Urdu   /   English   /   Nawayathi

3,450 ಶಾಲೆಗಳು ಬಂದ್‌; ಏಕೋಪಾಧ್ಯಾಯ ಶಾಲೆಗಳ ವಿಲೀನಕ್ಕೆ ಚಿಂತನೆ

share with us

ಬೆಂಗಳೂರು: 12 ಜೂನ್ (ಫಿಕ್ರೋಖಬರ್ ಸುದ್ದಿ) ರಾಜ್ಯಾದ್ಯಂತ 3,450 ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳು ಶಾಶ್ವತವಾಗಿ ಕಣ್ಮರೆಯಾಗಲಿವೆ. 10ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಮಕ್ಕಳಿರುವ 3,450 ಏಕೋಪಾಧ್ಯಾಯ ಶಾಲೆಗಳನ್ನು ಸಮೀಪದ ಶಾಲೆಯೊಂದಿಗೆ ವಿಲೀನಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್‌. ಮಹೇಶ್‌ ಹೇಳಿದ್ದಾರೆ.

ಶಿಕ್ಷಣ ಇಲಾಖೆಯ ಹೊಣೆಗಾರಿಕೆ ವಹಿಸಿಕೊಂಡ ನಂತರ ಕೆ.ಆರ್‌.ವೃತ್ತದಲ್ಲಿ ಇರುವ ಸರ್ವಶಿಕ್ಷಾ ಅಭಿಯಾನದ ಸಭಾಂಗಣದಲ್ಲಿ ಸೋಮವಾರ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ 21,225 ಪ್ರಾಥಮಿಕ ಶಾಲೆ, 22,487 ಹಿರಿಯ ಪ್ರಾಥಮಿಕ ಸೇರಿ 43,712 ಸರ್ಕಾರಿ ಶಾಲೆಗಳಿವೆ.

ಪ್ರಾಥಮಿಕ ವಿಭಾಗದಲ್ಲಿ 3,372 ಹಾಗೂ ಹಿರಿಯ ಪ್ರಾಥಮಿಕ ವಿಭಾಗದಲ್ಲಿ 78 ಸೇರಿ 3,450 ಏಕೋಪಾಧ್ಯಾಯ ಶಾಲೆಗಳಿವೆ. ಈ ಶಾಲೆಯ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸುವ ಉದ್ದೇಶದಿಂದ ಸಮೀಪದ ಶಾಲೆಯೊಂದಿಗೆ ವಿಲೀನಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಆದರೆ, ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ. ಇರುವ ವ್ಯವಸ್ಥೆಯನ್ನು ಸರಿಯಾಗಿ ಬಳಸಿಕೊಳ್ಳಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಏಕೋಪಾಧ್ಯಾಯ ಶಾಲೆಯ ಬದಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ನಾಲ್ಕೈದು ಶಾಲೆಗಳನ್ನು ಒಗ್ಗೂಡಿಸಿ, ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗುತ್ತದೆ. ಇಂತಹ ಶಾಲೆಗೆ ಮಕ್ಕಳನ್ನು ಕರೆದೊಯ್ಯಲು ಬೇಕಾದ ವಾಹನ ವ್ಯವಸ್ಥೆಯನ್ನು ಇಲಾಖೆಯಿಂದ ಮಾಡುವ ಬಗ್ಗೆಯೂ ಯೋಚನೆ ಮಾಡುತ್ತಿದ್ದೇವೆ. ಮಕ್ಕಳಿಗೆ ಏಕೋಪಾಧ್ಯಾಯ ಶಾಲೆಗಿಂತ ಎಲ್ಲ ಸೌಲಭ್ಯ ಇರುವ ಶಾಲೆಗಳಲ್ಲಿ ಪರಿಣಾಮಕಾರಿ ಶಿಕ್ಷಣ ನೀಡಬಹುದು. ಸುಮಾರು 30 ಸಾವಿರ ಮಕ್ಕಳನ್ನು ಸ್ಥಳಾಂತರಿಸಬೇಕಾಗುತ್ತದೆ ಎಂದು ಹೇಳಿದರು.

ಖಾಸಗಿ ಎಂಜಿನಿಯರಿಂಗ್‌ ಸೀಟುಗಳಿಗಿಂತ ಖಾಸಗಿ ಶಾಲೆಯ ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿ ಶುಲ್ಕವೇ ಹೆಚ್ಚಿದೆ. ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣಕ್ಕೆ ಬೇಕಾದ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಿದ್ದೇವೆ. ಶುಲ್ಕ ನಿಯಂತ್ರಣಕ್ಕೆ ಹೊಸ ಶಾಸನದ ಅಗತ್ಯವಿದ್ದರೂ ತೆಗೆದುಕೊಂಡು ಬರುತ್ತೇವೆ. ಒಂದು ದೇಶ ಒಂದು ಕಾನೂನಿನಂತೆ, ಒಂದು ದೇಶ ಒಂದು ಶಿಕ್ಷಣ ವ್ಯವಸ್ಥೆ ಬರಬೇಕು.
- ಎನ್‌.ಮಹೇಶ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ 

ಉ, ವಾ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا