Urdu   /   English   /   Nawayathi

ಅನ್ನಭಾಗ್ಯಕ್ಕೆ ಕನ್ನ : 2 ಸಾವಿರ ಮೂಟೆ ಕದ್ದು ಸಾಗಿಸಿದ ಖದೀಮ ಅಧಿಕಾರಿಗಳು

share with us

ನಂಜನಗೂಡು (ಮೈಸೂರು): 14 ಜುಲೈ (ಫಿಕ್ರೋಖಬರ್ ಸುದ್ದಿ) ರಾಜ್ಯದಲ್ಲಿ ಬಡವರು ಹಸಿವಿನಿಂದ ನರಳಬಾರದು ಎನ್ನುವ ಉದ್ದೇಶದಿಂದ ರಾಜ್ಯಸರ್ಕಾರ ಜಾರಿಗೆ ತಂದಿರುವ `ಅನ್ನಭಾಗ್ಯ’ ಅಕ್ಕಿಗೆ ಕನ್ನ ಹಾಕಲಾಗಿದೆ. ಕಾವಲು ಕಾಯಬೇಕಾಗಿದ್ದ ಅಧಿಕಾರಿಗಳೇ 2 ಸಾವಿರ ಮೂಟೆ ಬಡವರ ಪಡಿತರ ಅಕ್ಕಿಯನ್ನು ಮಂಗಮಾಯ ಮಾಡಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ಎಪಿಎಂಸಿ ಆವರಣದಲ್ಲಿರುವ ಆಹಾರ ಇಲಾಖೆಯ 5ನೇ ಗೋದಾಮಿನಲ್ಲಿ 50 ಕೆಜಿ ತೂಕದ 1 ಸಾವಿರ ಕ್ವಿಂಟಾಲ್‌ನ 2 ಸಾವಿರ ಅಕ್ಕಿ ಮೂಟೆ ನಾಪತ್ತೆಯಾಗಿವೆ.

ಬೆಂಗಳೂರಿನಿಂದ ಆಗಮಿಸಿದ್ದ ಆಹಾರ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡುವ ವೇಳೆ ಅನ್ನಭಾಗ್ಯಕ್ಕೆ ಅಧಿಕಾರಿಗಳೇ ಕನ್ನ ಹಾಕಿರುವುದು ಬೆಳಕಿಗೆ ಬಂದಿದ್ದು, ಇಲಾಖೆಯ ಅಧಿಕಾರಿಗಳ ಗೋದಾಮಿನ ವ್ಯವಸ್ಥಾಪಕ ಮೈಲಾರಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಯಾವುದೇ ಮಾಹಿತಿ ನೀಡಲು ವಿಫಲರಾಗಿದ್ದಾರೆ.

ಬೆಂಗಳೂರಿನ ಗೋದಾಮಿನಿಂದ ನಂಜನಗೂಡು ಗೋದಾಮಿಗೆ 22 ಸಾವಿರ ಕ್ವಿಂಟಾಲ್ ಅನ್ನ ಭಾಗ್ಯದ ಅಕ್ಕಿ ಬಂದಿರುವ ದಾಖಲೆ ಇದೆ. ಆದರೆ, ನಂಜನಗೂಡಿನ ಗೋದಾಮಿನಿಂದ 22 ಸಾವಿರ ಅಕ್ಕಿ ಎಲ್ಲೆಲ್ಲಿ ವಿತರಣೆ ಆಗಿದೆ ಎಂಬ ಮಾಹಿತಿ ಪರಿಶೀಲನೆ ವೇಳೆ ಸಿಕ್ಕಿಲ್ಲ.

ಕೇವಲ 21 ಸಾವಿರ ಅಕ್ಕಿ ವಿತರಣೆಯಾಗಿದ್ದ 1 ಸಾವಿರ ಕ್ವಿಂಟಾಲ್ ದಾಖಲೆಗಳೇ ಇಲ್ಲದಿರುವುದು ಅಧಿಕಾರಿಗಳೇ ನುಂಗಿ ನೀರು ಕುಡಿದಿದ್ದಾರೆ.

ಇಂದು ಮುಂಜಾನೆಯಿಂದಲೇ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಯಮಿತ ಗೋದಾಮಿನ ಅಧಿಕಾರಿಗಳಾದ ಮರುಳಸಿದ್ದ ಆರಾಧ್ಯ, ರಾಘವೇಂದ್ರ ಹಾಗೂ ಶಿವಶಂಕರಪ್ಪ ಪರಿಶೀಲನೆ ನಡೆಸಿದರಾದರೂ ನಾಪತ್ತೆಯಾಗಿರುವ ಅಕ್ಕಿಯ ಬಗ್ಗೆ ಮಾಹಿತಿ ದೊರೆಯದೆ ಗರಂ ಆಗಿದ್ದಾರೆ. ಅಧಿಕಾರಿಗಳ ಭೇಟಿ ವೇಳೆ ಆಹಾರ ಮತ್ತು ನಾಗರೀಕ ಸರಬರಾಜು ಜಿಲ್ಲಾ ಉಪ ನಿರ್ದೇಶಕ ಕಾ.ರಾಮೇಶ್ವರಪ್ಪ ಸ್ಥಳದಲ್ಲೆ ಹಾಜರಿದ್ದರೂ, ನಾಪತ್ತೆಯಾದ ಅಕ್ಕಿ ಕುರಿತಂತೆ ಮಾಹಿತಿ ನೀಡುವಲ್ಲಿ ಗೋದಾಮಿನ ವ್ಯವಸ್ಥಾಪಕ ಮೈಲಾರಯ್ಯ ವಿಫಲರಾಗಿದ್ದಾರೆ.

ನಂಜನಗೂಡು ತಾಲ್ಲೂಕಿಗೆ ಪ್ರತೀ ತಿಂಗಳು 22 ಸಾವಿರ ಕ್ವಿಂಟಾಲ್ ಅನ್ನಭಾಗ್ಯದ ಅಕ್ಕಿ ಬಿಡುಗಡೆಯಾಗುತ್ತದೆ. ತಾಲ್ಲೂಕಿನಲ್ಲಿ ಅಂತ್ಯೋದಯ, ಎಪಿಎಲ್ ಹಾಗೂ ಬಿಪಿಎಲ್ ಸೇರಿದಂತೆ 1,06,385 ಪಡಿತರ ಚೀಟಿದಾರರು ಇದ್ದಾರೆ. ಅರ್ಹ ಫಲಾನುಭವಿಗಳಿಗೆ ಸೇರಬೇಕಾದ ಅಕ್ಕಿ ಎಲ್ಲಿಗೆ ಹೋಗಿದೆ ಎಂಬ ಮಾಹಿತಿಯೇ ಇಲ್ಲ. ಇದೊಂದು ಅಚ್ಚರಿಯ ಬೆಳವಣಿಗೆ.

ಸಿದ್ದು ತವರು ಜಿಲ್ಲೆಯಲ್ಲಿ ಅನ್ನಕ್ಕೆ ಕನ್ನ 

ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಅನ್ನಭಾಗ್ಯ ಅಕ್ಕಿಯ ಹಗರಣಗಳು ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಗೋದಾಮಿನಲ್ಲಿ 6 ಸಾವಿರ ಕ್ವಿಂಟಾಲ್ ಅಕ್ಕಿ, ಬನ್ನೂರಿನ ಗೋದಾಮಿನಲ್ಲಿ 6 ಸಾವಿರ ಕ್ವಿಂಟಾಲ್ ಅಕ್ಕಿ, ಕೆ.ಆರ್.ನಗರ ಗೋದಾಮಿನಲ್ಲಿ 650 ಕ್ವಿಂಟಾಲ್ ರಾಗಿ ನಾಪತ್ತೆಯಾಗಿವೆ. ಹೆಚ್.ಡಿ.ಕೋಟೆ ಗೋದಾಮಿನಲ್ಲಿ 450 ಕ್ವಿಂಟಾಲ್ ಅಕ್ಕಿ, ಮೈಸೂರು ನಗರದಲ್ಲಿ 4000 ಕ್ವಿಂಟಾಲ್ ಅಕ್ಕಿ ನಾಪತ್ತೆಯಾಗಿದ್ದು, ಉಪ ನಿರ್ದೇಶಕ ರಾಮೇಶ್ವರಪ್ಪ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಆದರೇ ಇದೀಗ ಪ್ರಥಮ ಬಾರಿಗೆ ದಕ್ಷಿಣ ಕಾಶಿಗೂ ಲಗ್ಗೆ ಇಟ್ಟ ಭ್ರಷ್ಟ ಅಧಿಕಾರಿಗಳು ಬಡ ಫಲಾನುಭವಿಗಳಿಗೆ ದೊರಕಬೇಕಾದ ಅನ್ನಭಾಗ್ಯ ಅಕ್ಕಿಗೂ ಕನ್ನ ಹಾಕಿರುವುದು ನಾಚಿಕೆಗೇಡಿನ ಸಂಗತಿ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ತಾಂಡವಾಡುತ್ತಿರುವುದು ಕಂಡು ಬರುತ್ತಿದೆ. ಬಡವರ ಹೊಟ್ಟೆಗೆ ಸೇರಬೇಕಾದ ಅಕ್ಕಿ ಭ್ರಷ್ಟ ಅಧಿಕಾರಿಗಳ ದುರಾಸೆಗೆ ಪಾಲಾಗುತ್ತಿರುವುದು ವಿಪರ್ಯಾಸ. ಪ್ರಾಥಮಿಕ ತನಿಖೆಯಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದ ಹಗರಣ ಪತ್ತೆಯಾದರೇ ಇನ್ನು ಆಳವಾಗಿ ತನಿಖೆ ನಡೆಸಿದರೆ ಇನ್ನೆಷ್ಟು ಹಗರಣಗಳು ಹೊರಗೆ ಬರುತ್ತದೆಯೋ ಕಾದು ನೋಡಬೇಕಾಗಿದೆ.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا