಾಗಿ ಕೇಳುತ್ತೇನೆ. ನನಗೆ ತಿಳಿದಿರುವ ಹಿಂದುತ್ವ ಇದಲ್ಲ' ಎಂದು Tweet ಮಾಡಿದ್ದಾರೆ.

ತಮ್ಮ ಕಾರ್ಯಾಲಯದ ಮೇಲೆ ಬಿಜೆಪಿ ಯುವ ದಳದ ಕಾರ್ಯಕರ್ತರು ದಾಳಿ ನಡೆಸಿದಾಗ ತರೂರ್‌ ಕಾರ್ಯಾಲಯದಲ್ಲಿ ಇರಲಿಲ್ಲ. 

"ನನ್ನ ಕಾರ್ಯಾಲಯದ ಮೇಲೆ ದಾಳಿ ನಡೆಸಿದವರು ನಾನು ಪಾಕಿಸ್ಥಾನಕ್ಕೆ ಹೋಗಬೇಕೆಂಬ ಘೋಷಣೆಗಳನ್ನು ಕೂಗಿದ್ದಾರೆ; ನಮಗೆಲ್ಲ ಎಚ್ಚರಿಕೆ ನೀಡಲಾಗಿದೆ; ನೀವು ಹಿಂದೂ ರಾಷ್ಟ್ರ ನಿರ್ಮಾಣದ ಕನಸನ್ನು ಬಿಟ್ಟುಕೊಟ್ಟಿರುವಿರಾ ಎಂಬ ಸರಳ ಪ್ರಶ್ನೆಗೆ ಬಿಜೆಪಿ ಕೊಟ್ಟಿರುವ  ಹಿಂಸೆ ಮತ್ತು ಗೂಂಡಾಗಿರಿಯ ಉತ್ತರ ಇದು. ತಿರುವನಂತಪುರದಲ್ಲಿ ಅವರು ತೋರಿಸಿರುವ ಕರಾಳ ಮುಖ ಇದು; ಸಂಘ ಕಾರ್ಯಕರ್ತರ ಈ ಗೂಂಡಾಗಿರಿ ನಮ್ಮನ್ನು ಪ್ರತಿನಿಧಿಸುವುದಿಲ್ಲ ಎಂದು ಹೆಚ್ಚಿನ ಹಿಂದೂಗಳು ಹೇಳುವರು' ಎಂದು ತರೂರ್‌ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ. 

ತರೂರ್‌ ನೀಡಿರುವ ತಪ್ಪು ಹೇಳಿಕೆಗಾಗಿ ವ್ಯಕ್ತವಾಗಿರುವ ಸಹಜ ಪ್ರತಿಭಟನೆ ಇದು ಎಂದು ತಿರುವನಂತಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್‌ ಸುರೇಶ್‌ ಹೇಳಿದ್ದಾರೆ. 

ಹಿರಿಯ ಕಾಂಗ್ರೆಸ್‌ ಶಾಸಕ ವಿ ಡಿ ಸತೀಶನ್‌ ಈ ಕೃತ್ಯವು ಬಿಜೆಪಿಯ ಉದ್ಧಟತನವನ್ನು ತೋರಿಸುತ್ತದೆ ಎಂದು ಘಟನೆಯನ್ನು ಖಂಡಿಸಿದ್ದಾರೆ. 

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈಗಿನ ಸಂಖ್ಯಾಬಲದೊಂದಿಗೆ ಗೆದ್ದು ಬಂದಲ್ಲಿ ದೇಶವು ಹಿಂದೂ ಪಾಕಿಸ್ಥಾನ ಆಗುವುದು ನಿಶ್ಚಿತ ಎಂದು ಶಶಿ ತರೂರ್‌ ಹೇಳಿದ್ದರು. 

ಉ, ವಾ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا