Urdu   /   English   /   Nawayathi

ನಾವಾಗಿ ಸರ್ಕಾರ ಬೀಳಿಸಲ್ಲ

share with us

ಬೆಂಗಳೂರು: 27 ಜೂನ್ (ಫಿಕ್ರೋಖಬರ್ ಸುದ್ದಿ) "ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ನಾವು ಬೀಳಿಸುವುದಿಲ್ಲ, ಆದರೆ, ಅದೇ ತನ್ನಿಂತಾನೇ ಬಿದ್ದು ಹೋಗಲಿದೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭೇಟಿ ಬೆನ್ನಲ್ಲೇ ಡಾಲರ್ಸ್‌ ಕಾಲೋನಿ ನಿವಾಸದಲ್ಲಿ ಪಕ್ಷದ ಪ್ರಮುಖ ನಾಯಕರ ಜತೆ ಮಂಗಳವಾರ ಇಡೀ ದಿನ ಸುದೀರ್ಘ‌ ಸಮಾಲೋಚನೆ ನಡೆಸಿದ ಬಳಿಕ ಅವರು ಮಾತನಾಡಿದರು. ಬಿಎಸ್‌ವೈ ಭೇಟಿ ಮಾಡಿದ ಮಾಜಿ ಸಚಿವ, ಶಾಸಕ ಉಮೇಶ್‌ ಕತ್ತಿ ಅವರು, ಸರ್ಕಾರ ರಚನೆಗೆ ಅವಕಾಶ ಸಿಕ್ಕರೆ ಸುಮ್ಮನೆ ಕೂರುವುದಿಲ್ಲವೆಂಬ "ಬಾಂಬ್‌' ಅನ್ನೂ ಸಿಡಿಸಿದರು. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಗೆ ನಾನೂ ಸೇರಿದಂತೆ ಬಸವರಾಜ ಬೊಮ್ಮಾಯಿ, ಮುರುಗೇಶ್‌ ನಿರಾಣಿ ಎಲ್ಲರೂ ಸಿದ್ಧರಿದ್ದೇವೆ ಎಂದೂ ಹೇಳಿರು ವುದು ಬಿಜೆಪಿ ಮತ್ತೂಮ್ಮೆ ಸರ್ಕಾರ ರಚನೆ ಅವಕಾಶಕ್ಕಾಗಿ ಕಾಯುತ್ತಿರುವ ಮುನ್ಸೂಚನೆ ನೀಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು  ಭೇಟಿ ಮಾಡಿ ಬಂದಿರುವ ಅವರು, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಮಾಜಿ ಡಿಸಿಎಂ ಆರ್‌. ಅಶೋಕ್‌, ಮಾಜಿ ಸಚಿವರಾದ ಬಸವರಾಜ ಬೊಮ್ಮಾಯಿ, ಉಮೇಶ್‌ ಕತ್ತಿ, ಮುರುಗೇಶ್‌ ನಿರಾಣಿ ಅವರೊಂದಿಗೆ ಪ್ರತ್ಯೇಕವಾಗಿ "ಅಮಿತ್‌ ಶಾ' ನೀಡಿರುವ "ಟಾಸ್ಕ್' ಕುರಿತು ಚರ್ಚೆ ನಡೆಸಿದರು ಎಂದು ಹೇಳಲಾಗಿದೆ.

ಭೇಟಿ ಬಗ್ಗೆ ಬಿಎಸ್‌ವೈ ಹೇಳಿದ್ದೇನು?: ಅಹಮದಾಬಾದ್‌ಗೆ ನಾನು, ಬಸವರಾಜ ಬೊಮ್ಮಾಯಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಲು ಹೋಗಿದ್ದೆವು. ರಾಜ್ಯ ಕಾರ್ಯಕಾರಿಣಿ ವಿಚಾರವಾಗಿ ಮಾತನಾಡಲು ಹೋಗಿದ್ದೆವು. ಬೇರೆ ಏನೂ ವಿಚಾರ ಚರ್ಚೆ ಆಗಿಲ್ಲ ಎಂದರು.

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ
ಅಧ್ಯಕ್ಷ ಅಮಿತ್‌ ಶಾ ಅವರ ಗುರಿ. ರಾಜ್ಯ ಸರ್ಕಾರದ ಜಂಜಾಟಕ್ಕೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಬಿಎಸ್‌ವೈ ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಒಂದು ಮಾತು ಹೇಳ್ತಿದಾರೆ, ಕುಮಾರಸ್ವಾಮಿ ಇನ್ನೊಂದು ಮಾತು ಹೇಳ್ತಿದಾರೆ. ಸರ್ಕಾರದಲ್ಲಿ ಯಾವುದೇ ಕೆಲಸ ಆಗಿಲ್ಲ, ಇನ್ನೂ ಅಧಿವೇಶನದ ಅಧಿಸೂಚನೆ ಹೊರಬಿದ್ದಿಲ್ಲ. ಶಾಸಕರಿಗೂ ಮಾಹಿತಿ ಇಲ್ಲ.ಹೀಗಾಗಿ, ಬೆಳವಣಿಗೆಗಳನ್ನು ಮೌನವಾಗಿ ಗಮನಿಸಿ ಹೊರತು ಯಾವುದೇ ಪ್ರತಿಕ್ರಿಯೆ ಕೊಡಬೇಡಿ ಎಂದು ನಮ್ಮ ಪಕ್ಷದ ಮುಖಂಡರು ಮತ್ತು ಶಾಸಕರಿಗೆ ಹೇಳಿದ್ದೇನೆ ಎಂದು ತಿಳಿಸಿದರು.

ಜೂ.29 ರಂದು ನಡೆಯುವ ಕಾರ್ಯಕಾರಿಣಿಗೆ ಆಹ್ವಾನ ಮಾಡಿದ್ದೇವೆ. ಸಾಧ್ಯವಾದರೆ ಬರುತ್ತೇನೆ, ಇಲ್ಲದಿದ್ದರೆ ಬೇರೆ ನಾಯಕರನ್ನು ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ಅವಧಿಗೂ ಮುನ್ನ ಲೋಕಸಭೆ ಚುನಾವಣೆಯ ಯಾವುದೇ ವಿಚಾರ ಇಲ್ಲ. ಲೋಕಸಭೆ ಉಪ ಚುನಾವಣೆಯ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಹಾಗಾಗಿ ಇನ್ನೂ ಅಭ್ಯರ್ಥಿಗಳ ತೀರ್ಮಾನ ಆಗಿಲ್ಲ. ಪರಿಷತ್‌ ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಕಾರ್ಯಕಾರಿ ವೇಳೆ ತೀರ್ಮಾನ ಮಾಡುತ್ತೇವೆ ಎಂದು ಯಡಿಯೂರಪ್ಪ ತಿಳಿಸಿದರು.

ಸಮ್ಮಿಶ್ರ ಸರ್ಕಾರದ ಎಲ್ಲ ವಿದ್ಯಮಾನಗಳನ್ನೂ ಗಮನಿಸುತ್ತಿದ್ದೇವೆ. ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಮಗೆ ಕಾಲ ಕಾಲಕ್ಕೆ ಮಾಹಿತಿಯೂ ಸಿಗುತ್ತಿದ್ದು ಇನ್ನಷ್ಟು ದಿನ ಕಾದು ನೋಡೋಣ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ತಮ್ಮನ್ನು ಭೇಟಿ ಮಾಡಿದ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ. ಮುಂದಿನ ಕಾರ್ಯಾಚರಣೆ ಹಾಗೂ ಕಾರ್ಯ  ತಂತ್ರ ಹೇಗಿರಬೇಕು ಎಂಬುದನ್ನು ನಾವು ನೋಡಿಕೊಳ್ಳುತ್ತೇವೆ. ಸದ್ಯಕ್ಕೆ ನೀವು ಲೋಕಸಭೆ ಚುನಾವಣೆಯ ಬಗ್ಗೆ ಹೆಚ್ಚು ಗಮನಹರಿಸಿ. ಸದ್ಯದಲ್ಲೇ ದೆಹಲಿಯಲ್ಲಿ ರಾಜ್ಯದ ನಾಯಕರನ್ನು ಕರೆಸಿ ಮಾತನಾಡುತ್ತೇನೆ ಎಂದೂ ಹೇಳಿದರು ಎಂದು
ತಿಳಿದು ಬಂದಿದೆ.

ಸಿದ್ದರಾಮಯ್ಯ ತಮ್ಮ ಆರೋಗ್ಯ ಸರಿ ಮಾಡಿಕೊಳ್ಳೋದಕ್ಕೆ ಧರ್ಮಸ್ಥಳಕ್ಕೆ ಹೋಗಿ ಸಮ್ಮಿಶ್ರ ಸರ್ಕಾರದ ಆರೋಗ್ಯ ಹಾಳು ಮಾಡುತ್ತಿದ್ದಾರೆ. ಕುಮಾರಸ್ವಾಮಿ ಸರ್ಕಾರದ ಆರೋಗ್ಯ ಕಾಪಾಡಲು ಹೆಣಗಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ರಚಿಸುವ ವಿಚಾರ ಈಗಲೇ ಉತ್ತರ ಬೇಡ. ಈಗಿನ ಸರ್ಕಾರ ಪತನಗೊಂಡ ಬಳಿ ಸಂದರ್ಭ ಬಂದಾಗ ನೋಡೋಣ.
● ಆರ್‌.ಅಶೋಕ್‌, ಮಾಜಿ ಉಪ ಮುಖ್ಯಮಂತ್ರಿ

ಸರ್ಕಾರ ರಚನೆಗೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಬಳಸಿಕೊಳ್ಳುತ್ತೇವೆ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಅವಕಾಶ ಬಳಸಿಕೊಳ್ಳಲು ಯಡಿಯೂರಪ್ಪ ನೇತೃತ್ವದಲ್ಲಿ ಉಮೇಶ್‌ಕತ್ತಿ, ಮುರುಗೇಶ್‌ ನಿರಾಣಿ, ಬಸವರಾಜ ಬೊಮ್ಮಾಯಿ ಎಲ್ಲರೂ ರೆಡಿ ಇರ್ತೇವೆ.
● ಉಮೇಶ್‌ ಕತ್ತಿ, ಮಾಜಿ ಸಚಿವ

ಡಾ.ಜಿ.ಪರಮೇಶ್ವರ್‌ ಉಪ ಮುಖ್ಯ ಮಂತ್ರಿಯಾದಾಗಿನಿಂದ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ದಿನಕ್ಕೊಂದು ತಿರುವು ಪಡೆಯುತ್ತಿದೆ. ಮಂತ್ರಿಗಳು, ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಸಮನ್ವಯ ಸಮಿತಿ ಯಾಕೆ ಮಾಡಿದ್ದಾರೋ ಗೊತ್ತಿಲ್ಲ. ಇಂದಿನ ಘಟನೆಗಳು ನೋಡಿದರೆ ಯಾವಾಗ ಏನಾಗುತ್ತೋ ಗೊತ್ತಿಲ್ಲ.
● ಜಗದೀಶ್‌ ಶೆಟ್ಟರ್‌, ಮಾಜಿ ಮುಖ್ಯಮಂತ್ರಿ

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا