Urdu   /   English   /   Nawayathi

ಭಯಾನಕ ಗುಹೆಯೊಳಗೆ ಸಿಲುಕಿರುವ 12 ಬಾಲಕರು ; ರಕ್ಷಣೆಗಾಗಿ ಹರಸಾಹಸ

share with us

ಬ್ಯಾಂಕಾಕ್‌: 05 ಜುಲೈ (ಫಿಕ್ರೋಖಬರ್ ಸುದ್ದಿ) ಇದು ಯಾವ ಹಾಲಿವುಡ್‌ ಸಿನಿಮಾದ ದೃಶ್ಯವಲ್ಲ.ಥಾಯ್‌ಲ್ಯಾಂಡ್‌ನ‌ಲ್ಲಿ ನಡೆದ,ನಡೆಯುತ್ತಿರುವ ಹಾಲಿವುಡ್‌ ಸಿನಿಮಾಕ್ಕೆ  ಕಥಾವಸ್ತುವಾಗಬಲ್ಲ ರೋಚಕ ವಿದ್ಯಮಾನ. 

ಹೌದು, ವಿಶ್ವಕಪ್‌ ಫ‌ುಟ್‌ಬಾಲ್‌ ಆರಂಭವಾದ ವೇಳೆ ಅಂದರೆ ಜೂನ್‌ 23 ರಂದು 12 ಮಂದಿ ಬಾಲಕರ ಫ‌ುಟ್‌ಬಾಲ್‌ ತಂಡ ಮತ್ತು ಕೋಚ್‌  ತರಬೇತಿ  ಮುಗಿದ ಬಳಿಕ ಕುತೂಹಲಕ್ಕಾಗಿ ಥಾಮ್‌ ಲಾಂಗ್‌ ಎನ್ನುವ ಭಯಾನಕ ಗುಹೆಯೊಳಗೆ ಪ್ರವೇಶಿಸಿದ್ದಾರೆ. ಗುಹೆಯೊಳಗೆ ಮುಂದೆ ಮುಂದೆ ಸಾಗಿ ಸುಮಾರು 4 ಕಿ.ಮೀನಷ್ಟು ಮುಂದಕ್ಕೆ ಸಾಗಿದ್ದಾರೆ. 

ಮುಂಗಾರಿನ ಕಾಲವಾದ ಕಾರಣ ಪಕ್ಕದಲ್ಲಿದ್ದ ನದಿಯಿಂದ ನೀರು ಏಕಾಏಕಿ ಗುಹೆಯೊಳಗೆ ಪ್ರವೇಶಿಸಿ ನೀರಿನ ಮಟ್ಟ ಏರ ತೊಡಗಿದೆ. ಬಾಲಕರು ಮರಳಿ ಬರಲು ಸಾಧ್ಯವಾಗಲಿಲ್ಲ. ಅಪಾಯದ ಮಟ್ಟ ಮೀರಿ ನೀರು ತುಂಬಿಕೊಂಡ ಕಾರಣ ಬಾಲಕರು ದಿಕ್ಕು ತೋಚದೆ ಕೋಚ್‌ನೊಂದಿಗೆ ಎತ್ತರದ ಸ್ಥಳದಲ್ಲಿ ಕುಳಿತಿದ್ದಾರೆ. 

ಒಂದಲ್ಲ ಎರಡಲ್ಲ ಬರೋಬ್ಬರಿ 12 ದಿನಗಳ ಕಾಲ ಆಹಾರವಿಲ್ಲದೆ ಕಾಲ ಕಳೆದಿದ್ದಾರೆ. ಹೊರ ಬರಲಾಗದೆ, ಉಸಿರಾಡಲೂ ಸರಿಯಾದ ಆಮ್ಲಜನಕ ಸಿಗದೆ ಪರದಾಡಿದ್ದಾರೆ. 

ಇತ್ತ ಬಾಲಕರು ನಾಪತ್ತೆಯಾಗಿರುವ ವಿಚಾರ ತಿಳಿದ ಥಾಯ್‌ ಸರ್ಕಾರ ಹುಡುಕಾಟಕ್ಕಿಳಿದಿದೆ. ಗುಹೆಯ ಹೊರಗೆ ಸೈಕಲ್‌ಗ‌ಳು ಕಂಡು ಬಂದ ಹಿನ್ನಲೆಯಲ್ಲಿ ಬಾಲಕರ ಹುಡುಕಾಟಕ್ಕಾಗಿ ನೌಕಾ ಪಡೆಯ ನುರಿತ ತಜ್ಞರಿಬ್ಬರನ್ನು ಕಾರ್ಯಾಚರಣೆಗಿಳಿಸಿದೆ. 

ಕಾರ್ಯಾಚರಣೆ ವೇಳೆ 11 ದಿನಗಳ ಬಳಿಕ ಬಾಲಕರು ಜೀವಂತವಾಗಿ ಪತ್ತೆಯಾಗಿದ್ದಾರೆ. ರಕ್ಷಣಾ ಯೋಧರ ಬಳಿ ಆಹಾರ ನೀಡಿ, ನಮ್ಮನ್ನು ರಕ್ಷಿಸುವಂತೆ ಬಾಲಕರು ಬೇಡಿಕೊಂಡಿದ್ದಾರೆ. 

ಬಾಲಕರು ಬದುಕಿರುವ ಸಾಧ್ಯತೆ ಕ್ಷೀಣ ಎಂದುಕೊಂಡಿದ್ದ ಥಾಯ್‌ಲ್ಯಾಂಡ್‌ ಜನತೆ ಎಲ್ಲರೂ ಸುರಕ್ಷಿತವಾಗಿ ಬದುಕಿರುವ ವಿಚಾರ ತಿಳಿದು ಸಂಭ್ರಮಿಸಿದ್ದಾರೆ. ಅವರು ಗುಹೆಯನ್ನು ಹೊರ ಬರುವುದಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. 

ಇದೀಗ ಬಾಲಕರಿಗೆ ಪೌಷ್ಟಿಕ ಆಹಾರ, ವಿಟಮಿನ್‌ ಮತ್ತು ಅಗತ್ಯ ಬ್ಲ್ಯಾಂಕೆಟ್‌ಗಳನ್ನು ನೀಡಲಾಗಿದೆ. ರಕ್ಷಣಾ ಕಾರ್ಯ ಮುಗಿಯುವ ವರಗೆ 10 ಮಂದಿ ನೌಕಾಪಡೆಯ ಯೋಧರನ್ನು ಅವರ ರಕ್ಷಣೆಗೆ ನಿಲ್ಲಿಸಲಾಗಿದೆ. 

ಅಪಾಯಕಾರಿ ದುರ್ಗಮ ಗುಹೆಯಾಗಿದ್ದು, ನೀರೂ ಭಾರೀ ಪ್ರಮಾಣದಲ್ಲಿ ತುಂಬಿಕೊಂಡಿರುವ ಕಾರಣ ಸುಲಭದ ರಕ್ಷಣಾ ಕಾರ್ಯ ಸಾಧ್ಯವಿಲ್ಲ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ. 

ಹರಸಾಹಸ ನಡೆಸಿ ರಕ್ಷಿಸಬೇಕಾಗಿದ್ದು ಆಸ್ಟ್ರೇಲಿಯಾದಿಂದಲೂ ನುರಿತ ನೌಕಾಪಡೆಯ ಸೇನಾಧಿಕಾರಿಗಳು 2 ತಂಡಗಳೊಂದಿಗೆ ಆಗಮಿಸಿದ್ದು ಬಾಲಕರ ರಕ್ಷಣೆ ಸಿದ್ದವಾಗಿದ್ದಾರೆ. 

ಗುಹೆಯ ಮೇಲ್‌ಭಾಗದಿಂದ ರಂಧ್ರಕೊರೆದು ಬಾಲಕರನ್ನು ರಕ್ಷಿಸಲು ಸಿದ್ದತೆ ನಡೆಸಲಾಗಿದೆ. ಬಾಲಕರಿಗೆ ಡೈವಿಂಗ್‌ ಮಾಡಿಸುವ ಮೂಲಕ ಹೊರತರಲೂ ಸಿದ್ದತೆಗಳನ್ನು ನಡೆಸಲಾಗಿದೆ. 

ಬಾಲಕರು ಸುರಕ್ಷಿತವಾಗಿ ಹೊರ ಬರಲು ಕನಿಷ್ಠ ಒಂದು ವಾರ ಗರಿಷ್ಠವೆಂದರೆ ತಿಂಗಳೂ ಕಳೆಯಬಹುದು ಎನ್ನಲಾಗಿದೆ. 

ಇಡೀ ವಿಶ್ವವೇ ಬಾಲಕರ ರಕ್ಷಣೆಗೆ ಧಾವಿಸುತ್ತಿದ್ದು, ಎಲ್ಲಾ ರೀತಿಯ ನೆರವು ನೀಡುವುದಾಗಿ ಬಲಾಡ್ಯ ರಾಷ್ಟ್ರಗಳು ಹೇಳಿವೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا