Urdu   /   English   /   Nawayathi

ಗೌರಿ ಹತ್ಯೆ; ಆರೋಪಿಗಳು ಮತ್ತೆ ಎಸ್ಐಟಿ ಕಸ್ಟಡಿಗೆ

share with us

ಬೆಂಗಳೂರು: 12 ಜೂನ್ (ಫಿಕ್ರೋಖಬರ್ ಸುದ್ದಿ) ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ವಿಚಾರಣೆಗಾಗಿ ಮತ್ತೆ ನಾಲ್ಕು ದಿನಗಳವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಲಾಗಿದೆ. ಸಾಹಿತಿ ಕೆ.ಎಸ್. ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ಬಂಧಿಸಲಾಗಿದ್ದ ಶಿಕಾರಿಪುರದ ಕಪ್ಪನಹಳ್ಳಿ ಗ್ರಾಮದ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ (37), ಮಹಾರಾಷ್ಟ್ರದ ಅಮೋಲ್ ಕಾಳೆ ಅಲಿಯಾಸ್ ಬಾಯ್‌ಸಾಬ್, ಅಮಿತ್ ದೇಗ್ವೇಕರ್ ಅಲಿಯಾಸ್ ಪ್ರದೀಪ (38) ಹಾಗೂ ವಿಜಯಪುರ ಜಿಲ್ಲೆ ರತ್ನಾಪುರ ಗ್ರಾಮದ ಮನೋಹರ್ ದುಂಡಪ್ಪ ಯಡವೆ ಅಲಿಯಾಸ್ ಮನೋಜ್ (29) ಎಂಬಾತನನ್ನು ಗೌರಿ ಹತ್ಯೆ ಪ್ರಕರಣದಲ್ಲೂ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದರು. ಮೇ 31ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ 10 ದಿನಗಳವರೆಗೆ ಕಸ್ಟಡಿಗೆ ಪಡೆದಿದ್ದರು.

ಅವಧಿ ಮುಕ್ತಾಯವಾಗಿದ್ದರಿಂದ ‌ಆರೋಪಿಗಳನ್ನು ಸೋಮವಾರ ಮೂರನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ‘ಆರೋಪಿಗಳು ವಿಚಾರಣೆಗೆ ಸಹಕರಿಸುತ್ತಿಲ್ಲ. ಅವರನ್ನು ಮತ್ತಷ್ಟು ದಿನ ಕಸ್ಟಡಿಗೆ ನೀಡಬೇಕು’ ಎಂದು ಎಸ್‌ಐಟಿ ಅಧಿಕಾರಿಗಳು ಮನವಿ ಮಾಡಿದರು. ಅದನ್ನು ನ್ಯಾಯಾಲಯ ಪುರಸ್ಕರಿಸಿತು.

ಮುಚ್ಚಿದ ಲಕೋಟೆಯಲ್ಲಿ ವರದಿ: ಗೌರಿ ಹತ್ಯೆ ಪ್ರಕರಣದ ತನಿಖೆಯ ಪ್ರಗತಿ ವರದಿಯನ್ನು ಎಸ್‌ಐಟಿ ಅಧಿಕಾರಿಗಳು, ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು. ಅದೇ ವೇಳೆ ಹಾಜರಿದ್ದ ಆರೋಪಿಗಳ ಪರ ವಕೀಲ ಅಮೃತೇಶ್, ಮುಚ್ಚಿದ ಲಕೋಟೆಯಲ್ಲಿ ವರದಿ ಕೊಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

‘ಕೆ.ಎಸ್. ಭಗವಾನ್‌ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸರು ಮೇ 1ರಂದು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಅದಾದ ಬಳಿಕ, ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿಸಿ ಹತ್ತು ದಿನ ವಿಚಾರಣೆ ಮಾಡಿದ್ದಾರೆ. ಈಗ ಮತ್ತೆ ಆರೋಪಿಗಳನ್ನು ಕಸ್ಟಡಿಗೆ ಕೇಳುತ್ತಿರುವುದು ಸರಿಯಲ್ಲ’ ಎಂದು ಅಮೃತೇಶ್ ವಾದಿಸಿದರು.

ವಿಚಾರಣೆ ನೆಪದಲ್ಲಿ ಕಿರುಕುಳ: ನ್ಯಾಯಾಧೀಶರ ಬಳಿ ಅಳಲು ತೋಡಿಕೊಂಡ ಆರೋಪಿ ಮನೋಹರ, ‘ವಿಚಾರಣೆ ನೆಪದಲ್ಲಿ ಎಸ್‌ಐಟಿ ಅಧಿಕಾರಿಗಳು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ’ ಎಂದು ದೂರಿದ.

‘ನಿತ್ಯವೂ ಬೆಳಿಗ್ಗೆ 4 ಗಂಟೆಗೆ ಎಬ್ಬಿಸುತ್ತಾರೆ. ತಮಗೆ ತೋಚಿದ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಅವರೇ ಉತ್ತರ ಬರೆದುಕೊಂಡು, ಸಹಿ ಹಾಕುವಂತೆ ಪೀಡಿಸುತ್ತಾರೆ’ ಎಂದ.

‘ಭಗವಾನ್ ಪ್ರಕರಣದ ವಿಚಾರಣೆ ವೇಳೆ ಸಾಕಷ್ಟು ಕಿರುಕುಳ ನೀಡಿದ್ದರು. ಈಗ ಗೌರಿ ಪ್ರಕರಣದ ವಿಚಾರಣೆಯಲ್ಲೂ ಹಿಂಸಿಸುತ್ತಿದ್ದಾರೆ. ನಮ್ಮನ್ನು ಕಾಪಾಡಿ’ ಎಂದು ಬೇಡಿಕೊಂಡ.

ನ್ಯಾಯಾಧೀಶರು, ‘ಆರೋಪಿಗಳಿಗೆ ಕಿರುಕುಳ ನೀಡಬಾರದು. ಅವರ ಭೇಟಿಗೆ ವಕೀಲರಿಗೆ ಅವಕಾಶ ನೀಡಬೇಕು’ ಎಂದು ತನಿಖಾಧಿಕಾರಿಗಳಿಗೆ ಸೂಚಿಸಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا