Urdu   /   English   /   Nawayathi

ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬಯಲಿಗೆ, ಮೂವರು ಅರೆಸ್ಟ್

share with us

ಬೆಳಗಾವಿ: 08 ಜುಲೈ (ಫಿಕ್ರೋಖಬರ್ ಸುದ್ದಿ) ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಅವರ ಒಡೆತನದ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಬಹುಕೋಟಿ ಠೇವಣಿ ವಂಚನೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಕುಂದಾನಗರಿಯಲ್ಲಿ ಮತ್ತೊಂದು ಸೊಸೈಟಿಯಿಂದ ಕೋಟ್ಯಂತರ ರೂ. ಮೌಲ್ಯದ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.  ನಗರ ಬಾಪಟ್ ಗಲ್ಲಿಯ ಕಾಳಿಕಾ ದೈವಜ್ಞ ಕ್ರೆಡಿಟ್ ಸೌಹಾರ್ದ ಸಹಕಾರ ನಿಯಮಿತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೂವರು ಸಿಬ್ಬಂದಿ ಗ್ರಾಹಕರಿಗೆ ವಂಚಿಸಿದ್ದಾರೆ. ಲೋನ್‍ಗಾಗಿ ಈ ಸೊಸೈಟಿಯಲ್ಲಿ ಅಡವಿಟ್ಟ ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಸೊಸೈಟಿ ವ್ಯವಸ್ಥಾಪಕ ಸೇರಿ ಮೂವರು ಸಿಬ್ಬಂದಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಲಾಕರ್‍ನಲ್ಲಿದ್ದ ಗ್ರಾಹಕರ 4 ಕೆಜಿ ಚಿನ್ನಾಭರಣ ಎಗರಿಸಿ, ಬೇರೆ ಸೊಸೈಟಿಯಲ್ಲಿಟ್ಟು 83 ಲಕ್ಷ ರೂ. ಸಾಲ ಪಡೆದಿರುವ ಈ ಮೂವರು ಸ್ವಂತಕ್ಕೆ ಬಳಸಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.  ಎರಡು ತಿಂಗಳಿಂದ ತಲೆಮರಿಸಿಕೊಂಡಿದ್ದ ವ್ಯವಸ್ಥಾಪಕ ಮಂಗೇಶ ಶಿರೋಡ್ಕರ್ (45), ಸಿಬ್ಬಂದಿ ಶ್ರೀಶೈಲ ತಾರಿಹಾಳ ಹಾಗೂ ಮಾರುತಿ ರಾಯ್ಕರ್ ಎಂಬುವವರನ್ನು ಖಡೇಬಜಾರ್ ಠಾಣೆಯ ಪೊಲೀಸರು ಸೆರೆಹಿಡಿದ್ದಾರೆ.

ಚಿನ್ನಾಭರಣ ನಾಪತ್ತೆ:
ಸೊಸೈಟಿಯ ವ್ಯವಸ್ಥಾಪಕ ಮಂಗೇಶ ಶಿರೋಡ್ಕರ್, ಸೊಸೈಟಿಯ ಎಲ್ಲಾ ವ್ಯವಹಾರ ನೋಡಿಕೊಳ್ಳುತ್ತಿದ್ದ. ದಾಖಲೆಗಳನ್ನು ಏರುಪೇರು ಮಾಡಿರುವ ಈತ ಕಳೆದ ಏಪ್ರಿಲ್‍ನಲ್ಲಿ ಸೊಸೈಟಿಯ ಲಾಕರ್‍ನಲ್ಲಿದ್ದ 4 ಕೆಜಿ ಚಿನ್ನಾಭರಣವನ್ನು ಮುತ್ತೂಟ್ ಫೈನಾನ್ಸ್, ಮಣಪುರಂ ಮತ್ತು ದಿ ಬೆಳಗಾವಿ ಅರ್ಬನ್ ಸೌಹಾರ್ದ ಸಹಕಾರ ನಿರ್ಮಿತ ಹಾಗೂ ಎನ್.ಎನ್. ವರ್ಣೆಕರ್ ಮನಿ ಲೇಂಡರ್ಸ್‍ನಲ್ಲಿ ಅಡವಿಟ್ಟು, 83 ಲಕ್ಷ ರೂ. ಸಾಲ ಪಡೆದಿದ್ದಾರೆ.

ಬಳಿಕ ಈ ಮೂವರು ಸೇರಿ ಈ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ಕೆಲಸಕ್ಕೆ ಹಾಜರಾಗದೇ ನಾಪತ್ತೆಯಾಗಿದ್ದಾರೆ. ಗ್ರಾಹಕರು ಲೋನ್ ಪಾವತಿಸಿ, ಚಿನ್ನಾಭರಣ ಬಿಡಿಸಿಕೊಳ್ಳಲು ಬಂದಾಗ್ ಲಾಕರ್‍ನಲ್ಲಿಟ್ಟಿದ್ದ ಚಿನ್ನಾಭರಣ ನಾಪತ್ತೆಯಾಗಿದ್ದವು. ಇಲ್ಲಿನ ಸಿಬ್ಬಂದಿಯಿಂದ ಈ ವಂಚನೆ ನಡೆದಿರುವುದು ತಿಳಿದು ಬಂದಿದೆ. ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿರುವ ಮೂವರು ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈಗಾಗಲೇ ಸಂಗೊಳ್ಳಿ ರಾಯಣ್ಣ ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದ ಗ್ರಾಹಕರು ತಮ್ಮ ಹಣಕ್ಕಾಗಿ ಪ್ರತಿಭಟನೆಯಲ್ಲಿ ನಿರತರಾಗಿದ್ದರೂ ಹಣ ಕೈ ಸೇರುತ್ತಿಲ್ಲ. ಇನ್ನೂ ಕಾಳಿಕಾ ದೈವಜ್ಞ ಕ್ರೆಡಿಟ್ ಸೌಹಾರ್ದ ಸಹಕಾರ ನಿಯಮಿತದಿಂದಾದರೂ ಗ್ರಾಹಕರಿಗೆ ನ್ಯಾಯ ದೊರೆಯುವುದೇ ಎಂಬುವುದು ಕುತೂಹಲ ಮೂಡಿಸಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا