Urdu   /   English   /   Nawayathi

ಅಡಿಗಡಿಗೂ ‘ಕೈ’ಕಮಾಂಡ್ ಎಡವಿದ್ದೇ ಸದ್ಯದ ಕಾಂಗ್ರೆಸ್ ಕಲಹಕ್ಕೆ ಕಾರಣ..!

share with us

ಬೆಂಗಳೂರು: 09 ಜೂನ್ (ಫಿಕ್ರೋಖಬರ್ ಸುದ್ದಿ) ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದಲೂ ಬಂಡಾಯದ ಹೊಗೆಯಾಡುತ್ತಲೇ ಇದೆ. ಮೈತ್ರಿ ಸರ್ಕಾರದಲ್ಲಿ ಸಂಭಾವ್ಯ ಬಂಡಾಯವನ್ನು ತಪ್ಪಿಸಲು ಉಭಯ ಪಕ್ಷಗಳ ನಾಯಕರ ವಿಫಲತೆಗಳು ಹತ್ತು ಹಲವು …. ಅಧಿಕಾರ ಹಂಚಿಕೆ ಸಂದರ್ಭದಲ್ಲಿ ಸ್ವಹಿತಾಸಕ್ತಿ, ಸ್ವಪ್ರತಿಷ್ಠೆಗಳಷ್ಟೇ ವಿಜೃಂಭಿಸಿದವು. ಕೊಟ್ಟು ಕೊಳ್ಳುವ ಗುಣಗಳು ಕಾಣದಂತಾದವು. ಸಾಮಾಜಿಕ ನ್ಯಾಯ ಮೂಲೆಗುಂಪಾಯಿತು. ಈ ಅಂಶಗಳು ಸಹಜವಾಗಿಯೇ ಮೈತ್ರಿ ಸರ್ಕಾರದಲ್ಲಿ ಬಿರುಕು ಹೆಚ್ಚಾಗುವಂತೆ ಮಾಡಿತು.

ಕೂಸು ಹುಟ್ಟುವ ಮುನ್ನ ಕುಲಾವಿ ಎಲ್ಲರೂ ಹೊಲೆಸಿಕೊಂಡು ತಯಾರಾಗಿದ್ದರೆ ಹೊರತು, ಕೂಸಿಗೆ ಬೇಕಾದ ಪಾಲನೆ, ಪೋಷಣೆಗೆ ಅಗತ್ಯ ಪದಾರ್ಥಗಳನ್ನು ಯಾರೂ ತಯಾರು ಮಾಡಿಟ್ಟುಕೊಂಡಿರಲಿಲ್ಲ. ಹಾಗಾಗಿ ಹುಟ್ಟಿರುವ ಬಂಡಾಯದ ಕೂಸು ಬಾಯಿ ಬಡಿದುಕೊಳ್ಳುತ್ತಿದೆ. ಈಗ ಅದನ್ನು ಸುಮ್ಮನಾಗಿಸಲು ಪ್ರಯತ್ನ ಮಾಡುತ್ತಿ ದ್ದಾರೆ. ಆದರೆ ಅದು ರಚ್ಚೆ ಹಿಡಿದು ಕುಳಿತಿದೆ. ಅದಕ್ಕೆ ಜೋಗುಳ ಹಾಡಿಸಿ ಮಲಗಿಸಬೇಕು, ಇಲ್ಲ ಅದಕ್ಕೆ ಬೇಕಾದ್ದನ್ನು ನೀಡಿ ಸುಮ್ಮನಾಗಿಸಬೇಕು. ಯಾರು ಅದನ್ನು ಮಾಡುವವರು?ಎಲ್ಲರೂ ಅಧಿಕಾರ ಪಡೆಯುವಲ್ಲಿ ಬ್ಯುಸಿ ಯಾಗಿದ್ದಾರೆ. ಪಡೆದಿರುವ ಅಧಿಕಾರವನ್ನು ಚಲಾ ಯಿಸುವಲ್ಲಿ ಮುಂದಾಗಿದ್ದಾರೆ. ಬಂಡಾಯದ ಬೆಂಕಿಯನ್ನು ಉಪಶಮನ ಮಾಡದಿರುವುದರಿಂದ ಈಗ ಅದು ಜ್ವಾಲೆಯಾಗಿ ಅವರನ್ನೇ ಸುಡುವ ಹಂತಕ್ಕೆ ಬಂದು ತಲುಪಿದೆ.

ಇದಕ್ಕೆಲ್ಲ ಮೂಲಕಾರಣ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರು, ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಮ್ಮಿಶ್ರ ಸರ್ಕಾರ ರಚಿಸಿದ್ದು. ಫಲಿತಾಂಶ ಕಾಂಗ್ರೆಸ್ ಪರವಾಗಿ ಬರುವುದಿಲ್ಲ ಎಂಬ ಮುನ್ಸೂಚನೆ ಅರಿತ ನಾಯಕರು ರಾಜ್ಯ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಎಲ್ಲೋ ಕೆಲವರನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಕ್ಕಾಗಿ ದುಡಿದವರನ್ನೆಲ್ಲ ಕಡೆಗಣಿಸಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದರು. ಆದರೂ ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನು ಮುಖಂಡರು ಸಹಿಸಿಕೊಂಡರು. ಆದರೆ ಅಧಿಕಾರ ಹಂಚಿಕೆ ಸಂದರ್ಭದಲ್ಲೂ ಪಕ್ಷ ಕಟ್ಟಿದವರನ್ನು, ಪಕ್ಷಕ್ಕಾಗಿ ತ್ಯಾಗ ಮಾಡಿದವರನ್ನು ಚುನಾವಣೆಗಾಗಿ ಸಂಪನ್ಮೂಲ ಕ್ರೋಢೀಕರಿಸಿದವರನ್ನು ನಿರ್ಲಕ್ಷಿಸ ಲಾಯಿತು.ಈ ಎಲ್ಲ ಅಂಶಗಳು ಬಂಡಾಯ ಭುಗಿಲೇಳಲು ಕಾರಣವಾಯಿತು.

ಅಲ್ಲದೆ, ಸಮ್ಮಿಶ್ರ ಸರ್ಕಾರ ರಚನೆಯಾಗಿ ವಿಶ್ವಾಸ ಮತ ಗೆದ್ದಾಗ ಪತ್ರಿಕಾಗೋಷ್ಠಿ ನಡೆಸಿದ ಉಭಯ ಪಕ್ಷಗಳ ಮುಖಂಡರು ಐದು ವರ್ಷಗಳ ಕಾಲ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಪಕ್ಷದ ಉಸ್ತುವಾರಿ ವೇಣುಗೋಪಾಲ್ ಪ್ರಕಟಿಸಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಯಿತು.78 ಸ್ಥಾನಗಳನ್ನು ಪಡೆದ ನಾವು ಎಲ್ಲ ಪ್ರಮುಖ ಖಾತೆಗಳನ್ನು ಅವರಿಗೆ ಬಿಟ್ಟು ಪೂರ್ಣಾವಧಿ ಅಧಿಕಾರವನ್ನು ಜೆಡಿಎಸ್ ಪಕ್ಷಕ್ಕೆ ಏಕೆ ಬಿಟ್ಟುಕೊಡಬೇಕು? ಅಧಿಕಾರ ಹಂಚಿಕೆ ಮಾಡಿಕೊಳ್ಳಬಾರದೇಕೆ ಎಂಬ ಆಕ್ಷೇಪದ ಮಾತುಗಳು ಕೇಳಿಬಂದವು. 30-30 ತಿಂಗಳು ಅಧಿಕಾರ ಹಂಚಿಕೆ ಮಾಡಿಕೊಳ್ಳಬಹುದಿತ್ತು. ಆದರೆ ಸಂಪೂರ್ಣ ಅಧಿಕಾರ ಜೆಡಿಎಸ್‍ಗೆ ಬಿಟ್ಟುಕೊಡುವ ಅಗತ್ಯವೇನಿತ್ತು? ಎಂದು ಬಹುತೇಕ ಕಾಂಗ್ರೆಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.

ಆದರೆ ಈ ಸಂದರ್ಭದಲ್ಲೂ ರಾಜ್ಯದ ಯಾವ ನಾಯಕರನ್ನೂ ಹೈಕಮಾಂಡ್ ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ ಎಂಬ ಅಂಶವು ಬಂಡಾಯಕ್ಕೆ ಕಾರಣವಾಗಿದೆ.
ಇನ್ನೊಂದು ಪ್ರಮುಖ ವಿಷಯವೆಂದರೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಪಾಲನೆ ಮಾಡದಿರುವುದು. ಕಾಂಗ್ರೆಸ್ ಕೈ ಹಿಡಿದ ಕುರುಬ ಮತ್ತು ಲಿಂಗಾಯತ ಮುಖಂಡರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ಬಂಡಾಯವೇ ಬೆಂಕಿಯಾಗಿ ಹೊತ್ತಿಕೊಳ್ಳಲು ಕಾರಣವಾಗಿದೆ.ಎಂ.ಬಿ.ಪಾಟೀಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರು. ರಾಹುಲ್‍ಗಾಂಧಿ ನಡೆಸಿದ ಜನಾಶೀರ್ವಾದ ಯಾತ್ರೆ ಸೇರಿದಂತೆ ಕಾಂಗ್ರೆಸ್ ಪಕ್ಷದ ಚುನಾವಣಾ ಕಾರ್ಯಕ್ರಮಗಳಿಗೆ ಸಂಪನ್ಮೂಲ ಕ್ರೋಢೀಕರಿಸಿದವರು, ಅಷ್ಟೇ ಅಲ್ಲ ಪ್ರಭಾವಿ ಲಿಂಗಾಯತ ಸಮುದಾಯದ ಮುಖಂಡರು. ಒಂದು ಸಮುದಾಯದ ಪರವಾಗಿ ಸೈದ್ಧಾಂತಿಕ ಹೋರಾಟ ಮಾಡಿ ಹಲವು ವಿರೋಧಗಳನ್ನು ಕಟ್ಟಿಕೊಂಡವರು.
ರಾಜ್ಯದಲ್ಲಿ ಲಿಂಗಾಯತರ ಪ್ರಭಾವದಿಂದಲೇ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂಬ ನಿಟ್ಟಿನಲ್ಲಿ ಎರಡು ವರ್ಷಗಳ ಹಿಂದೆಯೇ ಯಡಿಯೂರಪ್ಪನವರನ್ನು ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಎಂದು ಘೋಷಿಸಿತ್ತು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗ ಬಾರದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬಾರದು ಎಂದು ಭಾರೀ ಶ್ರಮಪಟ್ಟವರು ಎಂ.ಬಿ.ಪಾಟೀಲ್ ಅವರು. ಆ ಶ್ರಮಕ್ಕೆ ಕಾಂಗ್ರೆಸ್ ಪಕ್ಷ ಯಾವ ಪ್ರತಿಫಲವನ್ನೂ ನೀಡಲಿಲ್ಲ. ಅಂತಹವರನ್ನು ಸಂಪುಟದಿಂದ ಕೈ ಬಿಟ್ಟಿದ್ದರಿಂದ ಕಾಂಗ್ರೆಸ್ ಹೈಕಮಾಂಡ್ ಆ ಸಮುದಾಯದವರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಸಮುದಾಯದ 16 ಶಾಸಕರು ಒಟ್ಟಾಗಿ ಸಭೆ ಕರೆದು ತಮಗಾದ ಅನ್ಯಾಯದ ಬಗ್ಗೆ ದನಿ ಎತ್ತಿದರು. ಇದು ಸರ್ಕಾರದ ಬುಡವನ್ನೇ ಅಲುಗಾಡಿಸತೊಡಗಿತು. ಇಡೀ ಸರ್ಕಾರವೇ ಎಂ.ಬಿ.ಪಾಟೀಲ್ ಮನೆ ಬಾಗಿಲಿಗೆ ಹೋಗುವಂತಾಯಿತು.

ಇನ್ನು ಸಿದ್ದರಾಮಯ್ಯನವರ ನಾಯಕತ್ವ ನೆಚ್ಚಿಕೊಂಡು ಕುರುಬ ಸಮುದಾಯದವರು ಕಾಂಗ್ರೆಸ್ ಬೆಂಬಲಿಸಿದರೂ ಆ ಸಮುದಾಯಕ್ಕೆ ಹೆಚ್ಚು ಪ್ರಾತಿನಿಧ್ಯ ಸಿಗಲಿಲ್ಲ. ಹಾಗಾಗಿ ಬಂಡಾಯ ಕಹಳೆ ಮೊಳಗಿಸಿರುವ ಎಂ.ಬಿ.ಪಾಟೀಲ್ ಲಿಂಗಾಯತ ಶಾಸಕರ ಜೊತೆ ಕುರುಬ ಶಾಸಕರಾದ ಎಂ.ಟಿ.ನಾಗರಾಜ್, ಭೈರತಿ ಬಸವರಾಜ್, ಎಚ್. ಎಂ.ರೇವಣ್ಣ ಅವರೂ ಸೇರಿಕೊಂಡರು. ಕಾಂಗ್ರೆಸ್‍ನಲ್ಲಿ ಅತ್ಯಂತ ಹಿರಿಯರಾದ ಕುರುಬ ಸಮುದಾಯದ ಮುಖಂಡರಾದ ಎಚ್.ಎಂ. ರೇವಣ್ಣ ಅವರನ್ನು ಕೂಡ ಸಂಪುಟದಿಂದ ಕೈ ಬಿಡಲಾಯಿತು. ಈ ಎಲ್ಲಾ ಅಂಶಗಳು ಕೂಡ ಬಂಡಾಯ ಭುಗಿಲೇಳಲು ಕಾರಣವಾಯಿತು.

ಮತ್ತೊಂದು ಅಂಶವೆಂದರೆ ವಾಲ್ಮೀಕಿ ಸಮುದಾಯದ ಮುಖಂಡರಾದ ಸತೀಶ್ ಜಾರಕಿ ಹೊಳಿ ಅವರನ್ನು ಕಡೆಗಣಿಸಿದ್ದು. ಅವರ ಕುಟುಂಬದವರಾದ ರಮೇಶ್ ಜಾರಕಿ ಹೊಳಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಸತೀಶ್ ಜಾರಕಿ ಹೊಳಿ ಅವರು ಬಂಡಾಯದ ಬಾವುಟ ಆರಿಸಿದ್ದಾರೆ. ಆ ಕುಟುಂಬದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೈಕಮಾಂಡ್ ನಾಯಕರು ಒಮ್ಮತದ ತೀರ್ಮಾನ ಕೈಗೊಳ್ಳಬಹುದಿತ್ತು. ಆದರೆ ಇದ್ಯಾವುದನ್ನೂ ಮಾಡದೆ ತಮ್ಮ ಪ್ರತಿಷ್ಠೆಯ ಧೋರಣೆಯನ್ನೇ ಮುಂದುವರೆಸಿದ್ದು, ಬಂಡಾಯ ಉಲ್ಬಣಗೊಳ್ಳಲು ಕಾರಣವಾಯಿತು.ಸಮ್ಮಿಶ್ರ ಸರ್ಕಾರ ರಚನೆಯಾಗಿ ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿ ಸಿದ್ದೇ ತಡ, ಯಾರ ಉಸಾಬರಿ ನನಗೆ ಬೇಡ ಎಂದು ತಮ್ಮ ಪಾಡಿಗೆ ತಾವು ಎಂಬಂತೆ ಇದ್ದರು.

ಸಂಭಾವ್ಯ ಬಂಡಾಯ ತಪ್ಪಿಸಲು ಯಾವುದೇ ತಲೆ ಕೆಡಿಸಿಕೊಳ್ಳಲಿಲ್ಲ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಭಿನ್ನಮತ ಭುಗಿಲೆದ್ದಾಗ ಪತ್ರಕರ್ತರು ಕೇಳಿದ ಪ್ರಶ್ನೆಗೆ ನೋ ಕಾಮೆಂಟ್ಸ್ ಎಂದಷ್ಟೇ ಹೇಳಿದರು. ಅತೃಪ್ತರನ್ನು ಕರೆದು ಮಾತನಾಡಿಸುವ ಸೌಜನ್ಯವನ್ನೂ ತೋರಿಸಲಿಲ್ಲ. ಇದೆಲ್ಲ ಸಾಮಾನ್ಯ. ಸರಿಹೋಗುತ್ತದೆ ಎಂಬ ಉದಾಸೀನ ಧೋರಣೆ ತಾಳಿದರು. ಪರಮೇಶ್ವರ್ ಅವರ ಈ ನಡೆ ಪರಿಸ್ಥಿತಿಯನ್ನು ಲೀಡ್ ಮಾಡುವಲ್ಲಿ ಎಡವಿದರು. ಮಾಜಿ ಪ್ರಧಾನಿ ದೇವೇಗೌಡರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಸಂಪೂರ್ಣ ಶರಣಾಗಿದ್ದಾರೆ, ಕಾಂಗ್ರೆಸ್ ಪಕ್ಷವನ್ನು ಮಾರಿ ಕೊಂಡಿದ್ದಾರೆ ಎಂಬ ಗಂಭೀರ ಆರೋಪ ಶಾಸಕರಿಂದ ಕೇಳಿಬಂತು.

ಪಕ್ಷದ ಉಸ್ತುವಾರಿ ವೇಣುಗೋಪಾಲ್, ಸಮ್ಮಿಶ್ರ ಸರ್ಕಾರ ರಚನೆಯ ಹೊಣೆ ಹೊತ್ತಿದ್ದ ಗುಲಾಮ್ ನಬಿ ಆಜಾದ್, ಅಶೋಕ್ ಗೆಹ್ಲೋಟ್ ಯಾರೋಬ್ಬರು ರಾಜ್ಯದತ್ತ ತಲೆ ಹಾಕಲಿಲ್ಲ. ತನ್ನಿಂದ ತಾನೇ ಭಿನ್ನಮತದ ಪರಿಸ್ಥಿತಿ ಬಗೆಹರಿಯುತ್ತದೆ ಎಂಬ ಉದಾಸೀನ ಧೋರಣೆಯಲ್ಲಿದ್ದರು. ಈ ಅಂಶವೂ ಕೂಡ ಬಂಡಾಯ ಭುಗಿಲೇಳಲು ಕಾರಣವಾಯಿತು.ಇನ್ನು ಶಾಸಕಾಂಗ ಪಕ್ಷದ ನಾಯಕ, ಸಮನ್ವಯ ಸಮಿತಿ ಅಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಲಿಪ್ತ ಧೋರಣೆ ಕೂಡ ಭಿನ್ನಮತ ಉಲ್ಬಣಕ್ಕೆ ಕಾರಣವಾಗಿದೆ. ಒಟ್ಟಾರೆ ಕಾಂಗ್ರೆಸ್ ಹೈಕಮಾಂಡ್ ಅಡಿಗಡಿಗೂ ಎಡವಿದೆ. ಬಿಜೆಪಿಯನ್ನು ಅಧಿಕಾರಕ್ಕೆ ದೂರವಿಡುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷಕ್ಕೆ ಎಲ್ಲವನ್ನು ಧಾರೆಯೆ ರೆದಿದೆ. ಗಳಿಸಿಕೊಳ್ಳುವುದಕ್ಕಿಂತ ಕಾಂಗ್ರೆಸ್ ಕಳೆದುಕೊಳ್ಳುವುದೇ ಹೆಚ್ಚಾದಂತೆ ಕಾಣುತ್ತಿದೆ.
ಈ ಬಂಡಾಯದ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳಲು ಪ್ರತಿಪಕ್ಷ ಬಿಜೆಪಿ ಕಾಯುತ್ತಿದೆ. ಪಕ್ಷಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯಾರು ಯಾವ ತ್ಯಾಗ ಮಾಡುತ್ತಾರೋ, ಅಧಿಕಾರ ಗಳಿಸಿಕೊಳ್ಳುವ ನಿಟ್ಟಿನಲ್ಲಿ ಯಾರು ಯಾವ ದಾರಿ ಹಿಡಿಯುತ್ತಾರೋ ಎಂಬುದನ್ನು ಕಾದು ನೋಡಬೇಕು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا