Urdu   /   English   /   Nawayathi

ನಾನೇನು ಅನ್ಯಾಯ ಮಾಡಿದ್ದೇನೆ? ಮಾಧ್ಯಮಗಳಿಗೆ ಸಿಎಂ ಪ್ರಶ್ನೆ,ಆಕ್ರೋಶ!

share with us

ಬೆಂಗಳೂರು: 14 ಜುಲೈ (ಫಿಕ್ರೋಖಬರ್ ಸುದ್ದಿ) 'ನನ್ನ ಮೇಲೆ ನಿಮಗೆ ಯಾಕಿಷ್ಟು ಕೋಪ ? ನಾನೇನು ಅನ್ಯಾಯ ಮಾಡಿದ್ದೇನೆ'...ಇದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಶನಿವಾರ ಕೇಳಿದ ಪ್ರಶ್ನೆ.

ಕರ್ನಾಟಕ ವಿಕಲಚೇತನ ಸೇವಾ  ಸಂಸ್ಥೆ ಒಕ್ಕೂಟ ಆಯೋಜಿಸಿದ್ದ ಸ್ಪಂದನ ಕಾರ್ಯಕ್ರಮದಲ್ಲಿ  ಸಿಎಂ ಮಾಧ್ಯಮಗಳ ವಿರುದ್ದ ತೀವ್ರ ಆಕ್ರೋಶ ಹೊರ ಹಾಕಿ ಹಲವು ಪ್ರಶ್ನೆಗಳನ್ನು ಮುಂದಿಟ್ಟರು.

'ನಾನು ಪೆಟ್ರೋಲ್‌ ಡಿಸೇಲ್‌ ಬೆಲೆ ಕೇವಲ 1 ರೂಪಾಯಿ ಹೆಚ್ಚು ಮಾಡಿದರೆ ಮಂಗಳೂರಿನ ಮೀನುಗಾರರ ಮಹಿಳೆಯ ಬಳಿ ''ಕುಮಾರಸ್ವಾಮಿ ಇಸ್‌ ನಾಟ್‌ ಅವರ್‌ ಸಿಎಂ'' ಅಂತ ಹೇಳಿಸುತ್ತೀರಿ. ಪ್ರಧಾನಿ ನರೇಂದ್ರ ಮೋದಿ 11 ಬಾರಿ ಬೆಲೆ ಏರಿಕೆ ಮಾಡಿದಾಗ ಚಕಾರ ಎತ್ತಿಲ್ಲ ಯಾಕೆ' ಎಂದು ಪ್ರಶ್ನಿಸಿದರು. 

'ನಾನು ಜನಸಾಮಾನ್ಯರ ಪರವಾಗಿರುವ ಸಿಎಂ. ವಿದ್ಯುತ್‌ ಬಿಲ್‌ 10 ರೂಪಾಯಿ ಮಾತ್ರ ಏರಿಕೆ ಮಾಡಿದ್ದೇನೆ. ಬಡವರೂ ಕೂಡ 20 ರೂಪಾಯಿ ಕೊಟ್ಟು ಮಿನರಲ್‌ ವಾಟರ್‌ ಖರೀದಿಸುತ್ತಾರೆ' ಎಂದು ತನ್ನ ಸರ್ಕಾರ ತೆರಿಗೆ ಹೆಚ್ಚಳದ ಕ್ರಮವನ್ನು ಸಮರ್ಥಿಸಿಕೊಂಡರು. 

'ನಾನು ಮುಖ್ಯಮಂತ್ರಿ ಆಗಿ ಕೇವಲ 2 ತಿಂಗಳು ಆಗಿದೆ. ಸಮಸ್ಯೆಗಳೆಲ್ಲಾ 70 ವರ್ಷಗಳಿಂದ ಇರಲಿಲ್ಲವೇ? ನಾನು ಬಡವರ ಪರ ಕಾಳಜಿಯುಳ್ಳ ಎಲ್ಲಾ ಜಿಲ್ಲೆಗಳ ಸಿಎಂ. ಟೀಕೆ ಮಾಡುವುದನ್ನ ನಿಲ್ಲಿಸಿ. ನನಗೆ ಸ್ವಲ್ಪ ಕಾಲಾವಕಾಶ ನೀಡಿ' ಎಂದು ಮನವಿ ಮಾಡಿದರು. 

'ಮಾಧ್ಯಮಗಳು ಯಾವುದೇ ವಿಷಯವಿಲ್ಲದೆ ಸುದ್ದಿ ಮಾಡುತ್ತೀರಿ. ಜನರ ನಡುವೆ ಕಂದಕ ಸೃಷ್ಟಿಸುತ್ತೀರಿ ನಮ್ಮ ನಡುವೆ ಅನುಮಾನ ಮೂಡಿಸುತ್ತೀರಿ' ಎಂದು ಕಿಡಿ ಕಾರಿದರು.

'ನನ್ನ ಮೇಲೆ ನಿಮಗೆ ಕನಿಕರ ಇಲ್ಲವೆ ? ಯಾಕೆ ನನ್ನ ಮೇಲೆ ಇಷ್ಟು ಕೋಪ ? ಎಷ್ಟು ದಿನ ಅಂತ ನನ್ನ ಮೇಲೆ ಸುಳ್ಳು ಸುದ್ದಿ ಮಾಡುತೀರಿ? ಅಪಪ್ರಚಾರ ಮಾಡಬೇಡಿ' ಎಂದು ತೀವ್ರ ಅಸಮಾಧಾನ ಹೊರ ಹಾಕಿದರು. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا