Urdu   /   English   /   Nawayathi

ಭಾರಿ ಮಳೆ ಮುಂಬೈನಲ್ಲಿ ಸೇತುವೆ ಕುಸಿತ

share with us

ಮುಂಬೈ: 03 ಜುಲೈ (ಫಿಕ್ರೋಖಬರ್ ಸುದ್ದಿ) ಮುಂಬಯಿನ ಅಂಧೇರಿ ಪಶ್ಚಿಮ ಮತ್ತು ಪೂರ್ವಕ್ಕೆ ಸಂಪರ್ಕ ಕಲ್ಪಿಸುವ ಗೋಖಲೆ ರಸ್ತೆಯಲ್ಲಿರುವ ಮೇಲು ಸೇತುವೆ ಇಂದು ಬೆಳಿಗ್ಗೆ ಕುಸಿದುಬಿದ್ದಿದ್ದು, ಅನೇಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಸೇತುವೆಯಡಿ ಇನ್ನೂ ಕೆಲವರು ಸಿಲುಕಿರುವ ಶಂಕೆಯಿದೆ. ಮುಂಬೈನಲ್ಲಿ ಸೋಮವಾರ ರಾತ್ರಿ ಭಾರೀ ಮಳೆ ಸುರಿದಿದ್ದು, ೧೮ ಗಂಟೆಗಳ ಅವಧಿಯಲ್ಲಿ ೯ ಸೆಂ.ಮೀ. ಮಳೆಯಾಗಿದೆ. ಈ ಮಳೆಯ ಹೊಡೆತಕ್ಕೆ ಇತ್ತೀಚೆಗೆ ರಿಪೇರಿಯಾಗಿದ್ದ ಗೋಖಲೆ ರಸ್ತೆಯ ಮೇಲು ಸೇತುವೆ ಇಂದು ಬೆಳಿಗ್ಗೆ ೭.೩೦ರ ಸುಮಾರಿನಲ್ಲಿ ಕುಸಿದುಬಿದ್ದಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಧಾವಿಸಿದ್ದು, ಅವಶೇಷಗಳ ತೆರವು ಕಾರ್ಯಾಚರಣೆ ನಡೆಸಿ ಸೇತುವೆ ಅಡಿ ಸಿಲುಕಿರುವ ಜನರ ರಕ್ಷಣೆಯಲ್ಲಿ ತೊಡಗಿದೆ.

ಅಂಧೇರಿಯ ರೈಲು ನಿಲ್ದಾಣದ ೭ ಮತ್ತು ೮ನೇ ಪ್ಲಾಟ್ ಫಾರಂ ಮೇಲೆಯೇ ಸೇತುವೆ ಕುಸಿದುಬಿದ್ದಿದೆ. ಸೇತುವೆ ಕುಸಿದಿರುವುದರಿಂದ ಪಶ್ಚಿಮ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ. ಈ ಸೇತುವೆಯನ್ನು ಮುಂಬೈ ಕಾರ್ಪೊರೇಷನ್ ನಿರ್ವಹಿಸುತ್ತಿದೆ. ಇನ್ನು ಈ ಘಟನೆಯಿಂದ ಹಾರ್ಬರ್ ರೈಲ್ವೇ ನಿಲ್ದಾಣದ ಅಂಧೇರಿಯಿಂದ ಬಾಂದ್ರಾ ರೈಲ್ವೇ ನಿಲ್ದಾಣದ ಎಲ್ಲಾ ರೈಲುಗಳ ಸಂಚಾರ ವ್ಯತ್ಯಯವಾಗಲಿದ್ದು, ಛತ್ರಪತಿ ಶಿವಾಜಿ ರೈಲು ನಿಲ್ದಾಣದಿಂದ ಬಾಂದ್ರಾ ನಡುವಿನ ಎಲ್ಲಾ ರೈಲುಗಳೂ ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಮೂಲಗಳು ತಿಳಸಿವೆ.

ಕೆಲದಿನಗಳಿಂದ ಮುಂಬೈನ ಕೆಲವೆಡೆ ೧೧ ಸೆಂ.ಮೀ.ಗೂ ಹೆಚ್ಚು ಮಳೆಯಾಗಿದ್ದು, ಇನ್ನು ಎರಡು ದಿನ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮುಂಬೈನಲ್ಲಿರುವ ಕೆಲ ಕಳಪೆ ಕಟ್ಟಡಗಳು, ಸೇತುವೆ ಮುಂತಾದ ನಿರ್ಮಾಣಗಳ ಬಗ್ಗೆ ಕೂಡಲೆ ಕ್ರಮ ತೆಗೆದುಕೊಳ್ಳದಿದ್ದರೆ ಮುಂಬೈ ಸರ್ವನಾಶವಾಗುವುದರಲ್ಲಿ ಸಂದೇಹವಿಲ್ಲ ಎಂದು ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪೋಟೋ ಕ್ಯಾಪ್ಶನ್
ಇಂದು ಬೆಳಿಗ್ಗೆ ಕುಸಿದ ಬಿದ್ದ ಗೋಖಲೆ ರಸ್ತೆಯಲ್ಲಿರುವ ಮೇಲು ಸೇತುವೆ ಬಳಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا